[1] ಯೆಹೋವನೇ, ನೀನೇ ನನ್ನ ದೇವರು; ನೀನು ಸತ್ಯ ಪ್ರಾಮಾಣಿಕತೆಗಳನ್ನು ಅನುಸರಿಸಿ, ಆದಿ ಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಗಳನ್ನು ನಡೆಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿಸುವೆನು.
[2] ಏಕೆಂದರೆ ನೀನು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ, ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಲಾರದ ಹಾಳು ಊರನ್ನಾಗಿಯೂ ಮಾಡಿದ್ದಿ.
[3] ಆದಕಾರಣ ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವುದು, ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವುದು.
[4] ನೀನು ದೀನರಿಗೆ ಕೋಟೆಯು, ಇಕ್ಕಟ್ಟಿನಲ್ಲಿ ದಿಕಿಲ್ಲದವರಿಗೆ ರಕ್ಷಣಾದುರ್ಗವೂ, ಬಿಸಿಲಿಗೆ ನೆರಳೂ, ಭೀಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.
[5] ಮೋಡಗಳು ಒಣನೆಲದ ಕಾವನ್ನು ತಂಪಾಗಿಸುವಂತೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೆ ಕಡಿಮೆಯಾಗುವುದೋ ಹಾಗೆ ನಿನ್ನಿಂದ ಭೀಕರರ ಉತ್ಸಾಹ ಗಾನವು ಕ್ರಮೇಣ ನಿಂತುಹೋಗುವುದು.
[6] ಇದಲ್ಲದೆ, ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲ ಜನಾಂಗಗಳಿಗೆ ಸಾರವತ್ತಾದ ಕೊಬ್ಬಿದ ಮೃಷ್ಟಾನ್ನದಿಂದಲೂ, ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಸಿದ್ಧಮಾಡುವನು.
[7] ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ, ಸಕಲ ದೇಶದವರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವನು.
[8] ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರೆಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.
[9] ಆ ದಿನದಲ್ಲಿ ಜನರು, “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು” ಎಂದು ಹೇಳಿಕೊಳ್ಳುವರು.
[10] ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವುದು; ಮೋವಾಬ್ಯರೋ ತಿಪ್ಪೆಗುಂಡಿಯ ಕೆಸರಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾವಿದ್ದಲ್ಲೇ ತುಳಿಯಲ್ಪಡುವರು.
[11] ಈಜುವವನು ಕೈಯಾಡಿಸುವಂತೆ ಅವರು ಅದರಲ್ಲಿಯೇ ಕೈಯಾಡಿಸುವರು; ಆದರೆ ಯೆಹೋವನು ಅವರ ಗರ್ವವನ್ನೂ, ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.
[12] ದುರ್ಗಮವಾಗಿಯೂ, ಎತ್ತರವಾಗಿಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲ ಸಮಮಾಡಿ ಧೂಳಿಗೆ ತರುವನು.