Skip to content
Opens in a new window
Listen to this chapter • 2:39

[1] ಜ್ಞಾನ ಎಂಬಾಕೆಯು ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬಗಳನ್ನು ಕೆತ್ತಿಸಿದ್ದಾಳೆ.

[2] ಆಕೆಯು ಮಾಂಸದ ಆಹಾರನ್ನು ತಯಾರಿಸಿ, ತನ್ನ ದ್ರಾಕ್ಷಾರಸವನ್ನು ಬೆರೆಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.

[3] ಆಕೆಯು ತನ್ನ ದಾಸಿಯರನ್ನು ಕಳುಹಿಸುತ್ತಾಳೆ; ಆಕೆಯು ಪಟ್ಟಣದ ಅತಿ ಉನ್ನತ ಸ್ಥಳದಿಂದ ಕೂಗುತ್ತಾಳೆ,

[4] “ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,

[5] “ಬಾ, ನನ್ನ ಆಹಾರವನ್ನು ತಿಂದು, ನಾನು ಬೆರೆಸಿದ ದ್ರಾಕ್ಷಾರಸವನ್ನು ಕುಡಿ,” ಎಂದೂ

[6] “ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ ಮತ್ತು ವಿವೇಕದ ಮಾರ್ಗದಲ್ಲಿ ಹೋಗು,” ಎಂದೂ ಕೂಗುತ್ತಾಳೆ.

[7] ಪರಿಹಾಸ್ಯ ಮಾಡುವವನನ್ನು ಗದರಿಸುವವನು ತನ್ನನ್ನು ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.

[8] ಪರಿಹಾಸ್ಯ ಮಾಡುವವನನ್ನು ಗದರಿಸಬೇಡ ಅವನು ನಿನ್ನನ್ನು ಹಗೆ ಮಾಡುವನು; ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.

[9] ಜ್ಞಾನಿಗೆ ಶಿಕ್ಷಣ ನೀಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿಕೊಳ್ಳುವನು.

[10] ಯೆಹೋವ ದೇವರ ಭಯವೇ ಜ್ಞಾನಕ್ಕೆ ಮೂಲವು. ಪರಿಶುದ್ಧರ ಪರಿಜ್ಞಾನವೇ ತಿಳುವಳಿಕೆಯಾಗಿದೆ.

[11] ಏಕೆಂದರೆ ಜ್ಞಾನದ ಮೂಲಕ ನಿನ್ನ ಜೀವನದ ದಿನಗಳು ಹೆಚ್ಚುವುವು; ನಿನ್ನ ಜೀವನದ ವರ್ಷಗಳು ವೃದ್ಧಿಯಾಗುವುವು.

[12] ನೀನು ಜ್ಞಾನಿಯಾದರೆ, ನಿನ್ನ ಜ್ಞಾನವು ನಿನಗೆ ಪ್ರತಿಫಲ ಕೊಡುವುದು; ನೀನು ನಿಂದಿಸುವವನಾದರೆ, ನೀನೇ ಅದರ ಫಲವನ್ನು ಅನುಭವಿಸುವಿ.

[13] ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು; ಅವಳು ಅರಿವಿಲ್ಲದವಳು, ಏನೂ ತಿಳಿಯದವಳು.

[14] ಅವಳು ತನ್ನ ಮನೆಯ ಬಾಗಿಲಿನಲ್ಲಿ ಕುಳಿತು, ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ನಿಂತು,

[15] ತಮ್ಮ ಮಾರ್ಗವನ್ನು ಹಿಡಿದು ಹೋಗುವ ಪ್ರಯಾಣಿಕರನ್ನು ಕರೆಯುತ್ತಾಳೆ,

[16] “ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,

[17] “ಕದ್ದ ನೀರು ಸಿಹಿಯಾಗಿದೆ; ರಹಸ್ಯದಲ್ಲಿ ತಿನ್ನುವ ಆಹಾರವು ರುಚಿಯಾಗಿದೆ,” ಎಂದು ಹೇಳುತ್ತಾಳೆ.

[18] ಆದರೆ ಆ ಮನೆ ಸತ್ತವರ ಸ್ಥಾನವಾಗಿದೆ. ಅವಳ ಅತಿಥಿಗಳು ಪಾತಾಳದ ಅಗಾಧದಲ್ಲಿ ಬಿದ್ದಿದ್ದಾರೆಂದು ಅವನಿಗೆ ತಿಳಿಯದು.

ಜ್ಞಾನೋಕ್ತಿಗಳು — Chapters