Skip to content
Opens in a new window
Listen to this chapter • 5:54

[1] ನನ್ನ ಪ್ರಿಯನಾದವನ ಬಗ್ಗೆ ಮತ್ತು ಅವನ ತೋಟವನ್ನೂ ಕುರಿತು ಒಂದು ಗೀತೆಯನ್ನು ಹಾಡುವೆನು. ಕೇಳಿರಿ, ಫಲವತ್ತಾದ ಗುಡ್ಡದ ಮೇಲೆ ನನ್ನ ಅತಿಪ್ರಿಯನಿಗೆ ದ್ರಾಕ್ಷಿಯ ತೋಟವಿತ್ತು.

[2] ಅವನು ಅದನ್ನು ಅಗೆದು, ಕಲ್ಲುಗಳನ್ನು ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿಯ ಸಸಿಗಳನ್ನು ನೆಟ್ಟು, ಮಧ್ಯದಲ್ಲಿ ಗೋಪುರವನ್ನು ಕಟ್ಟಿ, ದ್ರಾಕ್ಷಿಯ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ಸಿಹಿ ದ್ರಾಕ್ಷಿಯ ಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತು.

[3] ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ಈಗ ನನಗೂ, ನನ್ನ ದ್ರಾಕ್ಷಿಯ ತೋಟಕ್ಕೂ ನ್ಯಾಯತೀರಿಸಿರಿ.

[4] ನನ್ನ ದ್ರಾಕ್ಷಿಯ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೂ ಹೆಚ್ಚಾಗಿ ಇನ್ನೇನು ಮಾಡಬೇಕಾಗಿತ್ತು? ಅದು ಒಳ್ಳೆಯ ದ್ರಾಕ್ಷಿಯ ಫಲವನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಏಕೆ ಕೊಟ್ಟಿತು?

[5] ನನ್ನ ದ್ರಾಕ್ಷಿಯ ತೋಟವನ್ನು ಏನು ಮಾಡುವೆನು ಎಂದು ಈಗ ನಿಮಗೆ ತಿಳಿಸುತ್ತೇನೆ. ಅದರ ಮುಳ್ಳು ಬೇಲಿಯನ್ನು ಕೀಳುವೆನು. ದನಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿ ಹಾಕುವೆನು. ಅದು ಜನರ ತುಳಿದಾಟಕ್ಕೆ ಈಡಾಗುವುದು.

[6] ಅದನ್ನು ಹಾಳುಮಾಡುವೆನು. ದ್ರಾಕ್ಷಿಯ ತೋಟವನ್ನು ಯಾರೂ ಕುಡಿ ಕತ್ತರಿಸಿ ಅಗೆಯುವುದಿಲ್ಲ. ಅದರಲ್ಲಿ ಮುಳ್ಳುಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಅಪ್ಪಣೆ ಕೊಡುವೆನು.

[7] ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆಯೇ, ಯೆಹೂದದ ಜನವೇ, ಆತನ ಇಷ್ಟದ ಗಿಡ. ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.

[8] ಅಯ್ಯೋ, ಮನೆಗೆ ಮನೆಯನ್ನೂ, ಹೊಲಕ್ಕೆ ಹೊಲವನ್ನೂ ಸೇರಿಸಿಕೊಳ್ಳುತ್ತಾ ಬಂದು, ಇತರರಿಗೆ ಸ್ವಲ್ಪ ಸ್ಥಳವನ್ನೂ ಬಿಡದೆ ದೇಶದ ಮಧ್ಯದಲ್ಲಿ ತಾವೇ ತಾವಾಗಿ ವಾಸಿಸುವವರ ಗತಿಯನ್ನು ಏನು ಹೇಳಲಿ!

[9] ನನ್ನ ಕಿವಿಯಲ್ಲಿ ಸೇನಾಧೀಶ್ವರನಾದ ಯೆಹೋವನು ಹೇಳುವುದೇನೆಂದರೆ, ಸೊಗಸಾದ ಅನೇಕ ದೊಡ್ಡ ಮನೆಗಳಲ್ಲಿ ಜನರು ವಾಸಮಾಡದೆ ಅವು ಖಂಡಿತವಾಗಿ ಹಾಳು ಬೀಳುವುವು.

