Skip to content
Opens in a new window
Listen to this chapter • 2:49

[1] ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ಕರ್ತನು ಉನ್ನತೋನ್ನತವಾಗಿ ಸಿಂಹಾಸನಾರೂಢನಾಗಿರುವುದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಆಲಯದಲ್ಲೆಲ್ಲಾ ಹರಡಿತ್ತು.

[2] ಆತನ ಸುತ್ತಲು ಸೆರಾಫಿಯರು ಇದ್ದರು. ಪ್ರತಿಯೊಬ್ಬನು ಆರಾರು ರೆಕ್ಕೆಯುಳ್ಳವನಾಗಿ, ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು, ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದನು.

[3] ಆಗ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ” ಎಂದು ಕೂಗಿ ಹೇಳಿದನು.

[4] ಕೂಗುವವನ ಶಬ್ದಕ್ಕೆ ದ್ವಾರದ ಅಸ್ತಿವಾರವು ಕದಲಿದವು ಮತ್ತು ಧೂಮವು ಆಲಯದಲ್ಲೆಲ್ಲಾ ತುಂಬಿತು.

[5] ಆಗ ನಾನು, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು. ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು. ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡೆವಲ್ಲಾ!” ಎಂದು ಕೂಗಿಕೊಳ್ಳಲು,

[6] ಆಗ ಸೆರಾಫಿಯರಲ್ಲಿ ಒಬ್ಬನು ಯಜ್ಞವೇದಿಯಿಂದ ತಾನು ಉರಿಯುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು,

[7] ನನ್ನ ಬಾಯಿಗೆ ಮುಟ್ಟಿಸಿ, “ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು. ನಿನ್ನ ದೋಷವು ನೀಗಿತು. ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು” ಎಂದನು.

[8] ಆಗ, “ಯಾರನ್ನು ಕಳುಹಿಸಲಿ? ಯಾರು ನಮಗೋಸ್ಕರ ಹೋಗುವನು?” ಎಂಬ ಕರ್ತನ ನುಡಿಯನ್ನು ಕೇಳಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದೆನು.

[9] ಅದಕ್ಕೆ ಆತನು, “ನೀನು ಈ ಜನರ ಬಳಿಗೆ ಹೋಗಿ, ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ,

[10] ಕಣ್ಣಿನಿಂದ ನೋಡದಂತೆಯೂ, ಕಿವಿಯಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರಿಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಈ ಜನರ ಹೃದಯವನ್ನು ಕೊಬ್ಬಿಸಿ, ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣಿಗೆ ಅಂಟು ಬಳಿ” ಎಂದು ನನಗೆ ಹೇಳಿದನು.

[11] ಅದಕ್ಕೆ ನಾನು, “ಕರ್ತನೇ, ಇದು ಎಷ್ಟರವರೆಗೆ?” ಎಂದು ಕೇಳಲು ಅದಕ್ಕೆ ಆತನು, “ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ನಾಶ ಹೆಚ್ಚಾಗಿ ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಜನರಿಲ್ಲದೆ, ದೇಶವು ಸಂಪೂರ್ಣವಾಗಿ ಹಾಳಾಗುವವರೆಗೂ ಇದೇ ರೀತಿ ಇರುವುದು.

[12] ಯೆಹೋವನು ಮನುಷ್ಯರನ್ನು ದೂರಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗೆ ಇರುವುದು.

[13] ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ, ಅದೂ ಸಹ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ, ಉಳಿಯುವುದು ಬುಡ ಮಾತ್ರ” ಎಂದು ಉತ್ತರಕೊಟ್ಟನು.

ಯೆಶಾಯನು — Chapters