[1] ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯವು ಹಾಳಾಯಿತು, ನಿಮಗೆ ನೆಲೆಯಿಲ್ಲ, ರೇವಿಲ್ಲ. ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು.
[2] ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ಹಾದು ಹೋಗುವ, ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನವಾಗಿರಿ!
[3] ವಿಶಾಲವಾದ ಸಾಗರದ ಮೇಲೆ ತಂದ ಶೀಹೋರಿನ ಧಾನ್ಯದಿಂದಲೂ, ನೈಲ್ ನದಿಯ ಬೆಳೆಯಿಂದಲೂ ಆದಾಯಹೊಂದಿದ ನಿಮ್ಮ ನಗರವು ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು.
[4] ಚೀದೋನೇ, ನಾಚಿಕೆಪಡು. ಏಕೆಂದರೆ ಸಮುದ್ರವೂ, ಸಮುದ್ರದ ದುರ್ಗವೂ, “ನಾವು ವೇದನೆ ಪಡಲಿಲ್ಲ, ಪ್ರಸವಿಸಲಿಲ್ಲ, ಯುವತಿ ಯುವಕರನ್ನು ಸಾಕಿ ಸಲಹಲಿಲ್ಲ” ಎಂದು ನುಡಿದಿದೆಯಷ್ಟೆ.
[5] ತೂರಿನ ಸಮಾಚಾರವು ಐಗುಪ್ತ್ಯರಿಗೆ ಮುಟ್ಟಿದಾಗ ಅದಕ್ಕಾಗಿ ಸಂಕಟಪಡುವರು.
[6] ತಾರ್ಷೀಷಿಗೆ ಸಮುದ್ರದ ಮೇಲೆ ಹಾದುಹೋಗಿರಿ, ದ್ವೀಪ ನಿವಾಸಿಗಳೇ, ಗೋಳಾಡಿರಿ!
[7] ನಿಮ್ಮ ಉಲ್ಲಾಸದ ಪಟ್ಟಣವು ಇದೇನೋ? ಅದರ ಉತ್ಪತ್ತಿಯು ಪುರಾತನವಾದದ್ದೇ ಸರಿ; ಅವರ ಕಾಲುಗಳು ಅವರನ್ನು ದೂರ ದೇಶದಲ್ಲಿ ವಾಸಿಸುವುದಕ್ಕೆ ಕರೆದುಕೊಂಡು ಹೋಗುವವು.
[8] ಅದು ಕಿರೀಟದಾಯಕವಾದ ಪಟ್ಟಣವು. ಅದರ ವರ್ತಕರು ಪ್ರಭುಗಳು, ಅದರ ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಸಂಕಲ್ಪವನ್ನು ಮಾಡಿದವನು ಯಾರು?
[9] ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇಕೆಂತಲೂ, ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವಮಾನಪಡಿಸಬೇಕೆಂತಲೂ ಸೇನಾಧೀಶ್ವರನಾದ ಯೆಹೋವನೇ ಹೀಗೆ ಸಂಕಲ್ಪಿಸಿದ್ದಾನೆ.
[10] ತಾರ್ಷೀಷ್ ನಗರಿಯೇ, ನೈಲ್ ನದಿಯಂತೆ ನಿನ್ನ ಭೂಮಿಯನ್ನು ಬಿತ್ತು. ತೂರ್ ಪಟ್ಟಣದಲ್ಲಿ ಇನ್ನು ಮುಂದೆ ವ್ಯಾಪಾರ ಸ್ಥಳವು ಇರುವುದಿಲ್ಲ.
[11] ಯೆಹೋವನು ಸಮುದ್ರದ ಮೇಲೆ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ. ಕಾನಾನಿನ ದುರ್ಗಗಳನ್ನು ನಾಶಮಾಡಲು ಅದರ ವಿಷಯವಾಗಿ ಯೆಹೋವನು ಅಪ್ಪಣೆಕೊಟ್ಟಿದ್ದಾನೆ.
[12] ಆತನು, “ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿ ಇರದು” ಎಂದು ಹೇಳಿದ್ದಾನೆ.
[13] ಇಗೋ, ಕಸ್ದೀಯರ ದೇಶವು! ಈ ಜನಾಂಗವು ನಿರ್ನಾಮವಾಯಿತು. ಅಶ್ಶೂರ್ಯರು ಈ ದೇಶವನ್ನು ಕಾಡುಮೃಗಗಳಿಗೆ ಈಡುಮಾಡಿದರು. ಗೋಪುರಗಳನ್ನು ಕಟ್ಟಿಕೊಂಡು ಅದರ ಕೋಟೆಗಳನ್ನು ಕೆಡವಿ ಅದನ್ನು ನಾಶಪಡಿಸಿದರು.
[14] ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯವು ಹಾಳಾಯಿತು.
[15] ಆ ದಿನದಲ್ಲಿ ತೂರ್ ಪಟ್ಟಣವು ಒಬ್ಬ ಅರಸನ ಆಡಳಿತದ ಎಪ್ಪತ್ತು ವರ್ಷಗಳ ತನಕ ಜ್ಞಾಪಕಕ್ಕೆ ಬಾರದೇ ಇರುವುದು; ಎಪ್ಪತ್ತು ವರ್ಷದ ಮೇಲೆ ವ್ಯಭಿಚಾರಿ ವಿಷಯವಾದ ಗೀತೆಯಂತೆ ಆಗುವುದು.
[16] ಅದೇನೆಂದರೆ, “ಎಲ್ಲರೂ ಮರೆತುಹೋದ ವ್ಯಭಿಚಾರಿಯೇ, ಕಿನ್ನರಿಯನ್ನು ತೆಗೆದುಕೊಂಡು ಪಟ್ಟಣದಲ್ಲಿ ಅಲೆಯುತ್ತಾ, ಜನರು ನಿನ್ನನ್ನು ಜ್ಞಾಪಿಸಿಕೊಳ್ಳುವಂತೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು” ಎಂಬುದೇ.
[17] ಎಪ್ಪತ್ತು ವರ್ಷಗಳ ಮೇಲೆ ಯೆಹೋವನು ತೂರ್ ಪಟ್ಟಣವನ್ನು ಪರಾಂಬರಿಸುವನು. ಅವಳು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕದಲ್ಲಿರುವ ಸಕಲ ಅರಸರೊಂದಿಗೆ ಸೇರಿ ವ್ಯಾಪಾರ ಮಾಡುವಳು.
[18] ಅವಳ ವ್ಯಾಪಾರವೂ ಮತ್ತು ಅವಳ ಆದಾಯವೂ ಅವಳಿಗೆ ನಿಧಿನಿಕ್ಷೇಪವಾಗದೆ ಯೆಹೋವನಿಗೇ ಮೀಸಲಾಗುವುದು. ಆ ವ್ಯಾಪಾರವು ಯೆಹೋವನ ಸನ್ನಿಧಾನದಲ್ಲಿ ವಾಸಿಸುವವರಿಗೆ ಬೇಕಾದಷ್ಟು ಅನ್ನವನ್ನೂ, ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲವಾಗುವುದು.