[1] “ವಿಜ್ಞಾಪಿಸಿಕೊಳ್ಳದವರಿಗೂ ಪ್ರಸನ್ನನಾಗಿದ್ದೆನು, ನನ್ನನ್ನು ಹುಡುಕದವರಿಗೂ ಸಿಕ್ಕಿದೆನು, ನನ್ನ ನಾಮವನ್ನೆತ್ತಿ ಪ್ರಾರ್ಥಿಸದ ಜನಾಂಗಕ್ಕೂ, ‘ಇಗೋ, ನಾನಿದ್ದೇನೆ! ನಾನಿದ್ದೇನೆ’ ಎನ್ನುತ್ತಿದ್ದೆನು.
[2] ನನ್ನನ್ನು ತೊರೆದು, ಮನಸ್ಸು ಬಂದ ಹಾಗೆ ದುರ್ಮಾರ್ಗದಲ್ಲಿ ನಡೆಯುವ ಜನರನ್ನು ನಾನು ದಿನವೆಲ್ಲಾ ಕೈಚಾಚಿ ಕರೆದೆನು.
[3] ಈ ಜನರು ವನಗಳಲ್ಲಿ ಯಜ್ಞ ಮಾಡುತ್ತಾ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪಹಾಕುತ್ತಾ ನನ್ನನ್ನು ಯಾವಾಗಲೂ ಕೆಣಕುತ್ತಾರೆ.
[4] ಗೋರಿಗಳಲ್ಲಿ ಕುಳಿತುಕೊಳ್ಳುತ್ತಾ, ಗುಪ್ತಸ್ಥಳಗಳಲ್ಲಿ ರಾತ್ರಿ ಕಳೆಯುತ್ತಾ, ಹಂದಿಯ ಮಾಂಸವನ್ನು ತಿನ್ನುತ್ತಾ, ಅಸಹ್ಯ ಪದಾರ್ಥಗಳ ಸಾರನ್ನು ತಮ್ಮ ಪಾತ್ರೆಗಳಲ್ಲಿ ಬಡಿಸಿಕೊಳ್ಳುತ್ತಾ ಅಲ್ಲಿ ನಿಂತಿರುತ್ತಾರೆ.
[5] ಅವರು, ‘ಹತ್ತಿರ ಬರಬೇಡ, ನಾನು ಮಡಿವಂತನು, ನೀನು ಸೇರತಕ್ಕವನಲ್ಲ’ ಎನ್ನುತ್ತಾ, ಅಂತು ಪ್ರತಿನಿತ್ಯವೂ ಮುಖದೆದುರಿಗೆ ನನ್ನನ್ನು ಕೆಣಕುತ್ತಾ, ನನ್ನ ಮೂಗಿಗೆ ದಿನವೆಲ್ಲಾ ಉರಿಯುವ ಬೆಂಕಿಯ ಹೊಗೆಯಾಗಿದ್ದಾರೆ.
[6] ಇಗೋ, ಇದೆಲ್ಲಾ ಶಾಸನವಾಗಿ ನನ್ನ ಕಣ್ಣೆದುರಿಗಿದೆ, ನಾನು ಮುಯ್ಯಿ ತೀರಿಸುವ ತನಕ ಸುಮ್ಮನಿರಲಾರೆನು; ಅದರ ಪ್ರತಿಫಲವನ್ನು ಇವರ ಮಡಿಲಿಗೆ ಹಾಕುವೆನು;
[7] ಇವರೂ ಇವರ ಪೂರ್ವಿಕರೂ ಬೆಟ್ಟಗುಡ್ಡಗಳಲ್ಲಿ ಧೂಪಹಾಕಿ, ನನ್ನನ್ನು ಹೀನೈಸಿ ನಡೆಸಿದ ಅಪರಾಧ ಕಾರ್ಯದ ಫಲವನ್ನು ಅದರ ಅಳತೆಗೆ ಸರಿಯಾಗಿ ಇವರ ಮಡಿಲಿಗೆ ಸುರಿಯುವೆನು” ಎಂದು ಯೆಹೋವನು ಹೇಳುತ್ತಾನೆ.
