[1] ದಿವ್ಯದರ್ಶನದ ಕಣಿವೆಯ ವಿಷಯವಾದ ದೈವೋಕ್ತಿ. ಯಾವ ಕಾರಣಕ್ಕಾಗಿ ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದರು?
[2] ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ; ನಿನ್ನಲ್ಲಿ ಹತರಾದವರು ಕತ್ತಿಯಿಂದ ಸಾಯಲಿಲ್ಲ, ಅವರು ಯುದ್ಧದಲ್ಲಿ ಸತ್ತವರಲ್ಲ.
[3] ನಿನ್ನ ಅಧಿಕಾರಿಗಳು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ; ದೂರದಿಂದ ಓಡುತ್ತಾ ಶತ್ರುವಿಗೆ ಸಿಕ್ಕಿದ ನಿನ್ನ ಜನರೆಲ್ಲರೊಂದಿಗೆ ಕಟ್ಟುಬಿದ್ದಿದ್ದಾರೆ.
[4] ಹೀಗಿರಲು, “ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ, ಬಹು ಸಂಕಟದಿಂದ ನಾನು ಅಳುವೆನು, ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.
[5] ಸೇನಾಧೀಶ್ವರನಾದ ಯೆಹೋವನೆಂಬ ಕರ್ತನಿಂದ ದಿವ್ಯದರ್ಶನದ ಕಣಿವೆಗೆ ಗಲಿಬಿಲಿಯ ದಿನ, ತುಳಿದಾಟದ ದಿನ, ಭ್ರಾಂತಿಯ ದಿನ, ಕೋಟೆಯು ಒಡೆದು ಹೋಗಲು, ಕೂಗು ಬೆಟ್ಟವನ್ನು ಮುಟ್ಟುವ ದಿನ ಬಂದಿದೆ.
[6] ಏಲಾಮು ಕುದರೆಗಳ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆಗೆದರು.
[7] ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿದವು, ರಾಹುತರು ಬಾಗಿಲಿನ ಹತ್ತಿರ ವ್ಯೂಹಕಟ್ಟಿದರು.”
[8] ಅವನು ಯೆಹೂದದ ರಕ್ಷಣೆಯ ಮುಸುಕನ್ನು ತೆಗೆದಿದ್ದಾನೆ. ಆ ದಿನದಲ್ಲಿ (ಲೆಬನೋನಿನ) ತೋಪು ಎನಿಸಿಕೊಳ್ಳುವ ಮಂದಿರದಲ್ಲಿನ ಆಯುಧಗಳ ಕಡೆಗೆ ದೃಷ್ಟಿಹಾಕಿದಿರಿ.
[9] ದಾವೀದನ ಪಟ್ಟಣದ ಕೋಟೆಯ ಒಡಕುಗಳು ಬಹಳವೆಂದು ನೋಡಿದಿರಿ; ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.
[10] ಯೆರೂಸಲೇಮಿನ ಮನೆಗಳನ್ನು ಲೆಕ್ಕಿಸಿ, ಪೌಳಿಗೋಡೆಯನ್ನು ಭದ್ರಪಡಿಸುವುದಕ್ಕೆ ಮನೆಗಳನ್ನು ಒಡೆದು ಹಾಕಿಬಿಟ್ಟಿರಿ.
[11] ಎರಡು ಗೋಡೆಗಳ ನಡುವೆ ಹಳೆಯ ಕೊಳದ ನೀರಿಗಾಗಿ ತೊಟ್ಟಿಯನ್ನು ಮಾಡಿದ್ದೀರಿ; ಆದರೆ ಇದನ್ನೆಲ್ಲಾ ನಡೆಸಿದಾತನ ಕಡೆಗೆ ನೀವು ದೃಷ್ಟಿಯಿಡಲಿಲ್ಲ, ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಿಲ್ಲ.
[12] ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು, ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು. ಕಣ್ಣೀರು ಸುರಿಸಿ, ಗೋಳಾಡಿರಿ, ತಲೆಬೋಳಿಸಿಕೊಳ್ಳಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂಬುದೇ.
[13] ಆದರೆ ಇಗೋ, ಉಲ್ಲಾಸ, ಹರ್ಷ, ಕುರಿದನಗಳನ್ನು ಕಡಿಯುವುದು, ಮಾಂಸ ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ಇಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.
