Skip to content
Opens in a new window
Listen to this chapter • 5:02

[1] ಅಯ್ಯೋ, ಅರೀಯೇಲೇ, ಅರೀಯೇಲೇ ದಾವೀದನು ಸೈನ್ಯಸಮೇತವಾಗಿ ವಾಸಿಸಿದ ಪಟ್ಟಣವೇ, ನಿನ್ನ ಗತಿಯನ್ನು ಏನು ಹೇಳಲಿ! ಈ ವರ್ಷಕ್ಕೆ ಮುಂದಿನ ವರ್ಷವನ್ನು ಸೇರಿಸಿರಿ; ಹಬ್ಬಗಳು ಹೆಚ್ಚಾಗಿ ಬರಲಿ.

[2] ಆ ಮೇಲೆ ನಾನು ಅರೀಯೇಲನ್ನು ಬಾಧಿಸುವೆನು; ಅರಚಾಟ ಕಿರಿಚಾಟಗಳಿಂದ ತುಂಬುವುದು; ಆ ಪಟ್ಟಣವು ನನಗೆ ಅರೀಯೇಲಾಗಿಯೇ ಪರಿಣಮಿಸುವುದು.

[3] ನಾನು ನಿನ್ನ ಸುತ್ತಲೂ ದಂಡಿಳಿಸಿ, ನಿನಗೆ ವಿರುದ್ಧವಾಗಿ ಕೋಟೆಗಳನ್ನು ಕಟ್ಟಿ, ದಿಬ್ಬಹಾಕಿ ನಿನ್ನನ್ನು ಮುತ್ತುವೆನು.

[4] ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು, ನಿನ್ನ ಧ್ವನಿಯು ಪ್ರೇತದ ಧ್ವನಿಯಂತೆ ನೆಲದೊಳಗಿಂದ ಬರುವುದು, ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.

[5] ಗುಂಪು ಗುಂಪಾಗಿ ಕೂಡಿರುವ ನಿನ್ನ ಶತ್ರುಗಳು ಸೂಕ್ಷ್ಮವಾದ ಧೂಳಿನಂತೆಯೂ, ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನಂತೆಯೂ ಇರುವರು; ಅವರು ಕ್ಷಣ ಮಾತ್ರದಲ್ಲಿ ಲಯಹೊಂದುವರು.

[6] ಸೇನಾಧೀಶ್ವರನಾದ ಯೆಹೋವನು ಗುಡುಗು, ಭೂಕಂಪ, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಯ ಜ್ವಾಲೆ ಇವುಗಳ ಮೂಲಕ ನಿನ್ನನ್ನು ಶಿಕ್ಷಿಸುವನು.

[7] ಅರೀಯೇಲಿನ ಮೇಲೆ ಹೋರಾಡಿ, ಅದಕ್ಕೂ ಅದರ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ, ಬಾಧಿಸುವ ಸಕಲ ಜನಾಂಗಗಳ ಗುಂಪು, ಕನಸಿನಂತೆ, ರಾತ್ರಿಯ ಸ್ವಪ್ನದ ಹಾಗೆ ಮಾಯವಾಗುವುದು.

[8] ಹಸಿದವನು ಕನಸು ಕಂಡು ಆಹಾ, ತಿನ್ನುತ್ತಿದ್ದೇನೆ ಎಂದುಕೊಂಡಂತಾಗುವುದು; ಎಚ್ಚೆತ್ತಾಗ ಅವನ ಹೊಟ್ಟೆ ಬರಿದಾಗಿಯೇ ಇರುವುದು. ಬಾಯಾರಿದವನು ಸ್ವಪ್ನದಲ್ಲಿ ಇಗೋ ನೀರು ಕುಡಿಯುತ್ತಿದ್ದೇನೆ ಎಂದುಕೊಂಡಂತಾಗುವುದು; ನಿದ್ರೆಯಿಂದ ಎಚ್ಚೆತ್ತಾಗ ಬಲಹೀನನಾಗಿದ್ದು, ಬಳಲಿ ನೀರನ್ನು ಬಯಸುತ್ತಾ ಬಾಯಾರಿಕೆಯಿಂದ ಇರುವನು. ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲ ಜನಾಂಗಗಳಿಗೂ ಇದೇ ಗತಿಯಾಗುವುದು.

