Skip to content
Opens in a new window
Listen to this chapter • 3:51

[1] ಆಹಾ, ರಕ್ತವರ್ಣದ ಉಡುಪನ್ನಿಟ್ಟು, ಘನವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ, ಎದೋಮಿನ ಬೊಚ್ರದಿಂದ ಬರುವ ಇವನು ಯಾರು? ಸತ್ಯಾನುಸಾರವಾಗಿ ಮಾತನಾಡುವವನು, ರಕ್ಷಿಸಲು ಸಮರ್ಥನು ಆದ ನಾನೇ.

[2] ನಿನ್ನ ಉಡುಪು ಏಕೆ ಕೆಂಪಾಗಿದೆ, ನಿನ್ನ ವಸ್ತ್ರಗಳು ದ್ರಾಕ್ಷಿಯನ್ನು ತುಳಿಯುವವನ ಬಟ್ಟೆಯ ಹಾಗಿರುವುದು ಏಕೆ?

[3] ನಾನೊಬ್ಬನೇ ದ್ರಾಕ್ಷಿಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ ನನ್ನೊಂದಿಗಿರಲಿಲ್ಲ. ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ತುಳಿದುಹಾಕಿದೆನು; ಅವರ ಜೀವಸತ್ವ ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಲಿನ ಮಾಡಿಕೊಂಡೆನು.

[4] ಏಕೆಂದರೆ ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಸಿದ್ಧವಾಗಿತ್ತು, ನನ್ನ ಜನರನ್ನು ವಿಮೋಚಿಸುವ ವರ್ಷವು ಒದಗಿತ್ತು.

[5] ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಯಾವ ಬೆಂಬಲವೂ ಇಲ್ಲದ್ದನ್ನು ಕಂಡು ಸ್ತಬ್ಧನಾದೆನು; ಆಗ ನನ್ನ ಸ್ವಹಸ್ತವೇ ನನಗೆ ರಕ್ಷಣಾಸಾಧನವಾಯಿತು, ನನ್ನ ರೌದ್ರವೇ ನನಗೆ ಆಧಾರವಾಯಿತು.

[6] ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ, ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.

[7] ಯೆಹೋವನು ನಮಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನು ಮತ್ತು ಸ್ತುತ್ಯಕೃತ್ಯಗಳನ್ನು, ಆತನು ಕನಿಕರದಿಂದಲೂ, ಕೃಪಾತಿಶಯದಿಂದಲೂ ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನೂ ಪ್ರಸಿದ್ಧಿಪಡಿಸುವೆನು.

[8] “ನಿಜವಾಗಿ ಇವರು ನನ್ನ ಜನರು, ನನ್ನ ಮಕ್ಕಳು, ಮೋಸ ಮಾಡಲಾರರು” ಎಂದು ಆತನು ಅಂದುಕೊಂಡು ಅವರಿಗೆ ರಕ್ಷಕನಾದನು.

[9] ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ, ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.

[10] ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮವನ್ನು ದುಃಖಪಡಿಸಿದರು; ಆದುದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.

[11] ಆಗ ಆತನ ಜನರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗೆಂದರು, “ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ?

[12] ಅವರ ಮಧ್ಯದಲ್ಲಿ ತನ್ನ ಪವಿತ್ರಾತ್ಮವನ್ನಿರಿಸಿ, ಮೋಶೆಯ ಬಲಗೈಯೊಂದಿಗೆ ತನ್ನ ಘನಹಸ್ತವನ್ನೂ ಮುಂದುವರೆಸುತ್ತಾ ತನ್ನ ಹೆಸರು ಶಾಶ್ವತವಾಗಿರಬೇಕೆಂದು ಅವರೆದುರಿಗೆ ಜಲರಾಶಿಯನ್ನು ಇಬ್ಭಾಗ ಮಾಡಿದಾತನು ಎಲ್ಲಿ?

[13] ಸಾಗರದ ತಳಕ್ಕೆ ಅವರನ್ನು ನಡೆಸಿದಾತನು ಎಲ್ಲಿ? ಕುದುರೆಯು ಮೈದಾನದಲ್ಲಿ ನಡೆಯುವ ಪ್ರಕಾರ ಅವರು ಮುಗ್ಗರಿಸಲಿಲ್ಲ.

[14] ತಗ್ಗಿಗೆ ಇಳಿಯುವ ದನಗಳೋಪಾದಿಯಲ್ಲಿ ಯೆಹೋವನ ಆತ್ಮವು ಅವರನ್ನು ವಿಶ್ರಾಂತಿಯ ಸ್ಥಾನಕ್ಕೆ ಕರೆತಂದಿತು; ನಿನ್ನ ನಾಮವನ್ನು ಘನಪಡಿಸಿಕೊಳ್ಳುವುದಕ್ಕಾಗಿ ನಿನ್ನ ಜನರನ್ನು ಹೀಗೆ ನಡೆಸಿದಿ.

[15] ಆಕಾಶದಿಂದ ನೋಡು, ಪರಿಶುದ್ಧವೂ, ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು; ನಿನ್ನ ಉತ್ಸಾಹವೆಲ್ಲಿ, ನಿನ್ನ ಸಾಹಸ ಕಾರ್ಯಗಳೆಲ್ಲಿ? ನಿನ್ನ ಕರುಳ ಮರುಗಾಟವನ್ನೂ, ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿ ಹಿಡಿದಿದ್ದಿ.

[16] ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ; ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು; ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ.

[17] ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು.

[18] ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ ನಿನ್ನ ಸ್ವತ್ತಾದ ಪವಿತ್ರಸ್ಥಳವನ್ನು ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ಅದನ್ನು ತುಳಿದುಬಿಟ್ಟಿದ್ದಾರೆ.

[19] ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ, ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ.

ಯೆಶಾಯನು — Chapters