Skip to content
Opens in a new window
Listen to this chapter • 4:06

[1] ಅರಸನ ಹೃದಯವು ಯೆಹೋವ ದೇವರ ಕೈಯಲ್ಲಿ ನೀರಿನ ಕಾಲುವೆಗಳಂತೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.

[2] ಮನುಷ್ಯನ ಪ್ರತಿಯೊಂದು ಮಾರ್ಗವು ಅವನ ದೃಷ್ಟಿಯಲ್ಲಿ ಸರಿಯಾಗಿದೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರೀಕ್ಷಿಸುತ್ತಾರೆ.

[3] ಯಜ್ಞಕ್ಕಿಂತ ನೀತಿ ನ್ಯಾಯಗಳನ್ನು ನಡೆಸುವುದು ಯೆಹೋವ ದೇವರಿಗೆ ಎಷ್ಟೋ ಮೆಚ್ಚಿಗೆಯಾಗಿದೆ.

[4] ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಉಳುವಿಕೆ ಇವೆಲ್ಲಾ ಪಾಪವೇ.

[5] ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ; ಆತುರತೆಯು ಬಡತನಕ್ಕೆ ನಡೆಸುತ್ತದೆ.

[6] ಸುಳ್ಳಿನ ನಾಲಿಗೆಯಿಂದ ಸಂಪಾದಿಸಿದ ಸಂಪತ್ತು ಕ್ಷಣಿಕ ಆವಿಯಂತೆಯೂ ಮೃತ್ಯುಪಾಶದಂತೆಯೂ ಆಗಿದೆ.

[7] ದುಷ್ಟರ ಹಿಂಸೆಯು ಅವರನ್ನು ನಾಶಪಡಿಸುವುದು; ಏಕೆಂದರೆ ನ್ಯಾಯವಾದದ್ದನ್ನು ಮಾಡುವುದನ್ನು ಅವರು ನಿರಾಕರಿಸುತ್ತಾರೆ.

[8] ದೋಷಿಯ ಮಾರ್ಗವು ಡೊಂಕು, ಮುಗ್ಧನ ನಡತೆ ಯಥಾರ್ಥ.

[9] ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು.

[10] ದುಷ್ಟರು ಕೇಡನ್ನು ಅಪೇಕ್ಷಿಸುತ್ತಾರೆ; ಅವನು ತನ್ನ ನೆರೆಯವನಿಗೂ ಯಾವ ದಯೆಯನ್ನೂ ತೋರಿಸನು.

[11] ಪರಿಹಾಸ್ಯಕಾರರನ್ನು ಶಿಕ್ಷಿಸಿದರೆ, ಮುಗ್ಧರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ, ಅವನು ಪರಿಜ್ಞಾನವನ್ನು ಹೊಂದುತ್ತಾನೆ.

[12] ನೀತಿವಂತನು ದುಷ್ಟರ ಮನೆಯನ್ನು ಗಮನಿಸುತ್ತಾನೆ; ದುಷ್ಟರನ್ನು ಕೇಡಿಗೆ ತಳ್ಳುವನು.

[13] ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನೇ ಕೂಗಿದಾಗ ಯಾರೂ ಅವನಿಗೆ ಉತ್ತರ ಕೊಡುವುದಿಲ್ಲ.

[14] ಗುಟ್ಟಾಗಿ ಕೊಡುವ ಬಹುಮಾನವು ಕೋಪವನ್ನು ಅಡಗಿಸುವುದು; ಮಡಿಲಲ್ಲಿ ಇಟ್ಟ ಲಂಚವು ಮಹಾ ಕೋಪವನ್ನು ಆರಿಸುವುದು.

[15] ನ್ಯಾಯತೀರಿಸುವುದು ನೀತಿವಂತರಿಗೆ ಸಂತೋಷ; ಆದರೆ ಕೆಟ್ಟದ್ದನ್ನು ಮಾಡುವವರಿಗೆ ಭೀತಿ.

[16] ವಿವೇಕದ ಹಾದಿಯಿಂದ ತಪ್ಪಿಸಿಕೊಳ್ಳುವವನು ಸತ್ತವರ ಸಹವಾಸದಲ್ಲಿ ವಿಶ್ರಾಂತಿ ಪಡೆಯುವನು.

[17] ಭೋಗಾಸಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ, ತೈಲವನ್ನೂ ಅಪೇಕ್ಷಿಸುವವನು ಎಂದಿಗೂ ಧನವಂತನಾಗನು.

[18] ದುಷ್ಟರು ನೀತಿವಂತರಿಗೂ, ದ್ರೋಹಿಗಳು ಸನ್ಮಾರ್ಗಿಗಳಿಗೂ ಈಡಾಗಿದ್ದಾರೆ.

[19] ಕಾಡುವ ಜಗಳಗಂಟಿ ಹೆಂಡತಿಯೊಂದಿಗೆ ವಾಸಮಾಡುವುದಕ್ಕಿಂತ, ಮರಭೂಮಿಯಲ್ಲಿ ವಾಸಿಸುವುದು ಲೇಸು.

[20] ಜ್ಞಾನವಂತರ ನಿವಾಸದಲ್ಲಿ ಆಯ್ದ ಐಶ್ವರ್ಯವೂ, ಎಣ್ಣೆಯೂ ಇರುತ್ತವೆ; ಆದರೆ ಬುದ್ಧಿಹೀನನು ಇದ್ದದ್ದೆಲ್ಲವನ್ನು ನುಂಗಿಬಿಡುತ್ತಾನೆ.

[21] ನೀತಿಯನ್ನೂ, ಕರುಣೆಯನ್ನೂ ಹಿಂಬಾಲಿಸುವವನು ಜೀವವನ್ನೂ, ನೀತಿಯನ್ನೂ, ಕೀರ್ತಿಯನ್ನೂ ಕಂಡುಕೊಳ್ಳುತ್ತಾನೆ.

[22] ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ, ಅವರು ಭರವಸವಿಟ್ಟ ಬಲವಾದ ಕೋಟೆಯನ್ನು ಕೆಡವಿ ಹಾಕುತ್ತಾನೆ.

[23] ತನ್ನ ಬಾಯಿಯನ್ನೂ, ನಾಲಿಗೆಯನ್ನೂ ಕಾಯುವವನು, ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.

[24] ಸೊಕ್ಕೇರಿ ಗರ್ವದಲ್ಲಿ ವರ್ತಿಸುವವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕ.

[25] ಸೋಮಾರಿಯ ಆಸೆಯು ಅವನನ್ನು ಕೊಲ್ಲುತ್ತದೆ; ಅವನ ಕೈಗಳು ದುಡಿಯುವುದಕ್ಕೆ ನಿರಾಕರಿಸುತ್ತವೆ.

[26] ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.

[27] ದುಷ್ಟರ ಯಜ್ಞವು ಅಸಹ್ಯ; ಅದನ್ನು ದುರ್ಬುದ್ಧಿಯಿಂದ ಅರ್ಪಿಸಿದರೆ, ಇನ್ನೂ ಎಷ್ಟೋ ಅಸಹ್ಯಕರ.

[28] ಸುಳ್ಳುಸಾಕ್ಷಿಯವನು ನಾಶವಾಗುವನು; ಆದರೆ ಕೇಳಿದ್ದನ್ನೇ ನುಡಿಯುವವನ ಸಾಕ್ಷಿ ಸದಾ ನಿಲ್ಲುವುದು.

[29] ದುಷ್ಟನು ತನ್ನ ಮುಖವನ್ನು ಕಠಿಣ ಮಾಡಿಕೊಳ್ಳುತ್ತಾನೆ; ಯಥಾರ್ಥವಂತನಾದರೋ ತನ್ನ ಮಾರ್ಗಗಳನ್ನು ಯೋಚಿಸುತ್ತಾರೆ.

[30] ಯೆಹೋವ ದೇವರಿಗೆ ವಿರೋಧವಾಗಿ ಯಾವ ಜ್ಞಾನವೂ, ವಿವೇಕವೂ, ಯೋಜನೆಯೂ ಇಲ್ಲ.

[31] ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಆದರೆ ಜಯ ದೊರೆಯುವುದು ಯೆಹೋವ ದೇವರಿಂದಲೇ.

ಜ್ಞಾನೋಕ್ತಿಗಳು — Chapters