[1] ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! ಯೆರೂಸಲೇಮೇ ಪರಿಶುದ್ಧ ಪಟ್ಟಣವೇ, ನಿನ್ನ ಸುಂದರವಾದ ಉಡುಪನ್ನು ಹಾಕಿಕೋ! ಇಂದಿನಿಂದ ಅಶುದ್ಧರೂ, ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡುವುದಿಲ್ಲ.
[2] ಯೆರೂಸಲೇಮೇ, ಧೂಳನ್ನು ಝಾಡಿಸಿಕೋ! ಎದ್ದು ಆಸನದ ಮೇಲೆ ಕುಳಿತುಕೋ! ಸೆರೆಯಲ್ಲಿ ಬಿದ್ದ ಚೀಯೋನ್ ಪುತ್ರಿಯೇ, ನಿನ್ನ ಕುತ್ತಿಗೆಯ ಬಂಧನವನ್ನು ಬಿಚ್ಚಿಕೋ!
[3] ಯೆಹೋವನ ಈ ಮಾತನ್ನು ಕೇಳಿರಿ, “ಲಾಭಪಡೆಯದೆ ನಿಮ್ಮನ್ನು ಮಾರಿದೆನು, ಹಣತಕ್ಕೊಳ್ಳದೆ ನಿಮ್ಮನ್ನು ಬಿಡುಗಡೆಮಾಡುವೆನು.”
[4] ಕರ್ತನಾದ ಯೆಹೋವನು ಹೀಗೆಂದುಕೊಳ್ಳುತ್ತಾನೆ, “ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ ಅಲ್ಲಿ ಸೆರೆಯಾದರು. ಅಶ್ಶೂರ್ಯರು ಕಾರಣವಿಲ್ಲದೆ ಅವರನ್ನು ಬಾಧೆಪಡಿಸಿದರು.”
[5] ಕರ್ತನಾದ ಯೆಹೋವನು ಹೇಳುವುದೇನೆಂದರೆ, “ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಸೆರೆತೆಗೆದುಕೊಂಡು ಹೋಗಿರುವಾಗ ನಾನು ಇಲ್ಲಿ ಸುಮ್ಮನಿರುವುದು ಹೇಗೆ? ನನ್ನ ಪ್ರಜೆಯನ್ನು ಆಳುವವರು ರೌದ್ರದಿಂದ ಅರಚುತ್ತಾರೆ. ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ.
[6] ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದುಕೊಳ್ಳುವರು. ಹೀಗೆ ಆ ದಿನದಲ್ಲಿ ಅವರ ಸಂಗಡ ಮಾತನಾಡಿದವನು ನಾನೇ. ಹೌದು ನಾನೇ” ಎಂದು ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು.
[7] ಪರ್ವತಗಳ ಮೇಲೆ ತ್ವರೆಪಡುತ್ತಾ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು, ರಕ್ಷಣೆಯನ್ನು ಪ್ರಕಟಿಸುತ್ತಾ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.
[8] ಇಗೋ, ನಿನ್ನ ಕಾವಲುಗಾರರ ಕೂಗು! ಸ್ವರವೆತ್ತಿ ಒಟ್ಟಿಗೆ ಹರ್ಷಧ್ವನಿಗೈಯುತ್ತಾರೆ. ಯೆಹೋವನು ಚೀಯೋನಿಗೆ ತಿರುಗಿ ಬರುವುದನ್ನು ಪ್ರತ್ಯಕ್ಷವಾಗಿ ನೋಡುವರು.
[9] ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ! ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ.
[10] ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.
[11] ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ಅದರಿಂದ ದೂರ ಹೋಗಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!
[12] ನೀವು ಅವಸರದಿಂದ ಹೊರಡಬೇಕಾಗಿಲ್ಲ, ಓಡಿಹೋಗಬೇಕಾಗಿಲ್ಲ. ಯೆಹೋವನು ನಿಮಗೆ ಮುಂಬಲವಾಗಿ ಮುಂದೆ ಹೋಗುವನು. ಇಸ್ರಾಯೇಲಿನ ದೇವರು ನಿಮಗೆ ಹಿಂಬಲವಾಗಿಯೂ ಕಾಯುವನು.
[13] ಇಗೋ, ನನ್ನ ಸೇವಕನು ಕೃತಾರ್ಥನಾಗುವನು. ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು.
[14] ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ, ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವುದನ್ನು ನೋಡಿ, ಅನೇಕರು ಹೇಗೆ ಹೆದರಿದರೋ,
[15] ಹಾಗೆಯೇ ಅನೇಕ ಜನಾಂಗಗಳವರು ಅವನನ್ನು ಕಂಡು ವಿಸ್ಮಯದಿಂದ ಚಕಿತರಾಗುವರು. ಅರಸರೂ ಅವನ ಮುಂದೆ ಬಾಯಿಮುಚ್ಚಿಕೊಳ್ಳುವರು. ಏಕೆಂದರೆ ಸುದ್ದಿಯೇ ಇಲ್ಲದ ಸಂಗತಿಯನ್ನು ನೋಡುವರು, ಎಂದೂ ಕೇಳದೇ ಇರುವ ವಿಷಯವನ್ನು ಗ್ರಹಿಸಿಕೊಳ್ಳುವರು.