Skip to content
Opens in a new window
Listen to this chapter • 5:00

[1] ಜ್ಞಾನವು ಕರೆಯುತ್ತದಲ್ಲವೋ? ತಿಳುವಳಿಕೆ ಎಂಬಾಕೆಯು ತನ್ನ ಸ್ವರವನ್ನು ಎತ್ತಿ ಕೂಗಿ ಕರೆಯುವುದಿಲ್ಲವೋ?

[2] ಉನ್ನತ ಸ್ಥಳಗಳ ತುದಿಯಲ್ಲಿಯೂ, ಹಾದಿಗಳ ಸಂಧಿಗಳಲ್ಲಿಯೂ ನಿಂತುಕೊಳ್ಳುತ್ತಾಳೆ.

[3] ಪಟ್ಟಣದ ಪ್ರವೇಶ ದ್ವಾರಗಳಲ್ಲಿಯೂ ಒಳಗೆ ಬರುವಾಗ ಅವಳು ಸ್ವರವೆತ್ತಿ ಹೇಳುವುದೇನೆಂದರೆ,

[4] “ಮನುಷ್ಯರೇ, ನಾನು ಕರೆಯುತ್ತಿರುವುದು ನಿಮ್ಮನ್ನೇ, ಮಾನವರಿಗಾಗಿಯೇ ನಾನು ಧ್ವನಿಗೈಯುತ್ತೇನೆ.

[5] ಮುಗ್ಧರೇ, ಜ್ಞಾನವನ್ನು ಗ್ರಹಿಸಿರಿ. ಬುದ್ಧಿಹೀನರೇ, ನೀವು ತಿಳುವಳಿಕೆಯ ಹೃದಯದವರಾಗಿರಿ.

[6] ಕೇಳಿರಿ, ಉತ್ಕೃಷ್ಟ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯುವೆನು.

[7] ನನ್ನ ಬಾಯಿಯು ಸತ್ಯವನ್ನು ಮಾತಾಡುವುದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ.

[8] ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯುಕ್ತವಾಗಿವೆ; ಮೂರ್ಖತನವಾಗಲಿ, ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.

[9] ವಿವೇಚಿಸುವವನಿಗೆ ನನ್ನ ಎಲ್ಲ ಮಾತುಗಳು ನೇರವಾಗಿರುವುದು. ತಿಳುವಳಿಕೆ ಉಳ್ಳವನಿಗೆ ಅವು ಪ್ರಾಮಾಣಿಕವಾಗಿಯೂ ಇರುವುದು.

[10] ಬೆಳ್ಳಿಗಿಂತ ನನ್ನ ಬೋಧನೆಯನ್ನು ಆರಿಸಿಕೋ ಉತ್ತಮ ಬಂಗಾರಕ್ಕಿಂತ ಮಿಗಿಲಾದ ತಿಳುವಳಿಕೆಯನ್ನು ಪಡೆದುಕೋ.

[11] ಏಕೆಂದರೆ ಮಾಣಿಕ್ಯಗಳಿಗಿಂತ ಜ್ಞಾನವು ಅಮೂಲ್ಯವಾದದ್ದು. ಅಪೇಕ್ಷಿಸತಕ್ಕ ಯಾವ ವಸ್ತುಗಳನ್ನು ಅದಕ್ಕೆ ಹೋಲಿಸಲಾಗದು.

[12] “ಜ್ಞಾನವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ತಿಳುವಳಿಕೆಯನ್ನೂ ವಿವೇಚನೆಯನ್ನೂ ನಾನು ಹೊಂದಿದ್ದೇನೆ.

[13] ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ವಕ್ರ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.

[14] ಸಮಾಲೋಚನೆಯೂ ಒಳ್ಳೆಯ ನ್ಯಾಯವೂ ನನ್ನಲ್ಲಿದೆ. ನನ್ನಲ್ಲಿ ಒಳನೋಟವೂ ಶಕ್ತಿಯೂ ಇವೆ.

[15] ನನ್ನ ಮೂಲಕ ರಾಜರು ಆಳುವರು; ಪ್ರಧಾನರು ನ್ಯಾಯವಾದ ತೀರ್ಪು ಕೊಡುವರು.

[16] ನನ್ನಿಂದ ಅಧಿಪತಿಗಳು ಆಳುತ್ತಾರೆ, ಕೀರ್ತಿವಂತರೆಲ್ಲರೂ ಭೂಮಿಯ ಮೇಲೆ ಆಳುವರು.

[17] ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ; ಹಂಬಲಿಸಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.

[18] ಐಶ್ವರ್ಯವೂ ಘನತೆಯೂ, ಶಾಶ್ವತ ಸಂಪತ್ತು ಹಾಗೂ ಸಮೃದ್ಧಿಯು ನನ್ನೊಂದಿಗಿವೆ.

[19] ನನ್ನ ಫಲವು ಬಂಗಾರಕ್ಕಿಂತಲೂ, ನನ್ನ ಆದಾಯವು ಉತ್ತಮವಾದ ಬೆಳ್ಳಿಗಿಂತಲೂ ಶ್ರೇಷ್ಠವಾಗಿವೆ.

