Skip to content
Opens in a new window
Listen to this chapter • 5:38

[1] ದ್ವೀಪನಿವಾಸಿಗಳೇ, ನನ್ನ ಕಡೆಗೆ ತಿರುಗಿ ಮೌನದಿಂದಿರಿ. ಜನಾಂಗಗಳು ತಮ್ಮನ್ನು ಬಲಪಡಿಸಿಕೊಳ್ಳಲಿ; ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಒಟ್ಟಿಗೆ ಹೋಗೋಣ.

[2] ಮೂಡಣದಿಂದ ಒಬ್ಬನನ್ನು ಎಬ್ಬಿಸಿ, ನ್ಯಾಯದ ಸಂಕಲ್ಪಾನುಸಾರವಾಗಿ ತನ್ನ ಪಾದಸನ್ನಿಧಿಗೆ ಕರೆದು, ಜನಾಂಗಗಳನ್ನು ಅವನ ವಶಕ್ಕೆ ಕೊಟ್ಟು, ಅವನನ್ನು ರಾಜರ ಮೇಲೆ ಆಳುವಂತೆ ಮಾಡಿ, ಅವರ ಕತ್ತಿಯನ್ನು ಧೂಳನ್ನಾಗಿಯೂ, ಬಿಲ್ಲನ್ನು ಗಾಳಿ ಬಡಿದುಕೊಂಡು ಹೋಗುವ ಹುಲ್ಲನ್ನಾಗಿಯೂ ಅವರನ್ನು ಮಾಡಿದನು.

[3] ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ ಮುಂದೆ ಹಾದು ಹೋಗುವಂತೆ ಅವರನ್ನು ಹಿಂದಟ್ಟುತ್ತಾ ಹೋದನು.

[4] ಇದನ್ನೆಲ್ಲಾ ನಡೆಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೇ; ಹೌದು, ಆದಿಪುರುಷನೂ, ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ.

[5] ದ್ವೀಪ ನಿವಾಸಿಗಳು ಕಂಡು ಬೆರಗಾದರು, ಭೂಮಿಯ ಕಟ್ಟ ಕಡೆಯವರು ನಡುಗಿದರು, ಎಲ್ಲರೂ ನೆರೆದು ಬಂದರು.

[6] ಒಬ್ಬರಿಗೊಬ್ಬರು ಸಹಾಯಮಾಡಿದರು, ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರು” ಎಂದು ಹೇಳಿದನು.

[7] ಹಾಗೆಯೇ ಶಿಲ್ಪಿಯು ಎರಕದವನನ್ನೂ, ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು. “ಬೆಸಿಗೆ ಚೆನ್ನಾಗಿದೆ” ಎಂದು ಹೇಳಿ ವಿಗ್ರಹವನ್ನು ಕದಲದಂತೆ ಮೊಳೆಗಳಿಂದ ಜಡಿದರು.

[8] ನನ್ನ ಸೇವಕನಾದ ಇಸ್ರಾಯೇಲೇ, ನಾನು ಆರಿಸಿಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ,

[9] ನಾನು ಭೂಮಿಯ ಕಟ್ಟಕಡೆಯಲ್ಲಿ ಹಿಡಿದು ದಿಗಂತಗಳಿಂದ ಕರೆದ ಜನವೇ, “ನೀನು ನನ್ನ ಸೇವಕನು, ನಾನು ನಿನ್ನನ್ನು ಆರಿಸಿಕೊಂಡೆನು, ತಳ್ಳಲಿಲ್ಲ” ಎಂದು ನಾನು ಹೇಳಿ ಸಂಬೋಧಿಸಿದ ಪ್ರಜೆಯೇ,

[10] ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.

[11] ಆಹಾ, ನಿನ್ನ ಮೇಲೆ ಕಿಡಿಕಿಡಿಯಾದವರು ಆಶಾಭಂಗಪಟ್ಟು ಅವಮಾನಹೊಂದುವರು, ನಿನ್ನ ಸಂಗಡ ವ್ಯಾಜ್ಯವಾಡಿದವರು ನಾಶವಾಗಿ ಇಲ್ಲದೆ ಹೋಗುವರು.

[12] ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು. ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ನಿರ್ನಾಮವಾಗುವರು.

[13] ಏಕೆಂದರೆ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನೆ. “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ.

[14] ಕ್ರಿಮಿಪ್ರಾಯದವನಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ, ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು” ಎಂದು ಯೆಹೋವನು ಹೇಳುತ್ತಾನೆ.

[15] “ಇಗೋ, ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ, ನೀನು ಬೆಟ್ಟಗಳನ್ನು ಒಡೆದು ಪುಡಿಪುಡಿಮಾಡಿ ಗುಡ್ಡಗಳನ್ನು ಹೊಟ್ಟು ಮಾಡುವಿ.

[16] ನೀನು ತೂರಲು ಅವುಗಳನ್ನು ಗಾಳಿಯು ಬಡಿದುಕೊಂಡು ಹೋಗುವುದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು. ನೀನಂತೂ ಯೆಹೋವನಲ್ಲಿ ಆನಂದಿಸುವಿ, ಇಸ್ರಾಯೇಲಿನ ಸದಮಲಸ್ವಾಮಿಯಲ್ಲಿ ಹೆಚ್ಚಳಪಡುವಿ.

