[1] ವಿವಾದದೊಂದಿಗೆ ತುಂಬಿದ ಔತಣದ ಮನೆಗಿಂತ, ಶಾಂತಿ ಸಮಾಧಾನದ ಒಣ ತುತ್ತು ಮೇಲು.
[2] ನಾಚಿಕೆಪಡಿಸುವ ಮಗನ ಮೇಲೆ ಜಾಣನಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
[3] ಸೋಸುವುದಕ್ಕೆ ಬೆಳ್ಳಿಗೆ ಕುಲುಮೆ ಪುಟ, ಬಂಗಾರಕ್ಕೆ ಆವಿಗೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರಿಶೋಧಿಸುತ್ತಾರೆ.
[4] ಕೇಡು ಮಾಡುವವನು ಕೆಟ್ಟ ಮಾತುಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು.
[5] ಬಡವರನ್ನು ಹಾಸ್ಯಮಾಡುವವನು, ತನ್ನನ್ನು ಸೃಷ್ಟಿಸಿದ ಯೆಹೋವ ದೇವರನ್ನು ನಿಂದಿಸುತ್ತಾನೆ; ಬೇರೆಯವರ ವಿಪತ್ತುಗಳಿಗೆ ಸಂತೋಷಿಸುವವನು ಶಿಕ್ಷೆಯನ್ನು ಹೊಂದುವನು.
[6] ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆತಾಯಿಗಳೇ.
[7] ಉತ್ತಮವಾದ ಪದಗಳು ಮೂರ್ಖನಿಗೆ ಸೂಕ್ತವಲ್ಲ; ಆಳುವವನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಆಯುಕ್ತವಲ್ಲವೇ.
[8] ಕೊಡುವವನ ಕಣ್ಣಿಗೆ ಲಂಚವು ಆಕರ್ಷಣೆಯಾಗಿದೆ; ಪ್ರತಿ ತಿರುವಿನಲ್ಲಿಯೂ ಯಶಸ್ಸು ಬರುತ್ತದೆ ಎಂದು ಅವರು ಭಾವಿಸುತ್ತಾರೆ.
[9] ದೋಷವನ್ನು ಕ್ಷಮಿಸುವವನು ಪ್ರೀತಿಯನ್ನು ಹುಡುಕುತ್ತಾನೆ; ಆದರೆ ದೋಷವನ್ನು ಎತ್ತಿ ಆಡುವವನು ಸ್ನೇಹಿತರಿಂದ ಪ್ರತ್ಯೇಕಗೊಳ್ಳುತ್ತಾನೆ.
[10] ಬುದ್ಧಿಹೀನನ ಬೆನ್ನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟುತ್ತದೆ.
[11] ತಿರುಗಿ ಬೀಳುವವನು ಕೆಟ್ಟದ್ದಕ್ಕೇ ತವಕಪಡುತ್ತಾನೆ; ಆದಕಾರಣ ಮರಣ ದೂತರನ್ನು ಅವನ ವಿರುದ್ಧ ಕಳುಹಿಸಲಾಗುವದು.
[12] ತನ್ನ ಮೂಢತೆಯಲ್ಲಿರುವ ಬುದ್ಧಿಹೀನನನ್ನು ಸಂಧಿಸುವುದಕ್ಕಿಂತ ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಸಂಧಿಸುವುದು ಮೇಲು.
[13] ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆಯಿಂದ ಕೇಡು ತೊಲಗುವುದೇ ಇಲ್ಲ.
[14] ಕಲಹದ ಪ್ರಾರಂಭವು ಆಣೆಕಟ್ಟು ಒಡೆದಂತೆ ಇರುವುದು; ಆದಕಾರಣ ಆ ಕಲಹಕ್ಕೆ ಕೈಹಾಕುವುದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
[15] ದುಷ್ಟರನ್ನು ನೀತಿವಂತರೆಂದು ನಿರ್ಣಯಿಸುವವನು, ನೀತಿವಂತರನ್ನು ಖಂಡಿಸುವವನೂ ಇವರಿಬ್ಬರೂ ಯೆಹೋವ ದೇವರಿಗೆ ಅಸಹ್ಯ.
