Skip to content
Opens in a new window
Listen to this chapter • 4:18

[1] ಇಗೋ, ಕರ್ತನೂ, ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಯೆರೂಸಲೇಮಿನಿಂದಲೂ, ಯೆಹೂದದಿಂದಲೂ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವೆನು.

[2] ಇದಲ್ಲದೆ ಶೂರ, ಯುದ್ಧಭಟರು, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ,

[3] ಪಂಚಾಶತಾಧಿಪತಿ, ಘನವಂತನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರೆಲ್ಲರನ್ನು ತೊಲಗಿಸಿಬಿಡುವೆನು.

[4] ನಾನು, “ಬಾಲಕರನ್ನು ಪ್ರಭುಗಳನ್ನಾಗಿ ಆ ದೇಶಕ್ಕೆ ನೇಮಿಸುವೆನು, ಬಾಲಕರು ಅದನ್ನು ಆಳುವರು.

[5] ಪ್ರಜೆಗಳು ಪರಸ್ಪರ ವಿರೋಧಿಗಳಾಗಿ, ಒಬ್ಬರನೊಬ್ಬರು ಹಿಂಸಿಸುವರು, ಬಾಲಕರು ಹಿರಿಯರ ಮೇಲೆಯೂ, ನೀಚನು ಘನವಂತನ ಜೊತೆಯಲ್ಲಿ ಸೊಕ್ಕಿನಿಂದ ವರ್ತಿಸುವರು.

[6] ಆ ದಿನದಲ್ಲಿ ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿದು, ‘ನಿನಗೆ ನಿಲುವಂಗಿ ಇದೆ. ನೀನು ನಮಗೆ ಒಡೆಯನಾಗಬೇಕು. ಹಾಳಾದ ಈ ಪಟ್ಟಣವು ನಿನ್ನ ಕೈಕೆಳಗಿರಲಿ ತಂದೆಯ ಮನೆಯೊಳಗೆ ಅಣ್ಣನನ್ನು ಬಲವಂತ ಮಾಡಲು ಅಣ್ಣನು ದೇಶದ ನಿರರ್ಥಕ ವ್ರಣವೈದ್ಯನಾಗುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ನಿರಾಕರಿಸುವನು.

[7] ಆ ದಿನದಲ್ಲಿ ಅವನು ಗಟ್ಟಿಯಾಗಿ ಕೂಗುತ್ತಾ, ‘ನಾನು ನಿಮ್ಮನ್ನು ಸ್ವಸ್ಥಪಡಿಸುವುದಿಲ್ಲ. ನನ್ನ ಮನೆಯಲ್ಲಿ ಅನ್ನವಾಗಲೀ, ವಸ್ತ್ರವಾಗಲೀ ಇಲ್ಲ: ಜನರನ್ನು ಆಳುವ ಒಡೆಯನನ್ನಾಗಿ ನನ್ನನ್ನು ಮಾಡಬೇಡಿರಿ’” ಎಂದು ಹೇಳುವನು.

[8] ಏಕೆಂದರೆ ಯೆರೂಸಲೇಮ್ ಹಾಳಾಯಿತು. ಯೆಹೂದವು ಬಿದ್ದುಹೋಯಿತು. ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತದಲ್ಲವೇ?

[9] ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಮರೆಮಾಡದೇ ಸೊದೋಮಿನವರಂತೆ ಪ್ರಕಟಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ.

[10] ನೀವು ನೀತಿವಂತರಿಗೆ, “ನಿಮಗೆ ಒಳ್ಳೆಯದಾಗಲಿ” ಎಂದು ಹೇಳಿರಿ, ಅವರು ತಮ್ಮ ಒಳ್ಳೆಯ ಫಲವನ್ನು ಅನುಭವಿಸುವರು.

[11] ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ದೊರಕುವುದು.

[12] ನನ್ನ ಪ್ರಜೆಗಳನ್ನು ಬಾಲಕರು ಬಾಧಿಸುವರು. ಸ್ತ್ರೀಯರು ಅವರನ್ನು ಆಳುವರು. ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆಯತಕ್ಕ ದಾರಿಯನ್ನು ಹಾಳುಮಾಡಿದ್ದಾರೆ.

