Skip to content
Opens in a new window
Listen to this chapter • 5:18

[1] ಈಗಲಾದರೋ, ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ ರೂಪಿಸಿದವನಾದ ಯೆಹೋವನು ಹೀಗೆನ್ನುತ್ತಾನೆ, “ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.

[2] ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು, ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಳುಗಿಸುವುದಿಲ್ಲ, ಬೆಂಕಿಯಲ್ಲಿ ನಡೆಯುವಾಗ ನೀನು ಸುಟ್ಟುಹೋಗುವುದಿಲ್ಲ, ಜ್ವಾಲೆಯು ನಿನ್ನನ್ನು ದಹಿಸದು.

[3] ಏಕೆಂದರೆ ಯೆಹೋವನೆಂಬ ನಾನು ನಿನ್ನ ದೇವರು, ಇಸ್ರಾಯೇಲರ ಸದಮಲಸ್ವಾಮಿಯಾದ ನಾನು ನಿನ್ನ ರಕ್ಷಕನು. ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ. ನಿನ್ನ ಬದಲಾಗಿ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ.

[4] ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ, ಮಾನ್ಯನೂ, ಪ್ರಿಯನೂ ಆಗಿರುವುದರಿಂದ, ನಾನು ನಿನ್ನ ಬದಲಾಗಿ ಮನುಷ್ಯರನ್ನೂ, ನಿನ್ನ ಪ್ರಾಣಕ್ಕೆ ಪ್ರತಿಯಾಗಿ ಜನಾಂಗಗಳನ್ನೂ ಕೊಡುವೆನು.

[5] ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ; ನಿನ್ನ ಸಂತತಿಯವರನ್ನು ಪೂರ್ವದಿಂದ ತರುವೆನು, ನಿನ್ನವರನ್ನು ಪಶ್ಚಿಮದಿಂದ ಕೂಡಿಸುವೆನು.

[6] ‘ಅವರನ್ನು ಒಪ್ಪಿಸಿಬಿಡು’ ಎಂದು ಉತ್ತರದಿಕ್ಕಿಗೂ ‘ತಡೆಯಬೇಡ’ ಎಂದು ದಕ್ಷಿಣಕ್ಕೂ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನೂ, ದಿಗಂತಗಳಲ್ಲಿರುವ ನನ್ನ ಕುಮಾರಿಯರನ್ನೂ,

[7] ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿ ಉಂಟುಮಾಡಿದ ನನ್ನ ಹೆಸರಿನವರೆಲ್ಲರನ್ನೂ ಬರಮಾಡಬೇಕೆಂದು ಅಪ್ಪಣೆಕೊಡುವೆನು.

[8] ಕಣ್ಣಿದ್ದರೂ ಕುರುಡಾದ, ಕಿವಿಯಿದ್ದರೂ ಕಿವುಡಾದ ಜನರನ್ನು ಕರೆ.

[9] ಎಲ್ಲಾ ಜನಾಂಗಗಳು ಒಟ್ಟಿಗೆ ಬರಲಿ, ಸಕಲದೇಶೀಯರು ನೆರೆಯಲಿ, ಇವರ ದೇವರುಗಳಲ್ಲಿ ಯಾರು ಈ ಸಂಗತಿಯನ್ನು ಮುಂತಿಳಿಸಬಲ್ಲರು? ನಡೆದ ಸಂಗತಿಗಳನ್ನು ಯಾರು ವಿವರಿಸಾರು? ತಾವು ಸತ್ಯವಂತರೆಂದು ಸ್ಥಾಪಿಸಿಕೊಳ್ಳುವುದಕ್ಕೆ ಸಾಕ್ಷಿಗಳನ್ನು ಕರೆದುತರಲಿ. ಆ ಸಾಕ್ಷಿಗಳು ಇವರ ಮಾತನ್ನು ಕೇಳಿ ‘ಇದು ನಿಜ’ ಎಂದು ಹೇಳಲಿ.

[10] ಯೆಹೋವನ ಮಾತೇನೆಂದರೆ, ‘ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು. ನೀವು ನನ್ನನ್ನು ತಿಳಿದು ನಂಬಿ, ನನ್ನನ್ನೇ ದೇವರು ಎಂದು ಗ್ರಹಿಸುವ ಹಾಗೆ ಇದನ್ನು ನಡೆಸಿದೆನು. ನನಗಿಂತ ಮೊದಲು ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ.

[11] ನಾನೇ, ನಾನೇ ಯೆಹೋವನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ.

[12] ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು.

[13] ಹೌದು, ಇಂದಿನಿಂದ ನಾನೇ ದೇವರು. ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಯಾರು ಅಡ್ಡಿ ಬರುವರು?’” ಎಂಬುದೇ ಯೆಹೋವನ ಮಾತು.

