Skip to content
Opens in a new window
Listen to this chapter • 3:51

[1] ಬೇಸಿಗೆಯಲ್ಲಿ ಹಿಮದಂತೆಯೂ, ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನವು ಸರಿಯಲ್ಲ.

[2] ಅಲೆದಾಡುವ ಪಕ್ಷಿಯಂತೆಯೂ, ಹಾರಾಡುವ ಬಾನಕ್ಕಿಯಂತೆಯೂ ಕಾರಣವಿಲ್ಲದೆ ಕೊಡುವ ಶಾಪವು ತಗಲದು.

[3] ಕುದುರೆಗೆ ಬಾರುಗೋಲು, ಕತ್ತೆಗೆ ಕಡಿವಾಣವು, ಮೂಢನ ಬೆನ್ನಿಗೆ ಬೆತ್ತ.

[4] ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನೂ ಅವನಿಗೆ ಸಮಾನನಾದೀಯೆ.

[5] ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.

[6] ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ತನ್ನ ಪಾದಗಳನ್ನು ತಾನೇ ಕಡಿದುಕೊಂಡು ಇಲ್ಲವೆ ಕೇಡನ್ನು ಕುಡಿಯುತ್ತಾನೆ.

[7] ಕುಂಟನ ಕಾಲುಗಳು ಜೋಲಾಡುವ ಹಾಗೆಯೇ, ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುತ್ತದೆ.

[8] ಮೂಢನಿಗೆ ಕೊಡುವ ಮಾನವು ಕವಣಿಯಲ್ಲಿಟ್ಟ ಕಲ್ಲಿನ ಹಾಗೆ.

[9] ಕುಡುಕನ ಕೈಯಲ್ಲಿ ಮುಳ್ಳು ಕೋಲಿನಂತೆ ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುವುದು.

[10] ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವ ಬಿಲ್ಲುಗಾರನಂತೆ.

[11] ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.

[12] ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ಕಾಣುತ್ತಿದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ.

[13] ಸೋಮಾರಿಯು, “ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಭೀಕರ ಸಿಂಹ ಇದೆ,” ಎಂದು ಹೇಳುತ್ತಾನೆ.

[14] ಬಾಗಿಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ, ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾನೆ.

[15] ಸೋಮಾರಿಯು ತಟ್ಟೆಯಲ್ಲಿ ತನ್ನ ಕೈಯನ್ನು ಹಾಕಿ, ತಿರುಗಿ ಅದನ್ನು ತನ್ನ ಬಾಯಿಗೆ ತರಲಾರದಷ್ಟು ಆಯಾಸಪಡುತ್ತಾನೆ.

[16] ಜ್ಞಾನದಿಂದ ಉತ್ತರಿಸಬಲ್ಲ ಏಳು ಜನರಿಗಿಂತ, ತಾನೇ ಜ್ಞಾನಿ ಎಂದು ಸೋಮಾರಿಯು ಭಾವಿಸುತ್ತಾನೆ.

[17] ಒಬ್ಬನು ಹಾದುಹೋಗುತ್ತಾ ತನಗೆ ಸಂಬಂಧಿಸದೇ ಇರುವ ವ್ಯಾಜ್ಯದಲ್ಲಿ ತಲೆಹಾಕುವವನು ನಾಯಿಯ ಕಿವಿ ಹಿಡಿದವನಂತೆ ಇದ್ದಾನೆ.

[18] ತನ್ನ ನೆರೆಯವನನ್ನು ಮೋಸಗೊಳಿಸಿ, “ಇದು ತಮಾಷೆಗೋಸ್ಕರ ಮಾಡುತ್ತೇನೆ,” ಎಂದು ಹೇಳುವವನು, ಕೊಳ್ಳಿಗಳನ್ನೂ, ಬಾಣಗಳನ್ನೂ, ಸಾವನ್ನೂ ಬೀರುವ ಹುಚ್ಚನಂತೆಯೇ.

[20] ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿಹೋಗುತ್ತದೆ; ಹಾಗೆಯೇ ಚಾಡಿಕೋರನು ಇಲ್ಲದಿರುವಲ್ಲಿ ಜಗಳ ಶಮನವಾಗುವುದು.

[21] ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹ ಮಾಡುವವನು ಇರುವನು.

[22] ಚಾಡಿಕೋರನ ಮಾತುಗಳು ರುಚಿಕರ ಭಕ್ಷ್ಯದ ಹಾಗೆ ಹೊಟ್ಟೆಯ ಅಂತರ್ಭಾಗಗಳಿಗೆ ಇಳಿಯುತ್ತವೆ.

[23] ಕೆಟ್ಟ ಹೃದಯದಿಂದ ಸವಿನುಡಿಯುವ ತುಟಿಯು, ಬೆಳ್ಳಿಯ ಹೊದಿಕೆಯಿಂದ ಮುಚ್ಚಲ್ಪಟ್ಟ ಬೋಕಿಯಂತೆ ಇದೆ.

[24] ಶತ್ರುಗಳು ತಮ್ಮ ತುಟಿಗಳಿಂದ ವೇಷ ಧರಿಸುತ್ತಾರೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾರೆ.

[25] ಸವಿಮಾತನ್ನಾಡಿದರೆ ಅವನನ್ನು ನಂಬಬೇಡ; ಏಕೆಂದರೆ ಅವನ ಹೃದಯದಲ್ಲಿ ಏಳು ಅಸಹ್ಯ ಕಾರ್ಯಗಳಿವೆ.

[26] ಅವನ ಹಗೆತನವು ಮೋಸದಿಂದ ಮುಚ್ಚಲ್ಪಟ್ಟಿದ್ದರೂ, ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವುದು.

[27] ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರುಗಿ ಹೊರಳುವುದು.

[28] ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ಹಗೆ ಮಾಡುವನು; ಮುಖಸ್ತುತಿ ಮಾಡುವ ಬಾಯಿಯು ನಾಶವನ್ನುಂಟುಮಾಡುತ್ತದೆ.

ಜ್ಞಾನೋಕ್ತಿಗಳು — Chapters