[1] ಮನುಷ್ಯನಲ್ಲಿ ತನ್ನ ಹೃದಯದ ಯೋಜನೆಗಳು, ಆದರೆ ಸರಿಯಾದ ಉತ್ತರಕೊಡುವ ಶಕ್ತಿ ಯೆಹೋವ ದೇವರಿಂದಲೇ ಬರುವವು.
[2] ಮನುಷ್ಯನ ಮಾರ್ಗಗಳೆಲ್ಲಾ ತನ್ನ ದೃಷ್ಟಿಯಲ್ಲಿ ಶುದ್ಧವಾಗಿವೆ, ಆದರೆ ಯೆಹೋವ ದೇವರು ಅವನ ಉದ್ದೇಶಗಳನ್ನು ಪರೀಕ್ಷಿಸುತ್ತಾರೆ.
[3] ನಿನ್ನ ಕಾರ್ಯಗಳನ್ನು ಯೆಹೋವ ದೇವರಿಗೆ ಒಪ್ಪಿಸು, ಆಗ ನಿನ್ನ ಯೋಜನೆಗಳು ಸ್ಥಿರವಾಗುವುವು.
[4] ಯೆಹೋವ ದೇವರು ಎಲ್ಲವುಗಳನ್ನು ಅದರದೇ ಆದ ಉದ್ದೇಶಗಳಿಗಾಗಿ ಮಾಡಿದ್ದಾರೆ. ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿದ್ದಾರೆ.
[5] ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಯೆಹೋವ ದೇವರಿಗೆ ಅಸಹ್ಯ. ದುಷ್ಟನಿಗೆ ಶಿಕ್ಷೆಯು ತಪ್ಪುವುದಿಲ್ಲ.
[6] ಪ್ರೀತಿ ಮತ್ತು ಸತ್ಯತೆಗಳಿಂದ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತದೆ. ಯೆಹೋವ ದೇವರ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
[7] ಮನುಷ್ಯನ ಮಾರ್ಗಗಳು ಯೆಹೋವ ದೇವರನ್ನು ಮೆಚ್ಚಿಸಿದಾಗ, ಅವರು ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನದಲ್ಲಿರುವಂತೆ ಮಾಡುತ್ತಾರೆ.
[8] ಅನ್ಯಾಯದ ದೊಡ್ಡ ಆದಾಯಕ್ಕಿಂತಲೂ ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ.
[9] ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ, ಆದರೆ ಯೆಹೋವ ದೇವರು ಅವನ ಹೆಜ್ಜೆಗಳನ್ನು ಸ್ಥಾಪಿಸುತ್ತಾರೆ.
[10] ಅರಸನ ತುಟಿಗಳಲ್ಲಿ ದೈವೋಕ್ತಿ. ನ್ಯಾಯತೀರ್ಪಿನಲ್ಲಿ ಅವನ ಬಾಯಿಯು ದೋಷ ಮಾಡುವುದಿಲ್ಲ.
[11] ನ್ಯಾಯದ ತೂಕವೂ ತಕ್ಕಡಿಯೂ ಯೆಹೋವ ದೇವರದೇ. ಚೀಲದ ತೂಕಗಳು ಅವರ ಕೈಕೆಲಸವೇ.
[12] ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು. ಏಕೆಂದರೆ ನೀತಿಯಿಂದ ಸಿಂಹಾಸನವು ಸ್ಥಾಪಿಸಲಾಗುತ್ತದೆ.
[13] ನೀತಿಯ ತುಟಿಗಳಲ್ಲಿ ಅರಸರು ಆನಂದಿಸುತ್ತಾರೆ, ಯಥಾರ್ಥವಾದಿಯನ್ನು ಅವರು ಪ್ರೀತಿಸುತ್ತಾರೆ.
[14] ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ, ಆದರೆ ಜ್ಞಾನಿಯು ಅದನ್ನು ಶಮನಪಡಿಸುವನು.
[15] ಪ್ರಕಾಶಮಾನವಾದ ಅರಸನ ಮುಖದಲ್ಲಿ ಜೀವ, ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
[16] ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವುದು ಎಷ್ಟೋ ಉತ್ತಮ.
