Skip to content
Opens in a new window
Listen to this chapter • 3:52

[1] ಜ್ಞಾನಿಯಾದ ಮಗನು ತನ್ನ ತಂದೆಯ ಉಪದೇಶವನ್ನು ಸ್ವೀಕರಿಸುತ್ತಾನೆ; ಆದರೆ ಅಪಹಾಸ್ಯ ಮಾಡುವವನು ಗದರಿಕೆಯನ್ನು ಕೇಳುವುದಿಲ್ಲ.

[2] ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ಆನಂದಿಸುತ್ತಾನೆ, ಆದರೆ ವಿಶ್ವಾಸದ್ರೋಹಿಗಳಿಗೆ ಹಿಂಸೆಯ ಹಸಿವು ಇರುತ್ತದೆ.

[3] ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.

[4] ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ; ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು.

[5] ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ, ಆದರೆ ದುಷ್ಟರು ತಮ್ಮನ್ನು ತಾವೇ ದುರ್ವಾಸನೆಗೊಳಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಮೇಲೆ ಅವಮಾನವನ್ನು ತಂದುಕೊಳ್ಳುತ್ತಾರೆ.

[6] ನೀತಿಯು ಯಥಾರ್ಥವಂತನನ್ನು ಕಾಪಾಡುತ್ತದೆ; ಆದರೆ ದುಷ್ಟತನವು ಪಾಪಿಯನ್ನು ಕೆಡವುತ್ತದೆ.

[7] ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ; ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.

[8] ಐಶ್ವರ್ಯವಂತನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯದಿಂದಲೇ; ಆದರೆ ಬಡವನು ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

[9] ನೀತಿವಂತರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ; ದುಷ್ಟರ ದೀಪವು ಆರಿಹೋಗುವುದು.

[10] ಎಲ್ಲಿ ಗರ್ವವೋ ಅಲ್ಲಿ ಕಲಹ; ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.

[11] ಅಪ್ರಾಮಾಣಿಕವಾಗಿ ಹೊಂದಿದ ಸಂಪತ್ತು ಕ್ಷಯಿಸುವುದು; ಪ್ರಯಾಸದಿಂದ ಕೂಡಿಸಿದ ಸಂಪತ್ತು ವೃದ್ಧಿಗೊಳ್ಳುವುದು.

[12] ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ; ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.

[13] ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.

[14] ಮರಣದ ಪಾಶಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜ್ಞಾನವಂತರ ಉಪದೇಶವು ಜೀವದ ಬುಗ್ಗೆಯಾಗಿದೆ.

[15] ಒಳ್ಳೆಯ ಪ್ರಜ್ಞೆ ಇರುವ ವ್ಯಕ್ತಿಯನ್ನು ಗೌರವಿಸಲಾಗುತ್ತದೆ; ಆದರೆ ವಿಶ್ವಾಸದ್ರೋಹಿಯ ಮಾರ್ಗವು ನಾಶಕರವಾಗಿದೆ.

[16] ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಆದರೆ ಮೂರ್ಖನು ತನ್ನ ಮೂರ್ಖತ್ವವನ್ನು ಹೊರಗೆಡವುತ್ತಾನೆ.

[17] ದುಷ್ಟ ದೂತನು ಕೇಡಿಗೆ ಬೀಳುತ್ತಾನೆ; ಆದರೆ ನಂಬಿಗಸ್ತನಾದ ರಾಯಭಾರಿಯು ಆರೋಗ್ಯದಾಯಕನು.

[18] ಬೋಧನೆಯನ್ನು ಕಡೆಗಣಿಸುವವನಿಗೆ ಬಡತನವೂ, ಅವಮಾನವೂ ಬರುವುವು; ಗದರಿಕೆಯನ್ನು ಗಮನಿಸುವವನು ಸನ್ಮಾನ ಹೊಂದುವನು.

[19] ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ; ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.

[20] ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.

[21] ವಿಪತ್ತು ಪಾಪಿಗಳನ್ನು ಹಿಂಬಾಲಿಸುತ್ತದೆ; ಆದರೆ ನೀತಿವಂತರಿಗೆ ಒಳ್ಳೆಯದು ಪ್ರತಿಫಲವಾಗುವುದು.

[22] ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಟ್ಟುಬಿಡುವನು; ಆದರೆ ಪಾಪಿಯ ಸಂಪತ್ತು ನೀತಿವಂತರಿಗಾಗಿ ಸಂಗ್ರಹವಾಗಿದೆ.

[23] ಬಡವರಿಗೆ ಜವುಳು ಭೂಮಿಯಲ್ಲಿಯೂ ಬಹು ಬೆಳೆಯು ಸಿಕ್ಕುತ್ತದೆ; ಅನ್ಯಾಯವು ಅದನ್ನು ಹಾರಿಸಿಬಿಡುವುದು.

[24] ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ; ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.

[25] ನೀತಿವಂತನು ತನ್ನ ಪ್ರಾಣವು ತೃಪ್ತಿಯಾಗುವವರೆಗೆ ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವುದು.

ಜ್ಞಾನೋಕ್ತಿಗಳು — Chapters