Skip to content
Opens in a new window
Listen to this chapter • 4:26

[1] ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.

[2] ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವುದು.

[3] ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.

[4] ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರಿಬರುತ್ತಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.

[5] ನೀನು ಅವರನ್ನು ನೋಡಿ ಸಂತೋಷ ಸಂಭ್ರಮ ಪಡುವೆ, ನಿನ್ನ ಹೃದಯವು ಹರ್ಷಿಸಿ ಉಲ್ಲಾಸಿಸುವುದು; ಏಕೆಂದರೆ ಸಮುದ್ರ ವ್ಯಾಪಾರದ ಸಮೃದ್ಧಿಯು ನಿನಗೆ ಅತಿಯಾದ ಲಾಭತರುವುದು. ಕಡೆಗೆ ತಿರುಗುವುದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವುದು.

[6] ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.

[7] ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು.

[8] ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! ಮೇಘದೋಪಾದಿಯಲ್ಲಿ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆ ಹಾರಿ ಬರುತ್ತಿರುವ ಇವರು ಯಾರು?

[9] ಯೆಹೋವನು ನಿನ್ನನ್ನು ವೈಭವಪಡಿಸಿರುವುದನ್ನು ಕೇಳಿ ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ, ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವುದರಲ್ಲಿ ಮುಂದಾಗುತ್ತಿವೆ.

[10] ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಪುನಃ ಕಟ್ಟುವರು, ಅವರ ಅರಸರು ನಿನ್ನನ್ನು ಆರಾಧಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದು, ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.

[11] ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು. ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.

[12] ನಿನ್ನನ್ನು ಆರಾಧಿಸದ ಜನಾಂಗ ಮತ್ತು ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳಾಗಿ ಹೋಗುವವು.

[13] ನನ್ನ ಪವಿತ್ರಾಲಯವನ್ನು ಭೂಷಿಸುವುದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವುದು; ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.

[14] ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು.

[15] ನಿವಾಸಿಗಳು ತ್ಯಜಿಸಿದ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು, ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರದವರೆಗೆ ಉಲ್ಲಾಸಕರವಾಗುವಂತೆ ಮಾಡುವೆನು.

[16] ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.

[17] ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.

[18] ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತ್ಯಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಿಬರುವುದಿಲ್ಲ; ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.

[19] ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗುಂದುವುದಿಲ್ಲ; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು.

[20] ನಿನ್ನ ಸೂರ್ಯನು ಇನ್ನು ಮುಳುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಯಾಗುವುದು.

[21] ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ, ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.

[22] ಚಿಕ್ಕವನಿಂದ ಒಂದು ಕುಲವಾಗುವುದು, ಅಲ್ಪನಿಂದ ಬಲವಾದ ಜನಾಂಗವಾಗುವುದು. ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.

ಯೆಶಾಯನು — Chapters