Skip to content
Opens in a new window
Listen to this chapter • 3:48

[1] ಇಗೋ, ಯೆಹೋವನು ಭೂಮಿಯನ್ನು ಬರಿದುಮಾಡಿ, ಎಲ್ಲಾ ಪ್ರದೇಶವನ್ನು ನಿರ್ಜನಮಾಡಿ, ಅದನ್ನು ವಿಕಾರಪಡಿಸಿ, ಅದರ ನಿವಾಸಿಗಳನ್ನು ಚದುರಿಸಿಬಿಡುವವನಾಗಿದ್ದಾನೆ.

[2] ಪ್ರಜೆಗಳು ಯಾಜಕ, ದಾಸ ಯಜಮಾನ, ದಾಸಿ, ಯಜಮಾನಿ, ಕೊಳ್ಳುವವನು, ಮಾರುವವನು, ಸಾಲ ಕೊಡುವವನು ಸಾಲ ಪಡೆಯುವವನು, ಬಡ್ಡಿ ಪಡೆಯುವವನು ಬಡ್ಡಿ ತೆರುವವನು, ಇವರೆಲ್ಲರಿಗೂ ಒಂದೇ ಗತಿಯಾಗುವುದು.

[3] ಭೂಮಿಯು ಬಟ್ಟಬರಿದಾಗುವುದು, ಅದು ಸಂಪೂರ್ಣ ಸುಲಿಗೆಯಾಗುವುದು, ಯೆಹೋವನೇ ಇದನ್ನು ನುಡಿದಿದ್ದಾನೆ.

[4] ಭೂಮಿಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿಹೋಗಿದೆ, ಲೋಕದ ಉನ್ನತರು ಕಂಗೆಟ್ಟಿದ್ದಾರೆ.

[5] ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ನಿಯಮಗಳನ್ನು ಬದಲಾಯಿಸಿ, ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು.

[6] ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ. ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.

[7] ದ್ರಾಕ್ಷಾರಸವು ಬತ್ತಿ ಹೋಗುವುದು, ದ್ರಾಕ್ಷಿಯ ಬಳ್ಳಿಯು ಕ್ಷೀಣಿಸುವುದು, ಹರ್ಷ ಹೃದಯರೆಲ್ಲಾ ನರಳುತ್ತಾರೆ.

[8] ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ, ಕಿನ್ನರಿಯ ಆನಂದವು ಅಡಗಿದೆ.

[9] ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಮದ್ಯವು ಕುಡಿಯುವವರಿಗೆ ಕಹಿಯಾಗುವುದು.

[10] ಹಾಳುಪಟ್ಟಣವು ಬಿದ್ದುಹೋಗಿದೆ, ಯಾರೂ ಹೋಗದಂತೆ ಪ್ರತಿಯೊಂದು ಮನೆಯೂ ಮುಚ್ಚಿದೆ.

[11] ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಕೊನೆಗೊಂಡಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ.

[12] ಪಟ್ಟಣಗಳು ಹಾಳೂರಾಗಿ ಉಳಿದಿದೆ; ನಾಶವು ಹೆಬ್ಬಾಗಿಲಿಗೆ ಬಡಿದಿದೆ.

[13] ಎಣ್ಣೆಯ ಮರವನ್ನು ಕಡಿದ ಬಳಿಕ, ದ್ರಾಕ್ಷಿಯ ಸುಗ್ಗಿಯು ತೀರಿದ ನಂತರ ಉಳಿದ ಕಾಯಿಗಳ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಉಳಿದಿರುವುದು.

[14] ಅವರು ತಮ್ಮ ಧ್ವನಿ ಎತ್ತಿ ಯೆಹೋವನ ಮಹಿಮೆಯನ್ನು ಕುರಿತು ಹಾಡುವರು. ಸಮುದ್ರದ ಕಡೆಯಿಂದ ಆರ್ಭಟಿಸುವರು.

[15] ಮೂಡಣದವರೇ, “ಯೆಹೋವನನ್ನು ಸನ್ಮಾನಿಸಿರಿ. ದ್ವೀಪ ನಿವಾಸಿಗಳೇ, ಇಸ್ರಾಯೇಲರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ” ಎಂದು ಕೂಗುವರು.

[16] ಭೂಮಂಡಲದ ಕಟ್ಟಕಡೆಯಿಂದ, “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿ ಬಂದಿವೆ, ಆದರೆ “ನಾನಾದರೋ ಕ್ಷಯಿಸಿ ಹೋಗಿದ್ದೇನೆ, ನನ್ನ ಗತಿಯನ್ನು ಏನು ಹೇಳಲಿ! ಬಾಧಕರು ಬಾಧಿಸುತ್ತಾರೆ, ಹೌದು, ಬಾಧಕರು ಬಾಧಿಸೇ ಬಾಧಿಸುತ್ತಾರೆ” ಎಂದುಕೊಂಡೆನು.

[17] ಭೂನಿವಾಸಿಗಳೇ, ಭಯವೂ, ಗುಂಡಿಯೂ, ಬಲೆಯೂ ನಿಮಗೆ ಕಾದಿವೆ.

[18] ಭಯದ ಸಪ್ಪಳದಿಂದ ಓಡಿ ಹೋಗುವವನು ಗುಂಡಿಯಲ್ಲಿ ಬೀಳುವನು, ಗುಂಡಿಯನ್ನು ಹತ್ತಿ ಬರುವವನು ಬಲೆಗೆ ಸಿಕ್ಕುವನು. ನೋಡು, ಆಕಾಶದ ದ್ವಾರಗಳು ತೆರೆದಿವೆ, ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.

[19] ಭೂಮಿಯು ಒಡೆದೇ ಇದೆ, ಬಿರಿದಿದೆ, ಕದಲಿಯೇ ಹೋಗಿದೆ.

[20] ಭೂಮಿಯು ಅಮಲೇರಿದವನ ಹಾಗೆ ಓಲಾಡುತ್ತದೆ, ಗುಡಿಸಲಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದು ಹೋಗುತ್ತಿದೆ, ತಿರುಗಿ ಏಳುವುದೇ ಇಲ್ಲ.

[21] ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ, ಭೂಮಂಡಲದ ಒಡೆಯರನ್ನೂ ದಂಡಿಸುವನು.

[22] ಅವರು ಕೈದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಲ್ಪಟ್ಟು ಅದರಲ್ಲಿ ಮುಚ್ಚಲ್ಪಡುವರು. ಬಹಳ ದಿನಗಳ ನಂತರ ದಂಡನೆಗೆ ಗುರಿಯಾಗುವರು.

[23] ಆಮೇಲೆ ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು; ಸೇನಾಧೀಶ್ವರನಾದ ಯೆಹೋವನು ಚೀಯೋನ್ ಪರ್ವತದಲ್ಲಿ ಯೆರೂಸಲೇಮನ್ನು ಆಳುವನು. ಆತನ ಪರಿವಾರದ ಹಿರಿಯರ ಮುಂದೆ ಪ್ರಭಾವವು ಪ್ರತ್ಯಕ್ಷವಾಗುವುದು.

ಯೆಶಾಯನು — Chapters