[10] ಏಕೆಂದರೆ ಹತ್ತು ಎಕರೆ ಭಾಗವಾಯಿತು. ಭೂಮಿಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನಿಯುವುದು. ಬಿತ್ತಿದ ಒಂದು ಖಂಡುಗ ಬೀಜದಿಂದ ಕಡಿಮೆ ದವಸವು ಬರುವುದು.

[11] ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು, ಸಂಜೆಯಾದ ಮೇಲೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರ ಗತಿಯನ್ನು ಏನೆಂದು ಹೇಳಲಿ!

[12] ಕಿನ್ನರಿ, ವೀಣೆ, ದಮ್ಮಡಿ, ಕೊಳಲು ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು. ಯೆಹೋವನ ಕೆಲಸವನ್ನೋ ಅವರು ಲಕ್ಷಿಸುವುದಿಲ್ಲ. ಆತನ ಕೈಕೆಲಸವನ್ನು ಆಲೋಚಿಸುವುದಿಲ್ಲ.

[13] ಆದಕಾರಣ ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವುದು ಖಂಡಿತ. ಘನವಂತರು ಹಸಿಯುವರು ಮತ್ತು ಜನಸಮೂಹವು ಬಾಯಾರಿಕೆಯಿಂದ ಒಣಗುವುದು.

[14] ಹೀಗಿರುವುದರಿಂದ ಪಾತಾಳವು ಹೆಚ್ಚು ಆತುರದಿಂದ ಅಗಾಧವಾಗಿ ಬಾಯಿ ತೆರೆಯಲು, ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲವುಗಳು ಅದರೊಳಗೆ ಬಿದ್ದುಹೋಗುವವು.

[15] ಮನುಷ್ಯನು ಕುಗ್ಗಿಸಲ್ಪಡುವನು. ಅಹಂಭಾವದ ಕಣ್ಣುಗಳು ಕಂಗೆಡುವವು.

[16] ಸೇನಾಧೀಶ್ವರನಾದ ಯೆಹೋವನೋ ನ್ಯಾಯತೀರಿಸುವುದರಲ್ಲಿ ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು. ಪರಿಶುದ್ಧನಾದ ದೇವರು ಧರ್ಮವನ್ನು ನಡೆಸುವುದರಲ್ಲಿ ಪರಿಶುದ್ಧನು ಎಂದು ಅನಿಸಿಕೊಳ್ಳುವನು.

[17] ಪಟ್ಟಣ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಹುಲ್ಲುಗಾವಲುಗಳಾಗುವವು. ಕುರಿಮರಿಗಳು ಅಲ್ಲಿ ಮೇಯುವವು.

[18] ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧ ದಂಡನೆಯನ್ನು, ರಥವನ್ನು ಹಗ್ಗಗಳಿಂದಲೋ ಎಂಬಂತೆ ಪಾಪವನ್ನು ಎಳೆದುಕೊಳ್ಳುತ್ತಾ,

[19] ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ನಡೆಸಲಿ. ಇಸ್ರಾಯೇಲರ ಸದಮಲಸ್ವಾಮಿಯ ಉದ್ದೇಶವನ್ನು ನಾವು ತಿಳಿಯಬೇಕು. ಅದು ಆದಷ್ಟು ಬೇಗ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ!

[20] ಅಯ್ಯೋ, ಕೆಟ್ಟದ್ದನ್ನು ಒಳ್ಳೆಯದೆಂದೂ, ಒಳ್ಳೆಯದನ್ನು ಕೆಟ್ಟದೆಂದೂ ಬೋಧಿಸಿ; ಕತ್ತಲನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಂದೂ ಸಾಧಿಸಿ; ಕಹಿಯನ್ನು ಸಿಹಿಯೆಂದು, ಸಿಹಿಯನ್ನು ಕಹಿ ಎಂದು ಎಣಿಸುವವರ ಗತಿಯನ್ನು ಏನೆಂದು ಹೇಳಲಿ!