[17] ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು.

[18] ಬೋಳುಗುಡ್ಡಗಳಲ್ಲಿ ನದಿಗಳನ್ನು, ಕಣಿವೆಗಳಲ್ಲಿ ಒರತೆಗಳನ್ನು ಹೊರಡಿಸಿ, ಅರಣ್ಯವನ್ನು ಕೆರೆಯಾಗಿಯೂ, ಮರುಭೂಮಿಯನ್ನು ಬುಗ್ಗೆಗಳನ್ನಾಗಿಯೂ ಮಾಡುವೆನು.

[19] ಮರುಭೂಮಿಯಲ್ಲಿ ದೇವದಾರು, ಜಾಲಿಮರ, ಸುಗಂಧ ಒಲೀವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.

[20] ಆಗ ಯೆಹೋವನ ಹಸ್ತವು ಇದನ್ನು ಮಾಡಿದೆ, ಹೌದು, ಇಸ್ರಾಯೇಲಿನ ಸದಮಲಸ್ವಾಮಿಯೇ ಸೃಷ್ಟಿಸಿದ್ದಾನೆ” ಎಂದು ಎಲ್ಲರೂ ಕಂಡು ತಿಳಿದು ಮನಸ್ಸಿಗೆ ತಂದು ಗ್ರಹಿಸಿಕೊಳ್ಳುವರು.

[21] ಯಾಕೋಬ್ಯರ ಅರಸನಾದ ಯೆಹೋವನು ಹೀಗೆನ್ನುತ್ತಾನೆ, “ನಿಮ್ಮ ವ್ಯಾಜ್ಯವು ಈಚೆಗೆ ಬರಲಿ, ನಿಮ್ಮ ವಿಗ್ರಹಗಳಿಗಾಗಿ ನಿಮ್ಮ ಬಲವಾದ ನ್ಯಾಯಗಳನ್ನು ತೋರ್ಪಡಿಸಿರಿ”

[22] ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಇಲ್ಲವೇ ಭವಿಷ್ಯತ್ತನ್ನು ತಿಳಿಸಿದರೆ ಗ್ರಹಿಸುವೆವು.

[23] ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದೆ ಆಗುವವುಗಳನ್ನು ತಿಳಿಸಿರಿ. ನಾವು ಒಟ್ಟಿಗೆ ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.

[24] ಆಹಾ, ನೀವು ಶೂನ್ಯವೇ! ನಿಮ್ಮ ಕಾರ್ಯವು ಮಟ್ಟಮಾಯವೇ! ನಿಮ್ಮನ್ನು ಮೊರೆಹೋಗುವವರು ತುಚ್ಛರೇ ಸರಿ!

[25] ನಾನು ಉತ್ತರ ದಿಕ್ಕಿನಿಂದ ಒಬ್ಬನನ್ನು ಎಬ್ಬಿಸಿ ಕರೆದು ತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿನಿಂದ ಬಂದಿದ್ದಾನೆ. ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಅವರ ಮೇಲೆ ಬಿದ್ದು ಕುಂಬಾರನು ಜೇಡಿಮಣ್ಣನ್ನು ತುಳಿಯುವ ಹಾಗೆ ತುಳಿಯುವನು.

[26] ಕಾರ್ಯವು ನಡೆಯುವುದಕ್ಕೆ ಮೊದಲು ಇವರಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಸಮಯಕ್ಕೆ ಮೊದಲೇ “ಅವನು ಸತ್ಯವಂತನು” ಎಂದು ಯಾರು ಮುಂತಿಳಿಸಿದ್ದಾರೆ? ಯಾರೂ ಏನನ್ನೂ ತಿಳಿಸಬಲ್ಲವರಲ್ಲ, ಏನನ್ನೂ ಹೇಳತಕ್ಕವರಲ್ಲ, ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.

[27] ನಾನು ಮೊದಲನೆಯವನಾಗಿ ಚೀಯೋನಿಗೆ, “ಇಗೋ, ಅವರನ್ನು ನೋಡು” ಎಂದು ಹೇಳಿ ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.

[28] ನಾನು ನೋಡಿದಾಗ ಇವರಲ್ಲಿ ಸಮರ್ಥರು ಯಾರೂ ಇಲ್ಲ. ನಾನು ಪ್ರಶ್ನೆ ಮಾಡಿದರೆ ಒಂದು ಮಾತನ್ನಾದರೂ ಹೇಳಬಲ್ಲ ಆಲೋಚಕನು ಇಲ್ಲವೇ ಇಲ್ಲ.

[29] ಆಹಾ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ವ್ಯರ್ಥವೇ, ಅವರ ಎರಕದ ಬೊಂಬೆಗಳು ಗಾಳಿ ಮತ್ತು ಶೂನ್ಯವೇ.

ಯೆಶಾಯನು — Chapters