Skip to content
Opens in a new window
Listen to this chapter • 4:41

[1] ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನಾದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲರ ಅರಸನಾದ ಪೆಕಹ ಎಂಬುವವರು ಯೆರೂಸಲೇಮಿನ ಮೇಲೆ ದಂಡೆತ್ತಿ ಬಂದರು. ಆದರೆ ಅದನ್ನು ಜಯಿಸುವುದಕ್ಕೆ ಸಾಧ್ಯವಾಗಲಿಲ್ಲ.

[2] ಅರಾಮ್ಯರು ಎಫ್ರಾಯೀಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂಬ ಸುದ್ದಿಯು ದಾವೀದನ ಮನೆಗೆ ಮುಟ್ಟಿದಾಗ ಆಹಾಜನ ಮತ್ತು ಅವನ ಪ್ರಜೆಯ ಹೃದಯವು ಅರಣ್ಯದ ಗಾಳಿಯಿಂದ ವನವೃಕ್ಷಗಳು ಅಲ್ಲಾಡುವಂತೆ ನಡುಗಿದವು.

[3] ಆಗ ಯೆಹೋವನು ಯೆಶಾಯನಿಗೆ ಹೀಗೆ ಹೇಳಿದನು, “ನೀನು ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗಿ, ಅಗಸರ ಹೊಲದ ಕಡೆ ಹೋಗುವ ರಾಜಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯಲ್ಲಿ ಆಹಾಜನನ್ನು ಎದುರುಗೊಂಡು ಅವನಿಗೆ ಈ ಪ್ರಕಾರ ಹೇಳಬೇಕು,

[4] ‘ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ. ರೆಚೀನ, ಅರಾಮ್ಯರ, ಪೆಕಹ ರೆಮಲ್ಯನ ಮಗನಾದ ಪೆಕಹನ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.’”

[5] ಅರಾಮ್ಯರೂ, ಎಫ್ರಾಯೀಮ್ಯರೂ ಮತ್ತು ರೆಮಲ್ಯನ ಮಗನೂ ನಿನ್ನ ವಿಷಯವಾಗಿ ದುರಾಲೋಚನೆ ಮಾಡಿ,

[6] “ನಾವು ಯೆಹೂದದ ಮೇಲೆ ದಂಡೆತ್ತಿ ಹೆದರಿಸಿ, ಒಳಗೆ ನುಗ್ಗಿಕೊಂಡು ಹೋಗಿ, ಅದರಲ್ಲಿ ಟಬೇಲನ ಮಗನನ್ನು ಅರಸನನ್ನಾಗಿ ನೇಮಿಸಿಕೊಳ್ಳೋಣ” ಎಂದುಕೊಂಡಿದ್ದಾರೆ.

[7] ಕರ್ತನಾದ ಯೆಹೋವನು ಹೇಳುವುದೇನೆಂದರೆ, “ಇದು ನೆರವೇರುವುದಿಲ್ಲ; ಇದು ಆಗುವುದೇ ಇಲ್ಲ.

[8] ಏಕೆಂದರೆ ಅರಾಮಿಗೆ ಶಿರಸ್ಸು ದಮಸ್ಕ, ದಮಸ್ಕಕ್ಕೆ ಶಿರಸ್ಸು ರೆಚೀನ. ಅರುವತ್ತೈದು ವರ್ಷಗಳೊಳಗೆ ಎಫ್ರಾಯೀಮ್ಯರು ಭಂಗಪಟ್ಟು ಜನಾಂಗವೆನ್ನಿಸಿಕೊಳ್ಳರು.

[9] ಎಫ್ರಾಯೀಮಿಗೆ ಶಿರಸ್ಸು ಸಮಾರ್ಯ, ಸಮಾರ್ಯಕ್ಕೆ ಶಿರಸ್ಸು ರೆಮಲ್ಯನ ಮಗನು ತಾನೇ. ನೀವು ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ” ಎಂಬುದೇ.

[10] ಮತ್ತೆ ಯೆಹೋವನು ಆಹಾಜನಿಗೆ,

[11] “ನಿನ್ನ ದೇವರಾದ ಯೆಹೋವನಿಂದ ಒಂದು ಗುರುತನ್ನು ಕೇಳು. ಅದು ಪಾತಾಳದಷ್ಟು ಆಳದಲ್ಲಿದ್ದರೂ, ಮೇಲೆ ಎತ್ತರದಲ್ಲಿದ್ದರೂ ಅದನ್ನು ಕೇಳಿಕೋ” ಎಂದು ಹೇಳಿದನು.

[12] ಆಗ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ, ಇಲ್ಲವೆ ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದನು.

[13] ಅದಕ್ಕೆ ಯೆಶಾಯನು ಹೀಗೆ ಹೇಳಿದನು, “ದಾವೀದನ ಮನೆತನದವರೇ ಕೇಳಿರಿ, ಮನುಷ್ಯರನ್ನು ಬೇಸರಗೊಳಿಸುವುದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವರನ್ನು ಸಹ ಬೇಸರಗೊಳಿಸುವಿರಾ?

