Skip to content
Opens in a new window
Listen to this chapter • 3:09

[1] ಇಷಯನ ಬೇರಿನಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಹೊರಟ ಕೊಂಬೆಯು ಫಲಿಸುವುದು.

[2] ಆ ಅಂಕುರದ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು.

[3] ಆತನು ಯೆಹೋವನ ಭಯದಲ್ಲಿ ಆನಂದಿಸುವನು. ಆತನು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ. ಕಿವಿಗೆ ಬಿದ್ದಂತೆ ನಿರ್ಣಯಿಸುವುದಿಲ್ಲ.

[4] ಆದರೆ ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು. ಲೋಕದ ದೀನರಿಗಾಗಿ ಧರ್ಮವನ್ನು ನಿರ್ಣಯಿಸುವನು. ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ದಂಡಿಸುವನು. ದುಷ್ಟನನ್ನು ತನ್ನ ತುಟಿಗಳ ಉಸಿರಿನಿಂದ ಕೊಲ್ಲುವನು.

[5] ಧರ್ಮವೇ ಅವನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.

[6] ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆಮರಿಯೊಂದಿಗೆ ಮಲಗುವುದು. ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡೆಸುವುದು.

[7] ಹಸುವು ಕರಡಿಯ ಸಂಗಡ ಮೇಯುವುದು; ಅವುಗಳ ಮರಿಗಳು ಜೊತೆಯಾಗಿ ಮಲಗುವವು. ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು.

[8] ಮೊಲೆಕೂಸು ನಾಗರ ಹಾವಿನ ಹುತ್ತದ ಮೇಲೆ ಆಡುವುದು; ಮೊಲೆಬಿಟ್ಟ ಮಗುವು ಹಾವಿನ ಬಿಲದ ಒಳಗೆ ಕೈಹಾಕುವುದು.

[9] ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.

[10] ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಾಂತಿಯ ಸ್ಥಳವು ವೈಭವವುಳ್ಳದ್ದಾಗಿರುವುದು.

[11] ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೆಯ ಸಾರಿ ಕೈಹಾಕಿ, ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಸಮುದ್ರದ ಕರಾವಳಿ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.

[12] ಅವನು ಜನಾಂಗಗಳಲ್ಲಿ ಧ್ವಜವನ್ನೆತ್ತಿ, ಇಸ್ರಾಯೇಲರಲ್ಲಿ ಸೆರೆಗೆ ಒಯ್ಯಲ್ಪಟ್ಟವರನ್ನೂ, ಯೆಹೂದದಿಂದ ಚದರಿದವರನ್ನೂ ಭೂಮಿಯ ನಾಲ್ಕು ಕಡೆಗಳಿಂದಲೂ ಕೂಡಿಸುವನು.

[13] ಎಫ್ರಾಯೀಮಿನ ಹೊಟ್ಟೆಕಿಚ್ಚು ತೊಲಗುವುದು. ಯೆಹೂದವನ್ನು ವಿರೋಧಿಸುವವರು ನಿರ್ಮೂಲವಾಗುವರು. ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚುಪಡುವುದಿಲ್ಲ. ಯೆಹೂದವು ಎಫ್ರಾಯೀಮನ್ನು ವಿರೋಧಿಸುವುದಿಲ್ಲ.

[14] ಆದರೆ ಅವರು ಪಶ್ಚಿಮದಲ್ಲಿ ಫಿಲಿಷ್ಟಿಯರ ಭುಜದ ಮೇಲೆ ಎರಗುವರು. ಅವರು ಜೊತೆಯಾಗಿ ಪೂರ್ವದವರನ್ನು ಸೂರೆಮಾಡುವರು. ಎದೋಮಿನ ಮತ್ತು ಮೋವಾಬಿನ ಮೇಲೆ ಕೈಮಾಡುವರು. ಅಮ್ಮೋನಿಯರು ಅವರಿಗೆ ಅಧೀನರಾಗುವರು.

[15] ಆಗ ಯೆಹೋವನು ಐಗುಪ್ತ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ನಾಶಮಾಡುವನು. ಯೂಫ್ರೆಟಿಸ್ ನದಿಯ ಮೇಲೆ ಕೈ ಜಾಡಿಸಿ, ತನ್ನ ಬಿಸಿಗಾಳಿಯಿಂದ ಅದನ್ನು ಏಳು ನದಿಗಳನ್ನಾಗಿ ಒಡೆದು, ಜನರ ಪಾದರಕ್ಷೆಗಳು ನೆನೆಯದಂತೆ ಅವರನ್ನು ದಾಟಿಸುವನು.

[16] ಇದಲ್ಲದೆ ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಮಾರ್ಗವು ಹೇಗೆ ಸಿದ್ಧವಾಯಿತೋ ಹಾಗೆಯೇ ಅಶ್ಶೂರದಿಂದ, ತಪ್ಪಿಸಿಕೊಂಡು ಬರುವ ಆತನ ಉಳಿದ ಜನರಿಗೆ ಆತನ ರಾಜಮಾರ್ಗವು ಸಿದ್ಧವಾಗುವುದು.

ಯೆಶಾಯನು — Chapters