[1] ಅಯ್ಯೋ, ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟದ ಗತಿಯೇ! ದ್ರಾಕ್ಷಾರಸಕ್ಕೆ ಸೋತು ಹೋದವರ ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಬಾಡುತ್ತಿರುವ ಹೂವಿನ ಪಾಡೇ!
[2] ಆಹಾ, ಕರ್ತನು ಒಬ್ಬ ಮಹಾಬಲಿಷ್ಠನನ್ನು ನೇಮಿಸಿದ್ದಾನೆ; ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ, ನಾಶಕರವಾದ ಬಿರುಗಾಳಿಯಂತೆಯೂ, ಮುಳುಗಿಸುವ ಅತಿಧಾರಾವೃಷ್ಟಿಯಂತೆಯೂ ಬಲಾತ್ಕಾರದಿಂದ ಆ ಪಟ್ಟಣವನ್ನು ತನ್ನ ಕೈಯಿಂದ ಅಧೋಗತಿಗೆ ತರುವನು.
[3] ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟವು ಕಾಲಿನಿಂದ ತುಳಿಯಲ್ಪಡುವುದು.
[4] ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕೊಡುವ ಕಾಲಕ್ಕೆ, ಮೊದಲು ಮಾಗಿದ ಅಂಜೂರಕ್ಕೆ ಸಮಾನವಾಗುವುದು; ಆ ಹಣ್ಣನ್ನು ನೋಡಿದವನು, ಅದನ್ನು ಕಿತ್ತ ಕೂಡಲೆ ನುಂಗಿಬಿಡುವನು.
[5] ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನೇ ತನ್ನ ಜನರಲ್ಲಿ ಉಳಿದವರಿಗೆ ಅಂದದ ಕಿರೀಟವೂ, ಸುಂದರ ಮುಕುಟವೂ ಆಗಿರುವನು.
[6] ಆತನೇ ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯಾಗಿಯೂ, ಊರಬಾಗಿಲಲ್ಲಿ ಶತ್ರುಗಳನ್ನು ನಾಶಮಾಡುವವರಿಗೆ ಶೌರ್ಯವಾಗಿಯೂ ಪರಿಣಮಿಸುವನು.
[7] ಈ ನನ್ನ ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ.
[8] ಅವರ ಮೇಜುಗಳ ಮೇಲೆಲ್ಲಾ ವಾಂತಿಯೂ, ಎಂಜಲೂ ತುಂಬಿವೆ, ಶುದ್ಧವಾದ ಸ್ಥಳವೇ ಇಲ್ಲ.
[9] ಇವನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಇವನು ಯಾರಿಗೆ ಯೆಹೋವನ ಬೋಧನೆಯನ್ನು ತಿಳಿಸುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ ಅಥವಾ ತಾಯಿಯ ಬೆಚ್ಚನೆಯ ಎದೆಬಿಟ್ಟ ಮಕ್ಕಳಿಗೋ?
[10] ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ.
[11] ಹೌದು, ತೊದಲು ಮಾತಿನವರು, ಅನ್ಯಭಾಷಿಗಳು ಇವರ ಮೂಲಕವಾಗಿಯೇ ಯೆಹೋವನು ಈ ಜನರೊಂದಿಗೆ ಮಾತನಾಡುವನು.
[12] ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರಿಗೆ ವಿಶ್ರಾಂತಿ ನೀಡಿ, ನಿಮಗೆ ಅನುಕೂಲವಾದ ಉಪಶಮನವು ಇದೇ” ಎಂದು ಹೇಳುವಾಗ ಇವರು ಕೇಳದೆ ಹೋದರು.
[13] ಹೀಗಿರಲು ಯೆಹೋವನ ಮಾತು ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಎಂಬುದಾಗಿ ಇವರಿಗೆ ಪರಿಣಮಿಸುವುದು; ಇವರು ನಡೆದು ಹಿಂದೆ ಬಿದ್ದು ಭಂಗಪಡುವರು, ಬೋನಿಗೆ ಸಿಕ್ಕಿ ವಶವಾಗುವರು.
[14] ಆದುದರಿಂದ ಯೆರೂಸಲೇಮಿನ ಈ ಜನರನ್ನು ಆಳುವ ಧರ್ಮನಿಂದಕರೇ, ಯೆಹೋವನ ಮಾತನ್ನು ಕೇಳಿರಿ,
[15] ನೀವು ನಿಮ್ಮೊಳಗೆ, “ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಸುಳ್ಳನ್ನೇ ಆಶ್ರಯಿಸಿಕೊಂಡು ಮೋಸದಲ್ಲಿ ಮೊರೆಹೊಕ್ಕಿದ್ದೇವೆ” ಎಂದು ಅಂದುಕೊಂಡಿದ್ದೀರಿ.
