Skip to content
Opens in a new window
Listen to this chapter • 5:30

[1] “ನನ್ನ ಸಂತೈಸಿರಿ, ಸಂತೈಸಿರಿ” ಎಂದು ನಿಮ್ಮ ದೇವರು ಹೇಳುತ್ತಾನೆ.

[2] ಯೆರೂಸಲೇಮಿನ ಸಂಗಡ ಹೃದಯಂಗಮವಾಗಿ ಮಾತನಾಡಿರಿ; ಅದರ ಗಡು ತೀರಿತು, ವಿಧಿಸಿದ ದೋಷಫಲವೆಲ್ಲಾ ನೆರವೇರಿತು, ಅದರ ಎಲ್ಲಾ ಪಾಪಗಳಿಗೂ ಯೆಹೋವನ ಕೈಯಿಂದ ಎರಡರಷ್ಟು ಶಿಕ್ಷೆಯಾಯಿತು ಎಂದು ಆ ನಗರಿಗೆ ಕೂಗಿ ಹೇಳಿರಿ; ಇದೇ ನಿಮ್ಮ ದೇವರ ಆಜ್ಞೆ.

[3] ಇಗೋ ಒಂದು ವಾಣಿ! “ಅರಣ್ಯದಲ್ಲಿ ಯೆಹೋವನ ದಾರಿಯನ್ನು ಸರಿಪಡಿಸಿರಿ, ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಿಪಡಿಸಿರಿ”

[4] ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಮಲೆನಾಡು ಬಯಲು ಸೀಮೆಯಾಗುವುದು. ಒರಟಾದ ನೆಲವು ಸಮವಾಗುವುದು.

[5] ಯೆಹೋವನ ಮಹಿಮೆಯು ಗೋಚರವಾಗುವುದು. ಎಲ್ಲಾ ಮನುಷ್ಯರೂ ಒಟ್ಟಿಗೆ ಅದನ್ನು ಕಾಣುವರು, ಯೆಹೋವನ ಬಾಯೇ ಇದನ್ನು ನುಡಿದಿದೆ ಎಂದು ಒಬ್ಬನು ಕೂಗುತ್ತಾನೆ.

[6] ಆಹಾ, ವಾಣಿಯು ಮತ್ತೆ ಕೇಳಿಸಿ, “ಕೂಗು ಎನ್ನುತ್ತದೆ” ಅದಕ್ಕೆ ನಾನು, “ಏನು ಕೂಗಲಿ?” ಎಂದು ಕೇಳಲು, “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ.

[7] ಯೆಹೋವನ ಶ್ವಾಸವು ಅದರ ಮೇಲೆ ಬೀಸುವುದರಿಂದ ಹುಲ್ಲು ಒಣಗಿ ಹೋಗುವುದು, ಹೂವು ಬಾಡಿ ಹೋಗುವುದು. ನಿಶ್ಚಯವಾಗಿ ಜನರು ಹುಲ್ಲೇ ಹುಲ್ಲು!

[8] ಹುಲ್ಲು ಒಣಗಿ ಹೋಗುವುದು, ಹೂವು ಬಾಡಿ ಹೋಗುವುದು, ನಮ್ಮ ದೇವರ ಮಾತೋ ಸದಾಕಾಲವೂ ಇರುವುದು” ಎಂದು ಉತ್ತರವಾಯಿತು.

[9] ಶುಭಸಮಾಚಾರವನ್ನು ತಿಳಿಸಬಲ್ಲ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಸುವರ್ತಮಾನವನ್ನು ಪ್ರಕಟಿಸಬಲ್ಲ ಯೆರೂಸಲೇಮೇ, ನಿನ್ನ ಧ್ವನಿಯನ್ನು ಗಟ್ಟಿಯಾಗಿ ಎತ್ತು, ನಿರ್ಭಯವಾಗಿ ಎತ್ತಿ, ಯೆಹೂದದ ಪಟ್ಟಣಗಳಿಗೆ, “ಇಗೋ, ನಿಮ್ಮ ದೇವರು!

[10] ಇಗೋ, ಕರ್ತನಾದ ಯೆಹೋವನು ಶೂರನಾಗಿ ಬರುವನು, ತನ್ನ ಭುಜಬಲದಿಂದಲೇ ಆಳುವನು. ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದೆಯೇ ಇದೆ.

[11] ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗಪ್ಪಿಕೊಳ್ಳುವನು. ಹಾಲು ಕುಡಿಸುವ ಕುರಿಮರಿಗಳನ್ನು ಮೆಲ್ಲನೆ ನಡೆಸುವನು” ಎಂದು ಸಾರು.

[12] ಯಾರು ಸಾಗರ ಸಮುದ್ರಗಳನ್ನು ಬರಿದಾದ ಕೈಯಿಂದ ಅಳತೆಮಾಡಿದವನು? ಯಾರು ಆಕಾಶಮಂಡಲದ ವ್ಯಾಪ್ತಿಯನ್ನು ಗೇಣಿನಿಂದ ನಿರ್ಣಯಿಸಿದವನು? ಭೂಲೋಕದ ಮಣ್ಣನ್ನೆಲ್ಲಾ ಕೊಳಗಕ್ಕೆ ತುಂಬಿದವನು ಯಾರು? ಬೆಟ್ಟಗಳನ್ನು ತ್ರಾಸಿನಿಂದಲೂ, ಗುಡ್ಡಗಳನ್ನು ತಕ್ಕಡಿಯಿಂದಲೂ ತೂಗಿದವನು ಯಾರು?