[16] ಜ್ಞಾನವನ್ನು ಸಂಪಾದಿಸುವುದಕ್ಕೆ ಬುದ್ಧಿಹೀನನ ಕೈಯಲ್ಲಿ ಹಣ ಏಕೆ? ಅವನಿಗೆ ಕಲಿಯಲು ಮನಸ್ಸಿಲ್ಲವಲ್ಲ.
[17] ಸ್ನೇಹಿತನು ಎಲ್ಲಾ ಸಮಯದಲ್ಲಿ ಪ್ರೀತಿಸುತ್ತಾನೆ; ಆಪತ್ತಿನಲ್ಲಿ ಸಹಾಯಮಾಡುವಗೋಸ್ಕರ ಸಹೋದರನು ಹುಟ್ಟಿದ್ದಾನೆ.
[18] ಬುದ್ಧಿಹೀನನು ಕೈ ಕುಲುಕಿ ತನ್ನ ನೆರೆಯವನಿಗೆ ಜಾಮಿನನಾಗುತ್ತಾನೆ.
[19] ಕಲಹವನ್ನು ಪ್ರೀತಿಮಾಡುವವನು ಪಾಪವನ್ನು ಪ್ರೀತಿಮಾಡುತ್ತಾನೆ; ತನ್ನ ಗೋಡೆಯನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಆಮಂತ್ರಿಸುತ್ತಾನೆ.
[20] ವಕ್ರಹೃದಯವುಳ್ಳವನು ಸಮೃದ್ಧಿಯನ್ನು ಹೊಂದುವುದಿಲ್ಲ; ಮೋಸದ ನಾಲಿಗೆಯುಳ್ಳವನು ಹಾನಿಗೆ ಬೀಳುವನು.
[21] ಬುದ್ಧಿಹೀನ ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವುದಿಲ್ಲ.
[22] ಹರ್ಷಹೃದಯವು ಒಳ್ಳೆಯ ಔಷಧ; ಆದರೆ ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
[23] ನ್ಯಾಯದ ಮಾರ್ಗಗಳನ್ನು ತಿರುಗಿಸಿಬಿಡುವುದಕ್ಕೆ ದುಷ್ಟನು ಗುಪ್ತವಾಗಿ ಲಂಚವನ್ನು ತೆಗೆದುಕೊಳ್ಳುತ್ತಾನೆ.
[24] ವಿವೇಕಿಯು ಜ್ಞಾನವನ್ನು ತನ್ನ ಮುಂದೆ ಇಟ್ಟುಕೊಳ್ಳುತ್ತಾನೆ. ಆದರೆ ಬುದ್ಧಿಹೀನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಅಲೆಯುವವು.
[25] ಬುದ್ಧಿಹೀನನಾದ ಮಗನು ತನ್ನ ತಂದೆಗೆ ದುಃಖವೂ, ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
[26] ನೀತಿವಂತನಿಗೆ ದಂಡ ವಿಧಿಸುವುದು ಒಳ್ಳೆಯದಲ್ಲದಿದ್ದರೆ, ಖಂಡಿತವಾಗಿಯೂ ಪ್ರಾಮಾಣಿಕ ಅಧಿಕಾರಿಗಳನ್ನು ಹೊಡೆಯುವುದು ಸರಿಯಲ್ಲ.
[27] ಪರಿಜ್ಞಾನ ಹೊಂದಿರುವವನು ಮಿತವಾಗಿ ಮಾತನಾಡುತ್ತಾನೆ; ತಿಳುವಳಿಕೆಯನ್ನು ಹೊಂದಿರುವವನು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
[28] ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆನಿಸಿಕೊಳ್ಳುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿ ಎನಿಸಿಕೊಳ್ಳುವನು.