[14] ನಿಮ್ಮ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮಗೋಸ್ಕರ ದೂತನನ್ನು ಬಾಬಿಲೋನಿಗೆ ಕಳುಹಿಸಿ, ಕಸ್ದೀಯರನ್ನೆಲ್ಲಾ ತಮ್ಮ ವಿನೋದದ ಹಡಗುಗಳ ಮೇಲೆ ಪಲಾಯನ ಮಾಡುವಂತೆ ಅಟ್ಟಿಬಿಡುವೆನು.

[15] ನಾನು ಯೆಹೋವನು, ನಿಮ್ಮ ಸದಮಲಸ್ವಾಮಿಯು, ಇಸ್ರಾಯೇಲನ್ನು ಸೃಷ್ಟಿಸಿದವನು, ನಿಮ್ಮ ಅರಸನೂ ಆಗಿದ್ದೇನೆ.

[16] ಯಾರು ಸಮುದ್ರದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿದನೋ,

[17] ಯಾರು ರಥಗಳನ್ನು, ಕುದರೆಗಳನ್ನು, ಸೈನ್ಯಗಳನ್ನು, ಪರಾಕ್ರಮಶಾಲಿಗಳನ್ನು ಹೊರಡಿಸಿ, ಅವು ಬಿದ್ದು ಏಳಲಾರದಂತೆಯೂ, ದೀಪದೋಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿದವನು” ಯೆಹೋವನು ಹೀಗೆನ್ನುತ್ತಾನೆ,

[18] ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ.

[19] ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ, ಅರಣ್ಯದಲ್ಲಿ ನದಿಗಳನ್ನು ಹರಿಸುವೆನು.

[20] ಬಯಲಿನ ಮೃಗಗಳು, ನರಿಗಳು, ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅರಣ್ಯದಲ್ಲಿ ನೀರನ್ನು, ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವುದಕ್ಕೆ ಕೊಟ್ಟೆನು. ನಾನು ಸೃಷ್ಟಿಸಿಕೊಂಡ ಆಪ್ತಜನರ ಜಲಪಾನಕ್ಕಾಗಿ,

[21] ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ಸೃಷ್ಟಿಸಿಕೊಂಡಿದ್ದೇನೆ.

[22] “ಯಾಕೋಬೇ, ನೀನಾದರೋ ನನ್ನನ್ನು ಪ್ರಾರ್ಥಿಸಲಿಲ್ಲ, ಇಸ್ರಾಯೇಲೇ, ನೀನು ನನ್ನ ವಿಷಯದಲ್ಲಿ ಬೇಸರಗೊಂಡಿದ್ದಿ.

[23] ನೀನು ನನಗೆ ಹೋಮಕ್ಕಾಗಿ ಕುರಿ ಮೇಕೆಗಳನ್ನು ತಂದು ಯಜ್ಞಗಳಿಂದ ನನ್ನನ್ನು ಘನಪಡಿಸಲಿಲ್ಲ. ಕಾಣಿಕೆಗಳನ್ನು ಕೇಳಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.

[24] ನೀನು ನನಗೋಸ್ಕರ ಹಣಕೊಟ್ಟು ತೈಲವನ್ನು ತರಲಿಲ್ಲ, ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ. ನಿನ್ನ ದೋಷಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.

[25] ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿ ಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡುವುದಿಲ್ಲ.

[26] ನನಗೆ ನನ್ನ ಪಾಪಗಳನ್ನು ಜ್ಞಾಪಕಪಡಿಸು, ನಾವಿಬ್ಬರೂ ನಿನ್ನ ಅಪಾರಾಧ ಕುರಿತು ವಾದಿಸುವ, ನಿನ್ನ ಸದ್ಧರ್ಮವು ಗೊತ್ತಾಗುವಂತೆ ನಿನ್ನ ನ್ಯಾಯವನ್ನು ತೋರ್ಪಡಿಸು.

[27] ನಿನ್ನ ಮೂಲಪಿತೃ ಪಾಪಮಾಡಿದ್ದಾನೆ, ನಿನ್ನ ಬೋಧಕರು ನನಗೆ ದ್ರೋಹಮಾಡಿದ್ದಾರೆ.

[28] ಆದಕಾರಣ ನಾನು ಪವಿತ್ರಾಲಯದ ಪ್ರಧಾನರನ್ನು ಹೊಲಸಿಗೆ ತಂದು ಯಾಕೋಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗೂ ಒಪ್ಪಿಸಿಬಿಟ್ಟಿದ್ದೇನೆ.”

ಯೆಶಾಯನು — Chapters