[17] ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ಬಹುದೂರ. ತನ್ನ ಮಾರ್ಗವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.
[18] ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ. ಬೀಳುವಿಕೆಯ ಮುಂಚೆ ಜಂಬದ ಆತ್ಮ.
[19] ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳುವದಕ್ಕಿಂತ, ದೀನರೊಂದಿಗೆ ದೀನ ಆತ್ಮವುಳ್ಳವರಾಗಿ ಇರುವುದು ಉತ್ತಮ.
[20] ಕಾರ್ಯವನ್ನು ಜ್ಞಾನದಿಂದ ನಡೆಸುವವನು ಒಳ್ಳೆಯದನ್ನು ಪಡೆಯುವನು. ಯೆಹೋವ ದೇವರಲ್ಲಿ ಭರವಸೆ ಇಡುವವನು ಧನ್ಯನು.
[21] ಹೃದಯದಲ್ಲಿ ಜ್ಞಾನವಂತರು ವಿವೇಚನೆಯುಳ್ಳವರು ಎಂದು ಕರೆಯಲಾಗುವರು. ತುಟಿಗಳ ಮಾಧುರ್ಯ ಮನವೊಲಿಸುವವು.
[22] ವಿವೇಕವು ವಿವೇಕಿಗಳಿಗೆ ಜೀವನದ ಬುಗ್ಗೆ, ಆದರೆ ಮೂರ್ಖತನವು ಮೂರ್ಖರಿಗೆ ಶಿಕ್ಷೆಯನ್ನು ತರುತ್ತದೆ.
[23] ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
[24] ವಿನಯದ ಮಾತುಗಳು ಜೇನುಗೂಡು ಪ್ರಾಣಕ್ಕೆ ಮಧುರವೂ, ಎಲುಬುಗಳಿಗೆ ಕ್ಷೇಮವೂ ಆಗಿವೆ.
[25] ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು, ಆದರೆ ಅದರ ಅಂತ್ಯವು ಮರಣದ ಮಾರ್ಗವೇ.
[26] ದುಡಿಯುವವನಿಗೆ ಅವನ ಹಸಿವೇ ದುಡಿಯುವಂತೆ ಮಾಡುವುದು, ಅವನ ಹಸಿವು ಅವನನ್ನು ಒತ್ತಾಯ ಮಾಡುವುದು.
[27] ಭಕ್ತಿಹೀನನು ಕೇಡಿನ ಕುಣಿ ಅಗೆಯುತ್ತಾನೆ. ಅವನ ತುಟಿಗಳು ಉರಿಯುವ ಬೆಂಕಿಯಂತಿವೆ.
[28] ಮೂರ್ಖನು ಜಗಳವನ್ನು ಬಿತ್ತುತ್ತಾನೆ. ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.
[29] ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುತ್ತಾನೆ.
[30] ವಕ್ರಬುದ್ಧಿಯ ಒಳಸಂಚುಗಳಿಗೆ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ. ತನ್ನ ತುಟಿಗಳನ್ನು ಕದಲಿಸುತ್ತಾ ಕೆಟ್ಟದ್ದು ಸಂಭವಿಸುವಂತೆ ಮಾಡುತ್ತಾನೆ.
[31] ನರೆಗೂದಲು ಉಜ್ವಲ ಕಿರೀಟ, ಅದು ನೀತಿಯ ಜೀವಿತದಲ್ಲಿ ಒದಗುತ್ತದೆ.
[32] ದೀರ್ಘಶಾಂತನು ಶೂರರಿಗಿಂತಲೂ ಶ್ರೇಷ್ಠ, ತನ್ನ ಮನಸ್ಸನ್ನು ಆಳುವವನು, ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.
[33] ಉಡಿಯಲ್ಲಿ ಚೀಟು ಹಾಕಬಹುದು, ಆದರೆ ಪ್ರತಿ ತೀರ್ಪು ಯೆಹೋವ ದೇವರದ್ದೇ.