[14] ಹೀಗಿರಲು, ಸೇನಾಧೀಶ್ವರನಾದ ಯೆಹೋವನು ನನ್ನ ಕಿವಿಗಳಲ್ಲಿ ಪ್ರಕಟಿಸಿದ್ದೇನೆಂದರೆ, “ನೀವು ಸಾಯುವ ತನಕ ಈ ಅಧರ್ಮಕ್ಕೆ ಪ್ರಾಯಶ್ಚಿತ್ತವು ಇಲ್ಲವೇ ಇಲ್ಲ ಎಂದು ಸೇನಾಧೀಶ್ವರನಾಗಿರುವ ಯೆಹೋವನೆಂಬ ಕರ್ತನಾದ ನಾನು ನುಡಿದಿದ್ದೇನೆ” ಎಂಬುದೇ.
[15] ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ನುಡಿದಿದ್ದಾನೆ, “ಹೋಗು, ಅರಮನೆಯ ಮೇಲ್ವಿಚಾರಕನಾದ ಶೆಬ್ನನೆಂಬ ಈ ಅಧ್ಯಕ್ಷನ ಬಳಿಗೆ ಹೋಗಿ ಅವನಿಗೆ ಹೇಳತಕ್ಕದ್ದೇನೆಂದರೆ,
[16] ‘ಇಲ್ಲಿ ನಿನಗೇನು ಕೆಲಸ? ಇಲ್ಲಿ ನಿನಗಾಗಿ ಸಮಾಧಿಯನ್ನು ತೋಡಿಸಿಕೊಂಡಿರುವ ನೀನು ಯಾರು? ಉನ್ನತದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ, ಬಂಡೆಯನ್ನು ಕೆತ್ತಿಸಿ, ನಿನಗಾಗಿ ವಿಶ್ರಾಂತಿಯ ಸ್ಥಳವನ್ನು ತೋಡಿಸಿದಿ ಅಲ್ಲವೇ?’”
[17] ಇಗೋ, ಬಲಿಷ್ಠ ಮನುಷ್ಯನಾದ ನಿನ್ನನ್ನು ಯೆಹೋವನು ಎಸೆಯುವನು, ನಿನ್ನನ್ನು ಕೆಳಗೆ ಎಸೆಯುವನು, ನಿನ್ನನ್ನು ಗಟ್ಟಿಯಾಗಿ ಹಿಡಿಯುವನು.
[18] ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು.
[19] ಯೆಹೋವನಾದ ನಾನು, “ನಿನ್ನನ್ನು ಉದ್ಯೋಗದಿಂದ ತಳ್ಳಿಬಿಡುವೆನು, ನಿನ್ನ ಪದವಿಯಿಂದ ನಿನ್ನನ್ನು ಎಳೆದು ಹಾಕುವೆನು.
[20] ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆಯುವೆನು.
[21] ನಿನ್ನ ನಿಲುವಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟಿ, ನಿನ್ನ ಅಧಿಕಾರವನ್ನು ಅವನ ಕೈಗೆ ಕೊಡುವೆನು; ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಮನೆತನದವರಿಗೂ ತಂದೆಯಾಗುವನು.
[22] ನಾನು ದಾವೀದನ ಮನೆಯ ಬೀಗದ ಕೈಯನ್ನು ನಿನ್ನ ಹೊಣೆಗಾರಿಕೆಗೆ ಕೊಡುವೆನು; ಅವನು ತೆರೆದರೆ ಯಾರೂ ಮುಚ್ಚರು, ಮುಚ್ಚಿದರೆ ಯಾರೂ ತೆರೆಯರು.
[23] ಗಟ್ಟಿಯಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ವಂಶದವರಿಗೆ ವೈಭವವುಳ್ಳ ಸಿಂಹಾಸನವಾಗಿರುವನು.
[24] ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ವೈಭವವನ್ನು ಅವರು ಆ ದಿನದಲ್ಲಿ ಅವನಿಗೆ ವಹಿಸುವರು” ಎಂಬುದೇ.
[25] ಸೇನಾಧೀಶ್ವರನಾದ ಯೆಹೋವನು ಹೀಗೆ ನುಡಿಯುತ್ತಾನೆ. “ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು ಆ ದಿನದಲ್ಲಿ ಕುಸಿದು ಹೋಗುವುದು; ಅದು ಬಡಿಯಲ್ಪಟ್ಟು ಬೀಳಲಾಗಿ ಅದರ ಮೇಲೆ ಇದ್ದ ಭಾರವೂ ತೆಗೆದು ಹಾಕಲ್ಪಡುವುದು ಯೆಹೋವನೇ ಇದನ್ನು ನುಡಿದಿದ್ದಾನೆ” ಎಂಬುದೇ.