[1] ಆ ದಿನದಲ್ಲಿ ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನೂ, ಡೊಂಕಾಗಿ ಹರಿಯುವ ಸರ್ಪವಾದ ಲೆವಿಯಾತಾನವನ್ನೂ, ಮತ್ತು ಮಹಾನದಿಯಲ್ಲಿ ಘಟಸರ್ಪವನ್ನೂ ಕೊಂದುಹಾಕುವನು.
[2] ಆ ದಿನದಲ್ಲಿ ಫಲಭರಿತ ದ್ರಾಕ್ಷಿಯ ತೋಟದ ವಿಷಯವಾಗಿ ಹಾಡಿರಿ,
[3] “ಯೆಹೋವನಾದ ನಾನೇ ಅದನ್ನು ಕಾಯುತ್ತೇನೆ. ಪ್ರತಿ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ಹಗಲಿರುಳೂ ಕಾಯುತ್ತೇನೆ.
[4] ರೌದ್ರವು ನನ್ನಲ್ಲಿಲ್ಲ; ದತ್ತೂರಿ ಮತ್ತು ಮುಳ್ಳು ನನಗೆ ಎದುರುಬಿದ್ದರೆ, ಅವುಗಳಿಗೆ ವಿರುದ್ಧವಾಗಿ ಯುದ್ಧಮಾಡಿ, ಒಟ್ಟಿಗೆ ಸುಟ್ಟುಬಿಡುವೆನು.
[5] ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನ ಸಂಗಡ ಸಮಾಧಾನ ಮಾಡಿಕೊಳ್ಳಲಿ.
[6] ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು, ಇಸ್ರಾಯೇಲು ಹೂಬಿಟ್ಟು ಚಿಗುರುವುದು, ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವುದು.”
[7] ಯೆಹೋವನು ಬೇರೆ ದೇಶಗಳನ್ನು ಹೊಡೆದಂತೆ ತನ್ನ ಪ್ರಜೆಯಾದ ಯಾಕೋಬ ಮತ್ತು ಇಸ್ರಾಯೇಲರನ್ನು ಹೊಡೆದನೋ? ಇತರ ದೇಶದವರು ಸಂಹರಿಸಲ್ಪಟ್ಟಂತೆ ಯಾಕೋಬ ಮತ್ತು ಇಸ್ರಾಯೇಲರು ಸಂಹರಿಸಲ್ಪಟ್ಟರೋ?
[8] ನಿನ್ನ ಪ್ರಜೆಯನ್ನು ಕಳುಹಿಸಿಬಿಡುವದರ ಮೂಲಕ ಅದರೊಡನೆ ಮಿತಿಮೀರದೆ ಹೋರಾಡುತ್ತಿದ್ದೀ; ಮೂಡಣದಿಂದ ಗಾಳಿಯು ಬೀಸುವ ದಿನದಲ್ಲಿ ಅದರ ಕ್ರೂರ ಹೊಡೆತದಿಂದ ನಿನ್ನ ಜನರನ್ನು ಹೊರಗೆ ಕಳುಹಿಸಿದೆ.
[9] ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿ ಮಾಡಿ, ಅಶೇರವೆಂಬ ವಿಗ್ರಹಸ್ತಂಭಗಳನ್ನೂ, ಸೂರ್ಯಸ್ತಂಭಗಳನ್ನೂ ಪ್ರತಿಷ್ಠಿಸದೆ ನಾಶಮಾಡಿ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವಂತೆ ಮಾಡಿದನು ಮತ್ತು ಅವರ ಪಾಪ ಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದಾಗಿದೆ.
[10] ಕೋಟೆಕೊತ್ತಲದ ಪಟ್ಟಣವು ಹಾಳಾಗಿ, ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವುದು, ಅಲ್ಲಿನ ಚಿಗುರುಗಳನ್ನು ತಿಂದುಬಿಡುವುದು.
[11] ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿದುಹೋಗುವವು, ಹೆಂಗಸರು ಬಂದು ಅವುಗಳಿಗೆ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಆ ಪ್ರಜೆಯು ಬುದ್ಧಿಹೀನವಾದವರೇ. ಆದಕಾರಣ ಸೃಷ್ಟಿಸಿದಾತನು ಅವರಿಗೆ ಕರುಣೆ ತೋರಿಸುವುದಿಲ್ಲ, ನಿರ್ಮಿಸಿದಾತನು ಅವರಿಗೆ ದಯೆತೋರಿಸುವುದಿಲ್ಲ.
[12] ಇಸ್ರಾಯೇಲರೇ, ತುಂಬಿತುಳುಕುವ ಯೂಫ್ರೆಟಿಸ್ ನದಿಯಿಂದ ಐಗುಪ್ತ ದೇಶದ ನದಿಯವರೆಗೆ ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ; ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಆರಿಸುವನು.
[13] ಆ ದಿನದಲ್ಲಿ ದೊಡ್ಡ ಕೊಂಬನ್ನೂದಲು ಅಶ್ಶೂರ ದೇಶದಲ್ಲಿ ಹಾಳಾದವರೂ, ಐಗುಪ್ತದಲ್ಲಿ ದೇಶಭ್ರಷ್ಟರಾದವರೂ ಬಂದು ಪರಿಶುದ್ಧ ಪರ್ವತವಾದ ಯೆರೂಸಲೇಮಿನಲ್ಲಿ ಯೆಹೋವನನ್ನು ಆರಾಧಿಸುವರು.