[16] ಆದುದರಿಂದ ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ, “ಇಗೋ, ಪರೀಕ್ಷೆಗೆ ಒಳಗಾಗಿ, ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ, ಸ್ಥಿರವಾದ ಆಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು.
[17] ನಾನು ನ್ಯಾಯವನ್ನು ನೂಲನ್ನಾಗಿಯೂ, ಧರ್ಮವನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು, ಜಲಪ್ರವಾಹವು ಮೋಸದ ಅಡಗು ಸ್ಥಳವನ್ನು ಮುಳುಗಿಸುವುದು.
[18] ಮೃತ್ಯುವಿನಿಂದ ನೀವು ಪಡೆದುಕೊಂಡ ಒಡಂಬಡಿಕೆಯು ಸಾಗದು, ಪಾತಾಳದೊಡನೆ ನೀವು ಮಾಡಿಕೊಂಡ ಒಪ್ಪಂದವು ನಿಲ್ಲದು; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ನಿಮ್ಮನ್ನು ತುಳಿದುಬಿಡುವುದು.
[19] ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು; ಹೊತ್ತಾರೆಯಿಂದ ಹೊತ್ತಾರೆಗೆ ಹಗಲು ರಾತ್ರಿಯೂ ಹಾದುಹೋಗುವುದು; ಆಗ ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವುದರಿಂದ ಭಯವಾಗುವುದು.
[20] ಒಬ್ಬನು ಕಾಲುಚಾಚಿಕೊಂಡು ಮಲಗುವನೆಂದರೆ ಹಾಸಿಗೆಯ ಉದ್ದವೂ ಸಾಲುವುದಿಲ್ಲ; ಮುದುರಿಕೊಂಡು ಮಲಗುವನೆಂದರೆ ಹೊದಿಕೆಯ ಅಗಲವೂ ಸಾಲುವುದಿಲ್ಲ.”
[21] ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡೆಸಬೇಕೆಂತಲೂ, ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ ಪೆರಾಚೀಮ್ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್ ಕಣಿವೆಯಲ್ಲಿ ರೋಷಗೊಂಡಂತೆ ರೋಷಗೊಳ್ಳುವನು.
[22] ಆದುದರಿಂದ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ; ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಳಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವುದನ್ನು ಕೇಳಿದ್ದೇನೆ.
[23] ನನ್ನ ಧ್ವನಿಯನ್ನು ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.
[24] ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ಪ್ರತಿನಿತ್ಯವೂ ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆಯುವನೋ?
[25] ಅಂತು ಭೂಮಿಯನ್ನು ಹಸನು ಮಾಡಿದ ಮೇಲೆ ಅಗಸೆಯನ್ನು, ಜೀರಿಗೆಯನ್ನು ಬಿತ್ತಿ, ಗೋದಿಯನ್ನು ಸಾಲು ಸಾಲಾಗಿ ತಕ್ಕ ಸ್ಥಳದಲ್ಲಿಯೂ, ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೆ?
[26] ಅವನ ದೇವರು ಇದನ್ನೆಲ್ಲಾ ಅವನಿಗೆ ಸರಿಯಾಗಿ ಕಲಿಸಿ, ತಿದ್ದುತ್ತಾನೆ.
[27] ಆದುದರಿಂದ ಅವನು ಜೀರಿಗೆಯನ್ನು ಒಕ್ಕುವುದು ಯಂತ್ರದಿಂದಲ್ಲ ಅಥವಾ ಗಾಡಿಯ ಚಕ್ರದಿಂದಲ್ಲ ಆದರೆ ಕೋಲಿನಿಂದಲೇ; ಅಗಸೆಯನ್ನು ಒಕ್ಕುವುದು ಕೋಲಿನಿಂದಲೇ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದಲೇ, ಕಣದ ಗುಂಡಿನಿಂದಲ್ಲ.
[28] ಗೋದಿಯ ಕಾಳನ್ನು ನುಚ್ಚು ಮಾಡುವನೋ? ತನ್ನ ಕುದುರೆಗಳ ಗಾಡಿಯ ಚಕ್ರವನ್ನು ಹೊಡೆಯುತ್ತಾ ಗುಂಡನ್ನು ಉರುಳಿಸುತ್ತಾ ಯಾವಾಗಲೂ ಒಕ್ಕುತ್ತಿರುವುದಿಲ್ಲ, ನುಚ್ಚು ಮಾಡುವುದಿಲ್ಲ.
[29] ಈ ವಿವೇಕವು ಸಹ ಅತಿಶಯವಾದ ಆಲೋಚನಾಪರನೂ, ಸುಜ್ಞಾನ ಶ್ರೇಷ್ಠನೂ ಆಗಿರುವ, ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ.