Skip to content
Opens in a new window
Listen to this chapter • 1:21

[1] ಆ ದಿನದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಪುರುಷನನ್ನು ಹಿಡಿದು, “ನಾವು ಸ್ವಂತವಾಗಿ ದುಡಿದ ಅನ್ನವನ್ನು ಉಣ್ಣುವೆವು, ನಾವೇ ಸಂಪಾದಿಸಿದ ಬಟ್ಟೆಯನ್ನು ಉಟ್ಟುಕೊಳ್ಳುವೆವು, ನಿನ್ನ ಹೆಸರು ಮಾತ್ರ ನಮಗಿದ್ದರೆ ಸಾಕು. ಯಜಮಾನನಾಗಿ ನಮ್ಮ ಮಾನ ಕಾಪಾಡಿದರೆ ಸಾಕು” ಎಂದು ಕೇಳಿಕೊಳ್ಳುವರು.

[2] ಆ ದಿನದಲ್ಲಿ ಯೆಹೋವನು ದಯಪಾಲಿಸಿದ ಬೆಳೆಯಿಂದ ಇಸ್ರಾಯೇಲರಲ್ಲಿ ಉಳಿದವರಿಗೆ ಸೌಂದರ್ಯವೂ, ಮಹಿಮೆಯೂ ಉಂಟಾಗುವವು. ದೇಶದಿಂದ ಫಲವೂ, ಉನ್ನತಿಯೂ, ಭೂಷಣವೂ ಲಭಿಸುವುದು.

[3] ಆಗ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಮತ್ತು ಯೆರೂಸಲೇಮಿನಲ್ಲಿ ವಾಸಿಸುವರೆಂದು ದಾಖಲೆಗೊಂಡ ಪ್ರತಿಯೊಬ್ಬ ಮನುಷ್ಯನು ಪರಿಶುದ್ಧನೆಂದು ಕರೆಯಲ್ಪಡುವನು.

[4] ಆಗ ಕರ್ತನಾದ ಯೆಹೋವನು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಸ್ತ್ರೀಯರ ಕಲ್ಮಷವನ್ನೂ ಮತ್ತು ಯೆರೂಸಲೇಮಿನ ರಕ್ತದ ಕಲೆಯನ್ನು ತೊಳೆದುಬಿಡುವನು.

[5] ಆಮೇಲೆ ಯೆಹೋವನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೆಯೂ, ಅಲ್ಲಿ ನಡೆಯುವ ಸಭೆಗಳ ಮೇಲೆಯೂ, ಹಗಲಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಮಹಿಮೆಯು ಎಲ್ಲಾ ಕಡೆಯು ಆವರಿಸಿರುವುದು.

[6] ಅದು ಹಗಲಿನ ಬಿಸಿಲಿನಲ್ಲಿ ನೆರಳನ್ನೂ, ಸಣ್ಣ ದೊಡ್ಡ ಮಳೆಗಳಲ್ಲಿ ಆಶ್ರಯವನ್ನೂ ಕೊಡುವ ಗುಡಾರವಾಗಿರುವುದು.

ಯೆಶಾಯನು — Chapters