Skip to content
Opens in a new window
Listen to this chapter • 4:03

[1] ಅನೇಕಬಾರಿ ಗದರಿಸಿದರೂ ತಗ್ಗದ ಹಟಮಾರಿ ಪರಿಹಾರವಿಲ್ಲದೆ ಫಕ್ಕನೆ ಮುರಿದು ಬೀಳುವನು.

[2] ಶಿಷ್ಟರು ಅಧಿಕಾರಕ್ಕೆ ಬಂದರೆ ಜನರು ಹರ್ಷಿಸುತ್ತಾರೆ. ಆದರೆ ದುಷ್ಟರು ಆಳಿದರೆ, ಜನರಿಗೆ ನರಳಾಟ.

[3] ಜ್ಞಾನಪ್ರಿಯನು ತಂದೆಗೆ ಆನಂದ ಆದರೆ ವೇಶ್ಯೆಯರ ಸಹವಾಸದಿಂದ ಆಸ್ತಿಯ ವಿನಾಶ.

[4] ನ್ಯಾಯದಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ, ಆದರೆ ಲಂಚಕೋರ ಅಧಿಕಾರಿ ದೇಶವನ್ನು ಕೆಡವಿ ಹಾಕುತ್ತಾನೆ.

[5] ತನ್ನ ನೆರೆಯವನನ್ನು ಸುಮ್ಮನೇ ಹೊಗಳುತ್ತಿರುವವನು, ನೆರೆಯವನ ಕಾಲಿಗೆ ಬಲೆಯನ್ನು ಒಡ್ಡುತ್ತಾನೆ.

[6] ಕೆಟ್ಟವನು ತನ್ನ ಪಾಪದಿಂದಲೇ ಸಿಕ್ಕಿಹಾಕಿಕೊಳ್ಳುತ್ತಾನೆ, ಆದರೆ ನೀತಿವಂತನು ಸಂತೋಷದಿಂದ ಹಾಡಿ ಹರ್ಷಿಸುತ್ತಾನೆ.

[7] ಬಡವರ ನ್ಯಾಯಕ್ಕಾಗಿ ನೀತಿವಂತನು ಚಿಂತಿಸುತ್ತಾನೆ. ಆದರೆ ದುಷ್ಟನಿಗೆ ಅಂಥಾ ಚಿಂತೆಯೇ ಇಲ್ಲ.

[8] ಪರಿಹಾಸ್ಯಗಾರರು ಪಟ್ಟಣದಲ್ಲಿ ಗಲಾಟೆ ಎಬ್ಬಿಸುತ್ತಾರೆ. ಆದರೆ ಜ್ಞಾನಿಗಳು ಕೋಪವನ್ನು ಆರಿಸುವರು.

[9] ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯಮಾಡುವಾಗ, ಮೂರ್ಖನು ರೇಗಿದರೂ ಅಪಹಾಸ್ಯಮಾಡಿದರೂ ಸಮಾಧಾನವೇ ಇರುವುದಿಲ್ಲ.

[10] ಕೊಲೆಪಾತಕರು ಪ್ರಾಮಾಣಿಕರನ್ನು ದ್ವೇಷಿಸುತ್ತಾರೆ. ಆದರೆ ಯಥಾರ್ಥವಂತರನ್ನು ನಾಶಮಾಡಲು ಯತ್ನಿಸುತ್ತಾರೆ.

[11] ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು. ಆದರೆ ಜ್ಞಾನಿಯು ಕೋಪವನ್ನು ಶಾಂತಿಯಿಂದ ತಡೆಹಿಡಿಯುತ್ತಾನೆ.

[12] ಒಬ್ಬ ಅಧಿಕಾರಿಯು ಸುಳ್ಳಿಗೆ ಕಿವಿಗೊಟ್ಟರೆ, ಅವನ ಸೇವಕರೆಲ್ಲರೂ ದುಷ್ಟರಾಗುತ್ತಾರೆ.