[14] ಆದಕಾರಣ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು.

[15] ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳಿವಳಿಕೆಯು ಬರುವ ತನಕ ಮೊಸರನ್ನು ಮತ್ತು ಜೇನುತುಪ್ಪವನ್ನು ತಿನ್ನುವನು.

[16] “ಏಕೆಂದರೆ ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವುದಕ್ಕಿಂತ ಮೊದಲೇ ನೀನು ಭಯಪಡುವ ದೇಶವನ್ನು ಅದರ ಇಬ್ಬರು ಅರಸರು ತ್ಯಜಿಸಿಬಿಡುವರು.

[17] ಯೆಹೋವನು ನಿನ್ನ ಮೇಲೆಯೂ, ನಿನ್ನ ಪ್ರಜೆಯ ಮೇಲೆಯೂ, ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾಯೀಮು ಅಗಲಿದಂದಿನಿಂದ ಅಂದರೆ ಅಶ್ಶೂರದ ಅರಸನ ಕಾಲದಿಂದಲೂ ಬಾರದೆ ಇದ್ದ ದುರ್ದಿನಗಳನ್ನು ಬರಮಾಡುವನು.”

[18] ಆ ಕಾಲದಲ್ಲಿ ಐಗುಪ್ತದ ನದಿಗಳ ಕಟ್ಟಕಡೆಯಿಂದ ಬರುವ ನೊಣಕ್ಕೂ, ಅಶ್ಶೂರ ದೇಶದ ದುಂಬಿಗಳಿಗೂ ಯೆಹೋವನು ಸಿಳ್ಳುಹಾಕುವನು.

[19] ಅವು ಬಂದು ಕಡಿದಾದ ಕಣಿವೆಗಳಲ್ಲಿಯೂ, ಬಂಡೆಗಳ ಸಂದುಗೊಂದುಗಳಲ್ಲಿಯೂ, ಎಲ್ಲಾ ಮುಳ್ಳು ಪೊದೆಗಳಲ್ಲಿಯೂ, ಗೋಮಾಳಗಳಲ್ಲಿಯೂ ಮುತ್ತಿಕೊಳ್ಳುವವು.

[20] ಆಗ ಕರ್ತನು ಯೂಫ್ರೆಟಿಸ್ ನದಿಯ ಆಚೆಗಿರುವ ಅಶ್ಶೂರದ ಅರಸನೆಂಬ ಬಾಡಿಗೆಯ ಕ್ಷೌರದ ಕತ್ತಿಯಿಂದ ಯೆಹೂದದ ತಲೆಯನ್ನೂ, ಕಾಲಿನ ಕೂದಲನ್ನೂ ಬೋಳಿಸುವನು ಹಾಗೂ ಗಡ್ಡವನ್ನೂ ಸಹ ತೆಗೆದುಬಿಡುವನು.

[21] ಆ ಕಾಲದಲ್ಲಿ ಮನುಷ್ಯನು ಒಂದು ಹಸುವಿನ ಕರುವನ್ನು ಮತ್ತು ಎರಡು ಕುರಿಗಳನ್ನು ಸಾಕುವನು.

[22] ಅವು ಸಮೃದ್ಧಿಯಾಗಿ ಹೆಚ್ಚು ಹಾಲನ್ನು ಕೊಡುವುದರಿಂದ ಅವನು ಮೊಸರನ್ನು ತಿನ್ನುವನು. ಏಕೆಂದರೆ ಆ ದೇಶದಲ್ಲಿ ಉಳಿದ ಪ್ರತಿಯೊಬ್ಬನೂ ಮೊಸರನ್ನು ಮತ್ತು ಜೇನುತುಪ್ಪವನ್ನು ತಿಂದು ಜೀವಿಸುವನು.

[23] ಆಗ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷಿಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶದಲ್ಲಿಯೂ, ಮುಳ್ಳು ಮತ್ತು ದತ್ತೂರಿಗಳಿಂದ ಮುಚ್ಚಿಕೊಂಡು ಹೋಗುವುದು.

[24] ದೇಶವೆಲ್ಲಾ ಮುಳ್ಳು ಮತ್ತು ದತ್ತೂರಿಗಳ ಪೊದೆಯಾಗಿರುವುದಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು.

[25] ಗುದ್ದಲಿಯಿಂದ ಅಗೆಯುತ್ತಿದ್ದ ಯಾವ ಗುಡ್ಡಕ್ಕೂ ನೀನು ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೇ ಇರುವಿ. ಆದರೆ ಅದು ದನಗಳನ್ನು ಬಿಡುವುದಕ್ಕೂ, ಕುರಿಗಳು ತುಳಿದಾಡುವುದಕ್ಕೂ ಗುರಿಯಾಗುವುದು.

ಯೆಶಾಯನು — Chapters