[20] ನೀತಿಯ ಮಾರ್ಗದಲ್ಲಿಯೂ ನ್ಯಾಯದ ದಾರಿ ನಡುವೆಯೂ ನಾನು ನಡೆಯುತ್ತೇನೆ.

[21] ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದುವರು. ನಾನು ಅವರ ಬೊಕ್ಕಸಗಳನ್ನು ತುಂಬಿಸುವೆನು.

[22] “ಯೆಹೋವ ದೇವರು ತಮ್ಮ ಸೃಷ್ಟಿಕ್ರಮದಲ್ಲಿ ನನ್ನನ್ನು ಮೊದಲು ನಿರ್ಮಿಸಿದರು, ದೇವರ ಪುರಾತನ ಕಾರ್ಯಗಳಲ್ಲಿ ನಾನೇ ಮೊದಲು;

[23] ಪ್ರಾರಂಭದಲ್ಲಿ ಜಗದುತ್ಪತ್ತಿಗೆ ಮುಂಚೆಯೇ ಅನಾದಿಕಾಲದಲ್ಲಿ ದೇವರು ನನ್ನನ್ನು ಸೃಷ್ಟಿಸಿದರು.

[24] ಆಗಾಧಗಳು ಇಲ್ಲದೆ ಇರುವಾಗ ನಾನು ಹುಟ್ಟಿ ಬಂದೆನು, ನೀರಿನ ಬುಗ್ಗೆಗಳು ಇಲ್ಲದೆ ಇರುವಾಗಲೇ ನಾನಿದ್ದೆನು.

[25] ಪರ್ವತಗಳು ಸ್ಥಾಪಿತವಾಗುವುದಕ್ಕಿಂತ ಮುಂಚೆಯೂ ಬೆಟ್ಟಗುಡ್ಡಗಳಿಗಿಂತ ಮೊದಲು ನಾನು ಜನಿಸಿದೆನು.

[26] ಭೂಮಿಯನ್ನೂ ಹೊಲಗಳನ್ನೂ ಲೋಕದ ಅಣುಗಳನ್ನೂ ಅವರು ನಿರ್ಮಿಸದೆ ಇರುವಾಗಲೇ ನಾನು ಜನಿಸಿದೆನು.

[27] ಅವರು ಆಕಾಶಗಳನ್ನು ಸಿದ್ಧಪಡಿಸಿದಾಗ ಸಾಗರದ ಮೇಲೆ ಚಕ್ರವನ್ನು ಹಾಕಿದಾಗ,

[28] ಮೇಲೆ ಮೇಘಗಳನ್ನು ಅವರು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಅವರು ಬಲಪಡಿಸಿದಾಗ,

[29] ಪ್ರವಾಹಗಳು ತನ್ನ ಆಜ್ಞೆಯನ್ನು ಮೀರದಂತೆ ಸಮುದ್ರಕ್ಕೆ ಅವರು ಮೇರೆಯನ್ನು ಮಾಡಿ ಭೂಮಿಯ ಅಸ್ತಿವಾರಗಳನ್ನು ನೇಮಿಸಿದಾಗ, ನಾನು ಅಲ್ಲಿ ಇದ್ದೆನು.

[30] ಆಗ ನಾನು ಅವರೊಂದಿಗೆ ಕುಶಲ ಶಿಲ್ಪಿಯಂತೆ ಅವರ ಹತ್ತಿರ ಇದ್ದೆನು. ಅವರ ಸನ್ನಿಧಿಯಲ್ಲಿ ಯಾವಾಗಲೂ ಆನಂದಿಸುತ್ತಾ ಅನುದಿನವೂ ಸಂತೋಷಿಸುತ್ತಿದ್ದೆನು.

[31] ಅವರ ಭೂಮಿಯ ವಾಸಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು; ಮಾನವರೊಂದಿಗೆ ಆನಂದಿಸುತ್ತಿದ್ದೆನು.

[32] “ಆದ್ದರಿಂದ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.

[33] ನನ್ನ ಬೋಧನೆಯನ್ನು ಕೇಳಿ ಬುದ್ಧಿವಂತರಾಗಿರಿ; ಅದನ್ನು ನೀವು ತಿರಸ್ಕರಿಸಬೇಡಿರಿ.

[34] ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ, ನನ್ನ ಬಾಗಿಲುಗಳ ನಿಲುವುಗಳಲ್ಲಿ ನಿರೀಕ್ಷಿಸುತ್ತಾ, ನನ್ನ ಮಾತುಗಳನ್ನು ಕೇಳುವವರು ಧನ್ಯರು.

[35] ಏಕೆಂದರೆ ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಯೆಹೋವ ದೇವರ ಕೃಪೆಯನ್ನು ಹೊಂದುವನು.

[36] ಆದರೆ ನನ್ನನ್ನು ಬಿಟ್ಟು ದೂರಹೋಗುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”

ಜ್ಞಾನೋಕ್ತಿಗಳು — Chapters