[13] ಯೆಹೋವನು ವಾದಿಸುವುದಕ್ಕೂ, ಜನರಿಗೆ ನ್ಯಾಯತೀರಿಸುವುದಕ್ಕೂ ಎದ್ದು ನಿಂತಿದ್ದಾನೆ.

[14] ಯೆಹೋವನು ತನ್ನ ಜನರ ಹಿರಿಯರನ್ನು, ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು. ಏಕೆಂದರೆ, “ನೀವು ದ್ರಾಕ್ಷಿಯ ತೋಟವನ್ನು ನುಂಗಿಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.

[15] ನೀವು ನನ್ನ ಜನರನ್ನು ಜಜ್ಜಿ, ಬಡವರನ್ನು ದುಃಖದಿಂದ ಹಿಂಸಿಸುವುದೇಕೆ?” ಎಂದು ಕರ್ತನಾದ ಸೇನಾಧೀಶ್ವರ ಯೆಹೋವನು ವಾದಿಸುವನು.

[16] ಇದಲ್ಲದೆ ಯೆಹೋವನು ಹೀಗನ್ನುತ್ತಾನೆ, ಚೀಯೋನಿನ ಹೆಂಗಸರು ಅಹಂಕಾರವುಳ್ಳವರಾಗಿ, ಕತ್ತು ತೂಗುತ್ತಾ, ಕಣ್ಣುಗಳನ್ನು ತಿರುಗಿಸುತ್ತಾ, ವಯ್ಯಾರವಾಗಿ ಹೆಜ್ಜೆ ಇಡುತ್ತಾ, ಕಾಲು ಗೆಜ್ಜೆ ಜಣಜಣಿಸುತ್ತಾ ನಡೆಯುವವರಾಗಿರುವುದರಿಂದ,

[17] ಕರ್ತನಾದ ಯೆಹೋವನು ಚೀಯೋನಿನ ಪುತ್ರಿಯರ ನಡುನೆತ್ತಿಯನ್ನೂ ಹುಣ್ಣಿನಿಂದ ಬಾಧಿಸಿ, ಅವರ ಮಾನವನ್ನು ಬಯಲುಮಾಡುವನು.

[18] ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ,

[19] ಜುಮುಕಿ, ಬಳೆ, ಶಿರವಸ್ತ್ರ,

[20] ಮುಂಡಾಸು, ಕಾಲಗೆಜ್ಜೆ, ಡಾಬು, ಗಂಧದ ಭರಣಿ, ತೋಳಬಂಧಿ,

[21] ಮುದ್ರೆ ಉಂಗುರ, ಮೂಗುತಿ,

[22] ಹಬ್ಬದ ಉಡುಗೆ-ತೊಡುಗೆ, ಮೇಲಂಗಿ, ಶಾಲು, ಕೈಚೀಲ,

[23] ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ಹೊದಿಕೆ ಈ ಸೊಗಸಾದ ಭೂಷಣಗಳನ್ನೆಲ್ಲಾ ತೆಗೆದುಹಾಕುವನು.

[24] ಆಗ ಸುಗಂಧದ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ, ಅಂದವಾದ ಜಡೆಯ ಬದಲಾಗಿ ಬೋಳುತಲೆ, ನಡುವಿನ ಶಲ್ಯಕ್ಕೆ ಬದಲಾಗಿ ಗೋಣಿತಟ್ಟು, ಸೌಂದರ್ಯಕ್ಕೆ ಬದಲಾಗಿ ಕುರೂಪ, ಬೆತ್ತಲೆ ಉಂಟಾಗುವುದು.

[25] ಚೀಯೋನ್ ನಗರಿಯೇ, ನಿನ್ನ ವೀರರು ಖಡ್ಗದಿಂದ ಬಿದ್ದುಹೋಗುವರು. ನಿನ್ನ ಶೌರ್ಯವು ಯುದ್ಧದಲ್ಲಿ ಅಡಗಿ ಹೋಗುವುದು.

[26] ಅವಳ ಪುರದ್ವಾರಗಳಲ್ಲಿ ಪ್ರಲಾಪವೂ, ದುಃಖವೂ ತುಂಬಿರುವವು. ಅವಳು ಹಾಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.

ಯೆಶಾಯನು — Chapters