Skip to content
Opens in a new window
Listen to this chapter • 4:59

[1] ಮಗನೇ, ನಿನ್ನ ನೆರೆಯವನಿಗೆ ನೀನು ಹೊಣೆಯಾಗಿದ್ದರೆ, ಪರನಿಗಾಗಿ ನಿನ್ನ ಕೈಯನ್ನು ಒಡ್ಡಿದ್ದರೆ,

[2] ನೀನು ನುಡಿದ ನಿನ್ನ ಬಾಯಿ ಮಾತುಗಳಿಂದಲೇ ಸಿಕ್ಕಿಕೊಂಡಿರುವೆ. ನಿನ್ನ ಬಾಯಿ ಮಾತುಗಳೇ ನಿನ್ನನ್ನು ಸೆರೆಹಿಡಿದಿದೆ.

[3] ಮಗನೇ, ನೀನು ನಿನ್ನ ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ, ನಿನ್ನನ್ನು ನೀನು ತಪ್ಪಿಸಿಕೊಳ್ಳಲು ಇದನ್ನು ಮಾಡು: ಹೋಗಿ ನಿನ್ನನ್ನು ನೀನು ತಗ್ಗಿಸಿಕೋ, ನಿನ್ನ ನೆರೆಯವನಿಗೆ ವಿಶ್ರಾಂತಿಯನ್ನು ಕೊಡಬೇಡ.

[4] ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ನಿನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ.

[5] ಬೇಟೆಗಾರನ ಕೈಯಿಂದ ಜಿಂಕೆಯೂ, ಬಲೆ ಬೀಸುವವನ ಕೈಯಿಂದ ಪಕ್ಷಿಯೂ ತಪ್ಪಿಸಿಕೊಳ್ಳುವಂತೆ ನೀನು ತಪ್ಪಿಸಿಕೋ.

[6] ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವಂತನಾಗು.

[7] ನಾಯಕನಾಗಲೀ, ಮೇಲ್ವಿಚಾರಕನಾಗಲೀ, ಅಧಿಕಾರಿಯಾಗಲೀ ಇರುವೆಗೆ ಇಲ್ಲದೆ ಹೋದರೂ,

[8] ಬೇಸಿಗೆಯಲ್ಲಿ ಅದು ತನ್ನ ಆಹಾರವನ್ನು ಸಂಗ್ರಹಿಸುತ್ತದೆ. ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿಕೊಳ್ಳುತ್ತದೆ.

[9] ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆ ಮಾಡುವುದು? ನಿನ್ನ ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?

[10] ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?

[11] ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.

[12] ತೊಂದರೆಕೊಡುವವನೂ ಕೆಡುಕನೂ ಆಗಿರುವವನ ಬಾಯಿಂದ ಕುಟಿಲ ಮಾತೇ ಬರುವುದು.

[13] ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳು ಸನ್ನೆಮಾಡುತ್ತಾನೆ,

[14] ಅವನು ತನ್ನ ಹೃದಯದಲ್ಲಿ ಮೋಸಕರ ಯೋಜನೆಯನ್ನೇ ಮಾಡುತ್ತಾನೆ; ಯಾವಾಗಲೂ ಅವನು ಜಗಳವನ್ನು ಕಲ್ಪಿಸುತ್ತಾನೆ.

[15] ಆದ್ದರಿಂದ ಅವನಿಗೆ ವಿಪತ್ತು ಬೇಗ ಬರುವುದು; ಯಾವ ಪರಿಹಾರವಿಲ್ಲದೆ ಅವನು ತಟ್ಟನೆ ನಾಶವಾಗುವನು.

[16] ಈ ಆರು ವಿಷಯಗಳನ್ನು ಯೆಹೋವ ದೇವರು ಹಗೆ ಮಾಡುತ್ತಾರೆ; ಹೌದು, ಏಳು ದೇವರಿಗೆ ಅಸಹ್ಯವಾಗಿವೆ, ಅವು ಯಾವವೆಂದರೆ:

[17] ಹೆಮ್ಮೆಯ ದೃಷ್ಟಿ, ಸುಳ್ಳಾಡುವ ನಾಲಿಗೆ, ನಿರಪರಾಧಿಯ ರಕ್ತವನ್ನು ಸುರಿಸುವ ಕೈಗಳು,

[18] ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ನುಗ್ಗಲು ತ್ವರೆಪಡುವ ಕಾಲುಗಳು,

[19] ಅಸತ್ಯವನ್ನಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.

[20] ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಗೊಳ್ಳು, ನಿನ್ನ ತಾಯಿಯ ಬೋಧನೆಯನ್ನು ತ್ಯಜಿಸಬೇಡ.