[13] ಯೆಹೋವನ ಆತ್ಮಕ್ಕೆ ಯಾರು ವಿಧಿಯನ್ನು ನೇಮಿಸಿದನು? ಆಲೋಚನಾ ಕರ್ತನಾಗಿ ಆತನಿಗೆ ಉಪದೇಶಿಸಿದವರು ಯಾರು?

[14] ಆತನು ಯಾರ ಆಲೋಚನೆಯನ್ನು ಕೇಳಿದನು? ಯಾರು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾರು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕ ಮಾರ್ಗವನ್ನು ತೋರಿಸಿದವನು?

[15] ಆಹಾ, ಆತನ ಗಣನೆಯಲ್ಲಿ ಜನಾಂಗಗಳು ಕಪಿಲೆಯಿಂದ ಉದುರುವ ತುಂತುರಿನಂತೆಯೂ, ತಕ್ಕಡಿಯಲ್ಲಿನ ಧೂಳಿನ ಹಾಗೂ ಇರುತ್ತವೆ. ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಎತ್ತುತ್ತಾನೆ.

[16] (ಆತನಿಗರ್ಪಿಸತಕ್ಕ) ಹೋಮಕ್ಕೆ ಲೆಬನೋನಿನ ಬೆಂಕಿಯು ಸಾಲದು, ಅಲ್ಲಿನ ಪ್ರಾಣಿಗಳು ಸರ್ವಾಂಗಹೋಮಗಳಿಗೆ ಸಾಲದು.

[17] ಸಕಲ ಜನಾಂಗಗಳು ಆತನ ದೃಷ್ಟಿಯಲ್ಲಿ ಏನೂ ಇಲ್ಲದಂತಿವೆ, ಅವು ಆತನ ಎಣಿಕೆಯಲ್ಲಿ ಶುದ್ಧಶೂನ್ಯವೇ.

[18] ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?

[19] ವಿಗ್ರಹವಾದರೋ, ಶಿಲ್ಪಿಯು ಅದನ್ನು ಎರಕಹೊಯ್ಯುವನು, ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು.

[20] (ಇಂಥದನ್ನು ದೇವರಿಗೆ) ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು, ಹುಳಿತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ಮಾಡಿಸಲು ಶಿಲ್ಪಿಯನ್ನು ವಿಚಾರಿಸಿಕೊಳ್ಳುವನು.

[21] ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ಉಪದೇಶವಾಗಿ ಬಂದಿಲ್ಲವೋ? ಭೂಮಿಯು ನಿರ್ಮಾಣವಾದ ದಿನದಿಂದ ನೀವು ಗ್ರಹಿಸುತ್ತಿಲ್ಲವೋ?

[22] ಭೂಮಂಡಲ ನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ; ಆಕಾಶಮಂಡಲವನ್ನು ನಾರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿ ಕಟ್ಟಿದ್ದಾನೆ.

[23] ಪ್ರಭುಗಳನ್ನು ನಿರ್ನಾಮ ಮಾಡುತ್ತಾನೆ, ಭೂಪತಿಗಳನ್ನು ಶೂನ್ಯಗೊಳಿಸುತ್ತಾನೆ.

[24] ಇವರು ನೆಡಲ್ಪಟ್ಟ ಕೂಡಲೆ, ಬಿತ್ತಲ್ಪಟ್ಟ ಕ್ಷಣವೇ, ಇವರ ಸಂತಾನವು ಭೂಮಿಯಲ್ಲಿ ಬೇರೂರಿದಾಗಲೇ, ಆತನ ಶ್ವಾಸದಿಂದ ಬಾಡುವರು, ಬಿರುಗಾಳಿಯು ಇವರನ್ನು ಒಣಹುಲ್ಲಿನಂತೆ ಬಡಿದುಕೊಂಡು ಹೋಗುವುದು.

[25] ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ?” ಎಂದು ಸದಮಲಸ್ವಾಮಿಯು ಕೇಳುತ್ತಾನೆ.

[26] ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದುವರಿಸುತ್ತಾನೆ. ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ, ಮಹಾಶಕ್ತನೂ ಆಗಿರುವುದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.

[27] ಯಾಕೋಬೇ, ಇಸ್ರಾಯೇಲೇ, “ನನ್ನ ಮಾರ್ಗವು ಯೆಹೋವನಿಗೆ ಮರೆಯಾಗಿದೆ, ನನಗೆ ಸಿಕ್ಕಬೇಕಾದ ನ್ಯಾಯವು ನನ್ನ ದೇವರ ಲಕ್ಷ್ಯಕ್ಕೆ ಬಿದ್ದಿಲ್ಲವಲ್ಲಾ” ಎಂದು ಏಕೆ ಅಂದುಕೊಳ್ಳುತ್ತೀ?

[28] ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರ ದೇವರೂ, ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ. ಆತನು ದಣಿದು ಬಳಲುವುದಿಲ್ಲ, ಆತನ ವಿವೇಕವು ಪರಿಶೋಧನೆಗೆ ಅಗಮ್ಯ.

[29] ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ, ಬಲಹೀನನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ.

[30] ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು.

[31] ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಅವರು ಓಡಿ ದಣಿಯರು, ನಡೆದು ಬಳಲರು.

ಯೆಶಾಯನು — Chapters