Skip to content
Opens in a new window
Listen to this chapter • 2:58

[1] ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.

[2] ನೀನು ಜ್ಞಾನಕ್ಕೆ ಕಿವಿಗೊಟ್ಟು, ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,

[3] ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು, ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,

[4] ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ, ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,

[5] ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ; ದೇವರ ಅರಿವನ್ನು ಕಂಡುಕೊಳ್ಳುವೆ.

[6] ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ; ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.

[7] ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು, ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ಗುರಾಣಿಯಾಗಿದ್ದಾರೆ.

[8] ನ್ಯಾಯವಂತರ ದಾರಿಗಳನ್ನು ದೇವರು ಕಾಯುತ್ತಾರೆ; ತಮ್ಮ ನಂಬಿಗಸ್ತರ ಮಾರ್ಗವನ್ನು ಭದ್ರಪಡಿಸುತ್ತಾರೆ.

[9] ಆಗ ನೀನು ಸರಿಯಾದದ್ದನ್ನೂ ನ್ಯಾಯವನ್ನೂ ಯುಕ್ತವಾದದ್ದನ್ನು ಅರ್ಥಮಾಡಿಕೊಳ್ಳುವೆ, ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದುಕೊಳ್ಳುವೆ.

[10] ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿಸಿ, ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಹಿತಕರವಾಗಿರುವುದು.

[11] ನಿನ್ನ ವಿವೇಚನೆಯು ನಿನ್ನನ್ನು ಭದ್ರವಾಗಿ ಕಾಯುವುದು; ತಿಳುವಳಿಕೆಯು ನಿನ್ನನ್ನು ಕಾಪಾಡುವುದು.

[12] ಜ್ಞಾನವು ದುಷ್ಟರ ಮಾರ್ಗಗಳಿಂದಲೂ, ವಕ್ರರ ಮಾತುಗಳಿಂದಲೂ ಕಾಪಾಡುವುದು.

[13] ಅವರು ಕತ್ತಲೆಯ ಹಾದಿಗಳಲ್ಲಿ ನಡೆಯುವುದಕ್ಕೆ ನೇರವಾದ ದಾರಿಗಳನ್ನು ತೊರೆದುಬಿಡುತ್ತಾರೆ.

[14] ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ. ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.

[15] ಅವರ ಮಾರ್ಗಗಳು ವಕ್ರವಾಗಿವೆ; ತಮ್ಮ ನಡತೆಗಳಲ್ಲಿ ಅವರು ತಪ್ಪಿಹೋಗಿದ್ದಾರೆ.

[16] ಜಾರಿಣಿಯಿಂದಲೂ ದಾರಿತಪ್ಪಿದ ಪರಸ್ತ್ರೀಯ ವಶೀಕರಣದ ಮಾತುಗಳಿಂದಲೂ ಜ್ಞಾನವು ನಿನ್ನನ್ನು ರಕ್ಷಿಸುವುದು.

[17] ಅವಳು ತನ್ನ ಯೌವನ ಕಾಲದ ಪತಿಯನ್ನು ತ್ಯಜಿಸಿದ್ದಾಳೆ, ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನೂ ಕಡೆಗಣಿಸಿದ್ದಾಳೆ.

[18] ಏಕೆಂದರೆ ಅವಳ ಮನೆ ಮರಣ ಮಾರ್ಗ. ಅವಳ ದಾರಿ ಮೃತರ ಕಡೆಗೂ ನಡೆಸುತ್ತವೆ.

[19] ಅವಳ ಬಳಿಗೆ ಹೋಗುವ ಯಾವನೂ ಹಿಂದಿರುಗುವುದಿಲ್ಲ; ಜೀವಮಾರ್ಗಗಳನ್ನು ಅಂಥವರು ಹಿಡಿಯುವುದೇ ಇಲ್ಲ.

[20] ಆದ್ದರಿಂದ ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯುವೆ ನೀತಿವಂತರ ದಾರಿಯನ್ನು ನೀನು ಹಿಡಿಯುವೆ.

[21] ಏಕೆಂದರೆ ಪ್ರಾಮಾಣಿಕರು ದೇಶದಲ್ಲಿ ವಾಸಿಸುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿ ಇರುವರು.

[22] ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು; ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.

ಜ್ಞಾನೋಕ್ತಿಗಳು — Chapters