[13] ಬಡವರಿಗೂ ದಬ್ಬಾಳಿಕೆ ನಡೆಸುವವರಿಗೂ ಒಂದು ಸಂಗತಿ ಹುದುವಾಗಿರುವುದು: ಯೆಹೋವ ದೇವರು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವರು ಎಂಬುದೇ.

[14] ಅರಸನು ಬಡವರಿಗೆ ಪಕ್ಷಪಾತವಿಲ್ಲದೆ ನ್ಯಾಯತೀರಿಸಿದರೆ, ಅವನ ಸಿಂಹಾಸನವು ಎಂದೆಂದಿಗೂ ಸ್ಥಿರಗೊಳ್ಳುವುದು.

[15] ಬೆತ್ತ ಮತ್ತು ಬೆದರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಆದರೆ ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.

[16] ದುಷ್ಟರು ವೃದ್ಧಿಯಾದಾಗ, ಪಾಪವು ವೃದ್ಧಿಯಾಗುತ್ತದೆ. ಆದರೆ ನೀತಿವಂತರು ದುಷ್ಟರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.

[17] ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು; ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.

[18] ದೈವ ಪ್ರಕಟನೆ ಇಲ್ಲದಿರುವಾಗ, ಜನರು ನಾಶವಾಗುತ್ತಾರೆ; ಆದರೆ ಜ್ಞಾನೋಪದೇಶವನ್ನು ಕೈಗೊಳ್ಳುವವನು ಧನ್ಯನು.

[19] ಮಾತಿನಿಂದ ಮಾತ್ರ ಕೆಲಸಗಾರರನ್ನು ತಿದ್ದಲು ಸಾಧ್ಯವಿಲ್ಲ; ಏಕೆಂದರೆ ಅವರು ಅರ್ಥಮಾಡಿಕೊಂಡರೂ, ಅದರಂತೆ ನಡೆಯುವುದಿಲ್ಲ.

[20] ದುಡುಕಿ ಮಾತನಾಡುವ ವ್ಯಕ್ತಿಯನ್ನು ನೀನು ನೋಡಿದ್ದೀಯೋ? ಅಂಥವನಿಗಿಂತಲೂ ಬುದ್ಧಿಹೀನನ ವಿಷಯದಲ್ಲಿ ಹೆಚ್ಚು ನಿರೀಕ್ಷೆ ಇದೆ.

[21] ಬಾಲ್ಯದಿಂದ ಕೆಲಸಗಾರನನ್ನು ಅನುಕೂಲವಾಗಿ ಸಾಕಿ ಬಿಟ್ಟರೆ, ತರುವಾಯ ಅವನು ಎದುರು ಬೀಳಲು ಸಾಧ್ಯ.

[22] ಕೋಪಿಷ್ಟನು ಜಗಳವನ್ನೆಬ್ಬಿಸುವನು, ಮುಂಗೋಪಿಯು ಅನೇಕ ಪಾಪಗಳನ್ನು ಮಾಡುತ್ತಾನೆ.

[23] ಗರ್ವವು ಮನುಷ್ಯನನ್ನು ಹೀನಸ್ಥಿತಿಗೆ ತರುವುದು; ಆದರೆ ಆತ್ಮದಲ್ಲಿ ದೀನರು ಮೆಚ್ಚಿಕೆಯನ್ನು ಪಡೆಯುವರು.

[24] ಕಳ್ಳರ ಸಹವಾಸ ಮಾಡುವವರು ತಮಗೆ ತಾವೇ ಶತ್ರುಗಳು. ಅವರು ಆಣೆ ಇಟ್ಟರೂ ಅವರಲ್ಲಿ ಬದಲಾವಣೆ ಇರುವುದಿಲ್ಲ.

[25] ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು; ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು.

[26] ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ. ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.

[27] ನೀತಿವಂತರು ಅಪ್ರಾಮಾಣಿಕರನ್ನು ದ್ವೇಷಿಸುತ್ತಾರೆ. ದುಷ್ಟರು ಪ್ರಾಮಾಣಿಕರನ್ನು ತಿರಸ್ಕರಿಸುತ್ತಾರೆ.

ಜ್ಞಾನೋಕ್ತಿಗಳು — Chapters