[9] ನಿಮ್ಮನ್ನು ನೀವೇ ಬೆರಗು ಮಾಡಿಕೊಂಡು ಬೆರಗಾಗಿರಿ, ಕುರುಡು ಮಾಡಿಕೊಂಡು ಕುರುಡರಾಗಿರಿ! ಇವರು ಅಮಲೇರಿದ್ದಾರೆ, ದ್ರಾಕ್ಷಾರಸದಿಂದಲ್ಲ; ಓಲಾಡುತ್ತಾರೆ ಮದ್ಯದಿಂದಲ್ಲ.

[10] ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ, ಪ್ರವಾದಿಗಳ ಕಣ್ಣುಗಳನ್ನು ಮುಚ್ಚಿ, ದಿವ್ಯದರ್ಶಿಗಳ ತಲೆಗಳಿಗೆ ಮುಸುಕು ಹಾಕಿದ್ದಾನೆ.

[11] ದೈವದರ್ಶನವೆಲ್ಲಾ ಮುದ್ರೆಹಾಕಿದ ಶಾಸ್ತ್ರದ ಮಾತಿನ ಹಾಗಿದೆ; ಅದನ್ನು ಅಕ್ಷರ ಬಲ್ಲವನಿಗೆ, “ಇದನ್ನು ಓದು” ಎಂದು ಹೇಳಿದರೆ ಅವನು, “ಮುದ್ರೆ ಹಾಕಿದೆಯಲ್ಲಾ, ಆಗುವುದಿಲ್ಲ” ಎಂದು ಹೇಳುವನು.

[12] ಅಕ್ಷರವಿಲ್ಲದವನಿಗೆ, “ಇದನ್ನು ಓದು” ಎಂದು ಹೇಳಿದರೆ ಅವನು, “ನನಗೆ ಓದಲು ಬರುವುದಿಲ್ಲ” ಎಂದು ಹೇಳುವನು.

[13] ಯೆಹೋವನು ಹೇಳುವುದೇನೆಂದರೆ, “ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ, ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ, ಮನಸ್ಸನ್ನೋ ದೂರಮಾಡಿಕೊಂಡು, ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯಭಕ್ತಿಯನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.

[14] ಹೀಗಿರುವುದರಿಂದ ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ, ಅದ್ಭುತವೂ ಆದ ಕಾರ್ಯವನ್ನು ಇನ್ನು ಮಾಡುವೆನು; ಇವರ ಜ್ಞಾನಿಗಳ ಜ್ಞಾನವು ಅಳಿಯುವುದು, ವಿವೇಕಿಗಳ ವಿವೇಕವು ಅಡಗುವುದು” ಎಂದು ಹೇಳಿದನು.

[15] ತಮ್ಮ ಆಲೋಚನೆಯನ್ನು ಯೆಹೋವನಿಗೆ ಮರೆಮಾಡುವುದಕ್ಕೆ, ಅಗಾಧಕ್ಕೆ ಹೋಗಿ, “ನಮ್ಮನ್ನು ಯಾರು ನೋಡುವರು? ಯಾರು ತಿಳಿದಾರು?” ಅಂದುಕೊಂಡು ಕತ್ತಲಲ್ಲೇ ತಮ್ಮ ಕೆಲಸಗಳನ್ನು ನಡೆಸುವವರ ಗತಿಯನ್ನು ಏನು ಹೇಳಲಿ!

[16] ಅಯ್ಯೋ, ನೀವು ಎಂಥಾ ಮೂರ್ಖರು! ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು. ಕೆಲಸ ಮಾಡಿದವನಿಗೆ ಮಾಡಲ್ಪಟ್ಟದ್ದು, “ಆತನು ಕೆಲಸ ಮಾಡಲಿಲ್ಲ” ಎಂದು ಹೇಳುವುದೋ? ಇಲ್ಲವೇ, ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸಲ್ಪಟ್ಟದ್ದು, “ಆತನಿಗೆ ವಿವೇಕವಿಲ್ಲ” ಎಂದು ಹೇಳುವುದೋ?

