Skip to content
Opens in a new window
Listen to this chapter • 4:33

[1] ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟನು ಓಡಿಹೋಗುತ್ತಾನೆ. ಆದರೆ ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.

[2] ದೇಶದ ದಂಗೆಯಿಂದ ಅನೇಕರು ನಾಯಕರಾಗುತ್ತಾರೆ. ಆದರೆ ಒಳನೋಟ ಹಾಗು ತಿಳುವಳಿಕೆಯ ನಾಯಕನಿಂದಲೇ ದೇಶವು ಸುಸ್ಥಿರವಾಗುವುದು.

[3] ಬಡವರನ್ನು ಹಿಂಸಿಸುವ ಅಧಿಕಾರಿಯು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.

[4] ಬೋಧನೆಯನ್ನು ತ್ಯಜಿಸುವವರು ದುಷ್ಟರನ್ನು ಹೊಗಳುತ್ತಾರೆ; ಆದರೆ ಬೋಧನೆಯನ್ನು ಕೈಗೊಳ್ಳುವವರು ಅವರೊಂದಿಗೆ ಹೋರಾಡುತ್ತಾರೆ.

[5] ನ್ಯಾಯವನ್ನು ದುಷ್ಟರು ಗ್ರಹಿಸುವುದಿಲ್ಲ; ಆದರೆ ಯೆಹೋವ ದೇವರನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ.

[6] ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರವಾಗಿರುವವನಿಗಿಂತ ನಿರ್ದೋಷಿಯಾಗಿ ನಡೆಯುವ ದರಿದ್ರನು ಶ್ರೇಷ್ಠನು.

[7] ವಿವೇಚನೆಯ ಮಗನು ದೇವರ ಶಿಕ್ಷಣವನ್ನು ಕೈಗೊಳ್ಳುವನು. ಆದರೆ ಹೊಟ್ಟೆಬಾಕರ ಸಂಗಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.

[8] ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು, ಬಡವರ ಮೇಲೆ ದಯೆ ತೋರಿಸುವವನಿಗೆ ಅದನ್ನು ಕೂಡಿಸುವನು.

[9] ಶಿಕ್ಷಣವನ್ನು ಕೇಳದಂತೆ ತನ್ನ ಕಿವಿ ಮುಚ್ಚಿಕೊಳ್ಳುವವನ ಪ್ರಾರ್ಥನೆಯು ದೇವರಿಗೆ ಅಸಹ್ಯ.

[10] ಪ್ರಾಮಾಣಿಕರನ್ನು ದುರ್ಮಾರ್ಗದಲ್ಲಿ ದಾರಿತಪ್ಪಿಸುವವನು, ತಾನೇ ತೋಡಿದ ಗುಂಡಿಯಲ್ಲಿ ಬೀಳುವನು. ನಿರ್ದೋಷಿಗಳಾದರೋ ಒಳ್ಳೆಯ ಸೊತ್ತನ್ನು ಪಡೆಯುವರು.

[11] ಐಶ್ವರ್ಯವಂತನು ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾಗಿದ್ದಾನೆ. ಆದರೆ ವಿವೇಚನೆಯುಳ್ಳ ಬಡವನು ಅವನ ವಂಚನೆಯನ್ನು ನೋಡಬಲ್ಲನು.

[12] ನೀತಿವಂತರಿಗೆ ಜಯವಾದರೆ, ದೊಡ್ಡ ಘನತೆ ಇರುವುದು. ಆದರೆ ದುಷ್ಟರಿಗೆ ಏಳಿಗೆಯಾದರೆ, ಮನುಷ್ಯರು ಅಡಗಿಕೊಳ್ಳುತ್ತಾರೆ.

[13] ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನಿಗೆ ಏಳಿಗೆ ಆಗುವುದಿಲ್ಲ. ಆದರೆ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರಕುವುದು.

[14] ಯಾವಾಗಲೂ ಯೆಹೋವ ದೇವರ ಭಯಭಕ್ತಿಯಲ್ಲಿ ನಡೆದುಕೊಳ್ಳುವವನು ಧನ್ಯನು. ಆದರೆ ಹೃದಯವನ್ನು ಕಠಿಣಪಡಿಸಿಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.

[15] ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ, ಬಡವರನ್ನು ದುಷ್ಟನು ಆಳುವನು.

[16] ಗ್ರಹಿಕೆಯಿಲ್ಲದ ಅಧಿಕಾರಿಯು ಮಹಾ ಸುಲಿಗೆಗಾರನು. ಆದರೆ ಲೋಭವನ್ನು ಹಗೆಮಾಡುವವನು ದೀರ್ಘಾಯುಷ್ಯನು.

[17] ನರಹತ್ಯದ ಅಪರಾಧ ಭಾವನೆಯಿಂದ ಇರುವವನು, ಮರಣದೆಡೆಗೆ ಓಡುತ್ತಿರುವನು, ಅವನನ್ನು ಯಾರೂ ತಡೆಯದಿರಲಿ.

[18] ನಿರ್ದೋಷಿಯಾಗಿ ನಡೆಯುವವನು ಸಂರಕ್ಷಣೆ ಹೊಂದುವನು. ವಕ್ರಮಾರ್ಗಿಯು ತಟ್ಟನೆ ಬೀಳುವನು.

[19] ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು. ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವುದು.

[20] ನಂಬಿಗಸ್ತನಾದ ಮನುಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; ಆದರೆ ಧನವಂತನಾಗಲು ಆತುರಪಡುವವನು, ನಿರ್ದೋಷಿಯಾಗಿರುವುದಿಲ್ಲ.

[21] ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹ ಮಾಡುವನು.

[22] ಧನವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವನಾಗಿದ್ದಾನೆ; ತನಗೆ ಬಡತನವು ಬರುವುದನ್ನು ಅವನು ಯೋಚಿಸುವುದಿಲ್ಲ.

[23] ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ, ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು.

[24] ತನ್ನ ತಂದೆಯಾನ್ನಾಗಲಿ, ತಾಯಿಯನ್ನಾಗಲಿ ದೋಚಿಕೊಂಡು, “ಇದು ದೋಷವಲ್ಲ,” ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.

[25] ದುರಾಶೆಯುಳ್ಳವನು ಕಲಹವನ್ನೆಬ್ಬಿಸುವನು; ಯೆಹೋವ ದೇವರಲ್ಲಿ ಭರವಸವಿಡುವವನು ಪುಷ್ಟನಾಗುವನು.

[26] ತನ್ನ ಬುದ್ಧಿಯಲ್ಲಿಯೇ ಭರವಸವಿಡುವವನು ಬುದ್ಧಿಹೀನನು; ಆದರೆ ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.

[27] ಬಡವರಿಗೆ ದಾನ ಮಾಡುವವನು, ಕೊರತೆ ಪಡುವುದಿಲ್ಲ; ಆದರೆ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುವವನಿಗೆ ಅನೇಕ ಶಾಪಗಳು.

[28] ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ, ಆದರೆ ಅವರು ನಾಶವಾದಾಗ ನೀತಿವಂತರು ವೃದ್ಧಿಯಾಗುತ್ತಾರೆ.

ಜ್ಞಾನೋಕ್ತಿಗಳು — Chapters