[21] ಅಯ್ಯೋ, ತಮ್ಮನ್ನು ತಾವೇ ಜ್ಞಾನಿಗಳೆಂದೂ, ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಗತಿಯನ್ನು ಏನು ಹೇಳಲಿ!.

[22] ಅಯ್ಯೋ, ಸುರಾಪಾನದಲ್ಲಿ ಶೂರರೂ, ಮದ್ಯಮಿಶ್ರಣದಲ್ಲಿ ಸಾಹಸಿಗಳೂ;

[23] ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ, ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನು ಹೇಳಲಿ!

[24] ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ, ಇಸ್ರಾಯೇಲರ ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೊಳೆಯನ್ನು ನುಂಗಿಬಿಡುವಂತೆಯೂ, ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆತು ಹೋಗುವಂತೆಯೂ, ಅದರ ಚಿಗುರು ಧೂಳಿನಂತೆಯೂ ತೂರಿ ಹೋಗುವುದು.

[25] ಹೀಗಿರಲು ಯೆಹೋವನು ತನ್ನ ಜನರ ಮೇಲೆ ಕೋಪಗೊಂಡು, ಅವರ ಮೇಲೆ ಕೈಯೆತ್ತಿ, ಅವರನ್ನು ಹೊಡೆದುಬಿಡುವನು. ಆಗ ಬೆಟ್ಟಗಳು ನಡಗುವವು. ಹೆಣಗಳು ಬೀದಿಗಳಲ್ಲಿ ಕಸವಾಗಿ ಬಿದ್ದಿರುವವು. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೇ ಕೈಯೆತ್ತಿಯೇ ಇರುವುದು.

[26] ಆತನು ದೂರದ ಜನಾಂಗದವರಿಗೆ ಗುರುತಾಗಿ ಧ್ವಜವೆತ್ತಿ, ಅವರನ್ನು ಭೂಲೋಕದ ಅಂಚಿನಿಂದ ಸಿಳ್ಳು ಹಾಕಿ ಕರೆಯುವನು. ಇಗೋ ಅವರೆಲ್ಲ ತ್ವರೆಪಟ್ಟು ವೇಗವಾಗಿ ಬರುತ್ತಾರೆ.

[27] ಅವರಲ್ಲಿ ಯಾರೂ ಬಳಲಿ ಮುಗ್ಗರಿಸುವುದಿಲ್ಲ. ಯಾರೂ ತೂಕಡಿಸಿ ನಿದ್ರಿಸುವುದಿಲ್ಲ. ಅವರ ನಡುಕಟ್ಟು ಬಿಚ್ಚಿಲ್ಲ. ಅವರ ಕೆರದ ಬಾರು ಹರಿಯುವುದಿಲ್ಲ.

[28] ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ. ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.

[29] ಅವರು ಸಿಂಹದಂತೆ ಘರ್ಜಿಸುತ್ತಾರೆ. ಪ್ರಾಯದ ಸಿಂಹಗಳ ಹಾಗೆ ಆರ್ಭಟಿಸುತ್ತಾರೆ. ಗುರುಗುಟ್ಟುತ್ತಾ ಬೇಟೆ ಹಿಡಿದು ಹೊತ್ತುಕೊಂಡು ಹೋಗುತ್ತಾರೆ. ರಕ್ಷಿಸುವವರು ಯಾರೂ ಇಲ್ಲ.

[30] ಸಮುದ್ರವು ಭೋರ್ಗರೆಯುವಂತೆ ಆ ದಿನದಲ್ಲಿ ಇವರು ಯೆಹೂದ್ಯರನ್ನು ಕಂಡು ಗರ್ಜಿಸುವರು. ಭೂಮಿಯನ್ನು ದೃಷ್ಟಿಸಿದರೆ ಅಂಧಕಾರವೂ, ವ್ಯಾಕುಲವೂ ತುಂಬಿರುವುದು. ಮೋಡ ಕವಿದು ಬೆಳಕು ಕತ್ತಲಾಗುವುದು.

ಯೆಶಾಯನು — Chapters