[8] ಯೆಹೋವನು ಹೀಗನ್ನುತ್ತಾನೆ, “ರಸ ದೊರೆಯಬಹುದಾದ ದ್ರಾಕ್ಷಿಯ ಗೊಂಚಲನ್ನು ಒಬ್ಬನು ನೋಡಿ, ‘ಹಾಳುಮಾಡಬೇಡ, ಅದರಲ್ಲಿ ಪ್ರಯೋಜನವಿದೆ’ ಎನ್ನುವಂತೆ, ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು, ಇವರನ್ನೆಲ್ಲಾ ಹಾಳುಮಾಡಬಾರದು ಎಂದು ಅಂದುಕೊಳ್ಳುವೆನು,
[9] ಯಾಕೋಬಿನಿಂದ ಸಂತಾನವನ್ನು ಹುಟ್ಟಿಸುವೆನು, ಯೆಹೂದ ವಂಶದಿಂದ ನನ್ನ ಪರ್ವತಗಳ ಸ್ವತ್ತಿನ ಸಂತತಿಯನ್ನು ಬರಮಾಡುವೆನು, ನನ್ನ ಆಪ್ತರು ಆ ಸ್ವತ್ತನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು.
[10] ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ, ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು.
[11] ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಏರ್ಪಡಿಸಿ, ಗತಿದಾಯಕ ದೇವತೆಗೆ ಮದ್ಯವನ್ನು ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗ ಮಾಡುವೆನು.
[12] ನೀವೆಲ್ಲರೂ ಕತ್ತಿಗೆ ಬೀಳುವಿರಿ, ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ, ಏಕೆಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಿದರೂ ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡಿರಿ.”
[13] ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ.
[14] ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು, ಹೃದಯದ ಯಾತನೆಯಿಂದ ಗೋಳಾಡುವಿರಿ.
[15] ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವುದು; ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು.
[16] ನಿಮ್ಮ ಪೂರ್ವದ ಕಷ್ಟಗಳು ಇನ್ನು ನನ್ನ ಕಣ್ಣಿಗೆ ಬೀಳದೆ ಮರೆತು ಹೋಗಿರುವುದರಿಂದ ಲೋಕದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವ ಪ್ರತಿಯೊಬ್ಬನೂ ಸತ್ಯಸಂಧನಾದ ದೇವರ ಹೆಸರಿನಿಂದ ಆಶೀರ್ವದಿಸಿಕೊಳ್ಳುವನು; ಲೋಕದಲ್ಲಿ ಆಣೆಯಿಡುವ ಪ್ರತಿಯೊಬ್ಬನೂ ಸತ್ಯವಂತನಾದ ದೇವರ ಮೇಲೆ ಆಣೆಯಿಡುವನು.
[17] “ಇಗೋ, ನೂತನ ಆಕಾಶಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.
[18] ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ, ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು.
[19] ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರಲ್ಲಿ ಹರ್ಷಗೊಳ್ಳುವೆನು. ರೋದನ ಶಬ್ದವೂ, ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು.
[20] ಕೆಲವು ದಿನ ಮಾತ್ರ ಬದುಕತಕ್ಕ ಕೂಸಾಗಲಿ, ವೃದ್ಧನಾಗಲಿ ಅಲ್ಲಿ ಇರುವುದಿಲ್ಲ; ಯುವಕನು ನೂರು ವರ್ಷದೊಳಗೆ ಸಾಯನು, ಪಾಪಿಷ್ಠನಿಗೂ ನೂರು ವರ್ಷದೊಳಗೆ ಶಾಪ ತಗಲದು.
[21] ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ದ್ರಾಕ್ಷಿಯ ತೋಟಗಳ ಫಲವನ್ನು ತಾವೇ ಅನುಭವಿಸುವರು.
[22] ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಸಂಪೂರ್ಣವಾಗಿ ಅನುಭವಿಸುವರು.
[23] ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.
[24] ಆಗ ಅವರು ಬೇಡುವುದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು.
[25] ತೋಳವು ಕುರಿಯ ಸಂಗಡ ಮೇಯುವುದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು, ಹಾವಿಗೆ ಧೂಳೇ ಆಹಾರವಾಗುವುದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ” ಎಂದು ಯೆಹೋವನು ಅನ್ನುತ್ತಾನೆ.