[21] ಅವುಗಳನ್ನು ಯಾವಾಗಲೂ ನಿನ್ನ ಹೃದಯದಲ್ಲಿ ಬಂಧಿಸಿಕೋ. ಅವುಗಳನ್ನು ನಿನ್ನ ಕೊರಳಿಗೆ ಧರಿಸಿಕೋ.

[22] ನೀನು ನಡೆಯುವಾಗ ಅವು ನಿನಗೆ ಮಾರ್ಗದರ್ಶಿಯಾಗಿರುತ್ತವೆ. ನೀನು ಮಲಗುವಾಗ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಂದಿಗೆ ಮಾತಾಡುತ್ತವೆ.

[23] ಆಜ್ಞೆಯೇ ದೀಪವಾಗಿದೆ, ಬೋಧನೆಯೇ ಬೆಳಕಾಗಿದೆ; ಶಿಕ್ಷಣದ ತಿದ್ದುವಿಕೆಗಳು ಜೀವ ಮಾರ್ಗವಾಗಿವೆ.

[24] ಅವು ಕೆಟ್ಟ ಹೆಂಗಸಿನಿಂದಲೂ, ಪರಸ್ತ್ರೀಯ ವಂಚಕ ಮಾತಿನಿಂದಲೂ ನಿನ್ನನ್ನು ತಪ್ಪಿಸಿ ಕಾಪಾಡಬಲ್ಲವು.

[25] ನಿನ್ನ ಹೃದಯ ಅವಳ ಸೌಂದರ್ಯವನ್ನು ಮೋಹಿಸದಿರಲಿ. ಅವಳ ಕಣ್ಣುರೆಪ್ಪೆಗಳಿಂದ ಅವಳು ನಿನ್ನನ್ನು ವಶಮಾಡಿಕೊಳ್ಳದೆ ಇರಲಿ.

[26] ಏಕೆಂದರೆ ವೇಶ್ಯೆಯನ್ನು ಊಟದಿಂದ ಕೊಂಡುಕೊಳ್ಳಬಹುದು, ಆದರೆ ವ್ಯಭಿಚಾರಿಣಿ ಅಮೂಲ್ಯ ಜೀವವನ್ನೇ ಬೇಟೆಯಾಡುವಳು.

[27] ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ, ಅವನ ವಸ್ತ್ರಗಳು ಸುಡುವುದಿಲ್ಲವೋ?

[28] ಒಬ್ಬನು ಧಗಧಗಿಸುವ ಕೆಂಡದ ಮೇಲೆ ನಡೆದರೆ, ಅವನ ಪಾದಗಳು ಸುಡುವುದಿಲ್ಲವೋ?

[29] ಪರನ ಹೆಂಡತಿಯನ್ನು ಕೂಡುವವನ ಗತಿಯು ಹೀಗೆಯೇ ಇರುವದು. ಅವಳನ್ನು ಮುಟ್ಟುವ ಯಾವನೂ ದಂಡನೆಯಿಂದ ತಪ್ಪಿಸಿಕೊಳ್ಳನು.

[30] ಹಸಿದಾಗ ಕಳ್ಳನು ತನ್ನ ಹಸಿವೆಯನ್ನು ತೃಪ್ತಿಪಡಿಸಲು ಕಳವು ಮಾಡಿದರೆ, ಜನರು ಅವನನ್ನು ಹೀಯಾಳಿಸುವುದಿಲ್ಲ.

[31] ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡಬೇಕಾಗುವುದು. ತನ್ನ ಮನೆಯ ಆಸ್ತಿಯನ್ನೆಲ್ಲಾ ಸಹ ಅವನು ಕೊಡಬೇಕಾಗುವುದು.

[32] ವ್ಯಭಿಚಾರಿಯು ಬುದ್ಧಿಹೀನನಾಗಿದ್ದಾನೆ. ಹಾಗೆ ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುವನು.

[33] ಅವನಿಗೆ ಗಾಯವೂ ಅವಮಾನವೂ ಆಗುತ್ತವೆ. ಅವನ ನಿಂದೆಯು ಎಂದಿಗೂ ಅಳಿಸಲಾಗದು.

[34] ಏಕೆಂದರೆ ಮತ್ಸರವು ಪತಿಯ ಕ್ರೋಧವನ್ನು ಉದ್ರೇಕಿಸುವುದು. ಆದ್ದರಿಂದ ಮುಯ್ಯಿ ತೀರಿಸುವಾಗ ಅವನು ಕರುಣೆ ತೋರನು.

[35] ಅವನು ಯಾವ ಪರಿಹಾರವನ್ನು ಒಪ್ಪುವುದಿಲ್ಲ; ಎಷ್ಟು ದೊಡ್ಡ ಲಂಚ ಕೊಟ್ಟರೂ ಅವನು ಅದನ್ನು ತಿರಸ್ಕರಿಸುವನು.

ಜ್ಞಾನೋಕ್ತಿಗಳು — Chapters