[17] ಇನ್ನು ಸ್ವಲ್ಪ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು, ಈಗಿನ ತೋಟವು ಅರಣ್ಯವಾಗಿ ಕಾಣಿಸುವುದು.

[18] ಆ ದಿನದಲ್ಲಿ ಕಿವುಡರು ಶಾಸ್ತ್ರದ ಮಾತುಗಳನ್ನು ಕೇಳುವರು ಮತ್ತು ಕುರುಡರ ಕಣ್ಣುಗಳು ಕತ್ತಲೆಯೊಳಗೂ ಕಾಣುವುದು.

[19] ದೀನರು ಯೆಹೋವನಲ್ಲಿ ಹೆಚ್ಚಾಗಿ ಆನಂದಿಸುವರು, ಬಡವರು ಇಸ್ರಾಯೇಲರ ಸದಮಲಸ್ವಾಮಿಯಲ್ಲಿ ಉಲ್ಲಾಸಿಸುವರು.

[20] ಏಕೆಂದರೆ ಭಯಂಕರರು ನಿಶ್ಶೇಷವಾಗುವರು, ಧರ್ಮನಿಂದಕರು ನಿರ್ನಾಮವಾಗುವರು.

[21] ಸುಳ್ಳುಸಾಕ್ಷಿಯಿಂದ ತಪ್ಪು ಹೊರಿಸುವವರೂ, ಚಾವಡಿಯಲ್ಲಿ ದೋಷವನ್ನು ಖಂಡಿಸುವವನಿಗೆ ಉರುಲೊಡ್ಡುವವರೂ, ನ್ಯಾಯವಂತನ ನ್ಯಾಯವನ್ನು ಸುಮ್ಮನೆ ತಪ್ಪಿಸುವವರೂ ಆಗಿರುವ ಅಧರ್ಮನಿರತರೆಲ್ಲರೂ ನಿರ್ಮೂಲವಾಗುವರು.

[22] ಹೀಗಿರಲು ಅಬ್ರಹಾಮನನ್ನು ಉದ್ಧರಿಸಿದ ಯೆಹೋವನು ಯಾಕೋಬನ ಮನೆತನದ ವಿಷಯವಾಗಿ, “ಯಾಕೋಬ್ಯರು, ಇನ್ನು ನಾಚಿಕೆಪಡುವುದಿಲ್ಲ, ಅವರ ಮುಖವು ಇನ್ನು ಕಳೆಗುಂದುವುದಿಲ್ಲ.

[23] ಯಾಕೋಬ ವಂಶದವರು ತಮ್ಮ ಮಧ್ಯದಲ್ಲಿ ನಾನು ನಡೆಸುವ ಕೆಲಸವನ್ನು ನೋಡಿ, ನನ್ನ ನಾಮವೇ ಆರಾಧನೆಗೆ ಅರ್ಹವೆಂದು ಪ್ರತಿಷ್ಠಿಸುವರು; ಹೌದು, ಯಾಕೋಬ್ಯರ ಸದಮಲಸ್ವಾಮಿಯನ್ನು ಪ್ರತಿಷ್ಠೆಪಡಿಸಿ ಇಸ್ರಾಯೇಲರ ದೇವರಿಗೆ ನಡುಗುವರು.

[24] ತಪ್ಪಿದ ಹೃದಯವುಳ್ಳವರೆಲ್ಲರೂ ವಿವೇಕಿಗಳಾಗುವರು, ಗುಣಗುಟ್ಟುವವರು ಉಪದೇಶವನ್ನು ಕೇಳಿ ನಡೆಯುವರು” ಎಂದು ಹೇಳುತ್ತಾನೆ.

ಯೆಶಾಯನು — Chapters