[1] ಮಕ್ಕಳೇ, ತಂದೆಯ ಶಿಕ್ಷಣವನ್ನು ಕೇಳಿರಿ; ತಿಳುವಳಿಕೆಯನ್ನು ಗ್ರಹಿಸಲಿಕ್ಕೆ ಗಮನಕೊಡಿರಿ.
[2] ಏಕೆಂದರೆ ನಾನು ನಿಮಗೆ ಸದುಪದೇಶವನ್ನು ಮಾಡುವೆನು, ನನ್ನ ಉಪದೇಶವನ್ನು ಬಿಟ್ಟುಬಿಡಬೇಡಿರಿ.
[3] ನಾನೂ ಕೂಡ ನನ್ನ ತಂದೆಗೆ ನೆಚ್ಚಿನ ಮಗನೂ ನನ್ನ ತಾಯಿಗೆ ಮುದ್ದು ಮಗನೂ ಆಗಿದ್ದೆನು.
[4] ನನ್ನ ತಂದೆ ನನಗೆ ಬೋಧಿಸಿ ಹೇಳಿದ್ದೇನೆಂದರೆ, “ನನ್ನ ಮಾತುಗಳನ್ನು ಮನಃಪೂರ್ವಕವಾಗಿ ಪಾಲಿಸು; ನನ್ನ ಆಜ್ಞೆಗಳನ್ನು ಕೈಗೊಳ್ಳು, ಆಗ ನೀನು ಬಾಳುವೆ.
[5] ಜ್ಞಾನವನ್ನು ಪಡೆ, ತಿಳುವಳಿಕೆಯನ್ನು ಸಂಪಾದಿಸು; ನನ್ನ ಮಾತುಗಳನ್ನು ಮರೆಯದಿರು, ಅವುಗಳಿಂದ ದೂರವಾಗಬೇಡ.
[6] ಜ್ಞಾನವನ್ನು ಬಿಟ್ಟುಬಿಡಬೇಡ, ಆಕೆ ನಿನ್ನನ್ನು ಕಾಪಾಡುವಳು; ಆಕೆಯನ್ನು ಪ್ರೀತಿಸು, ಆಕೆ ನಿನ್ನನ್ನು ಕಾಯುವಳು.
[7] ಜ್ಞಾನವೇ ಮುಖ್ಯವಾದದ್ದು, ಆದ್ದರಿಂದ ಜ್ಞಾನವನ್ನು ಸಂಪಾದಿಸು; ನಿನ್ನಲ್ಲಿರುವ ಎಲ್ಲಾ ಸಂಪತ್ತನ್ನು ವ್ಯಯಮಾಡಿದರೂ ತಿಳುವಳಿಕೆಯನ್ನು ಪಡೆದುಕೋ.
[8] ಜ್ಞಾನವನ್ನು ನೀನು ಅಮೂಲ್ಯವೆಂದು ಎಣಿಸು, ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿಕೊ, ಆಕೆಯು ನಿನ್ನನ್ನು ಘನಪಡಿಸುವಳು.
[9] ಆಕೆಯನ್ನು ನಿನ್ನ ತಲೆಗೆ ಮಹಿಮೆಯ ಕಿರೀಟವಾಗಿರುವಳು; ಆಕೆಯನ್ನು ನಿನಗೆ ಘನತೆಯ ಕಿರೀಟವನ್ನು ಸಮರ್ಪಿಸುವಳು.”
[10] ಮಗನೇ, ಆಲಿಸಿ ನನ್ನ ಮಾತುಗಳನ್ನು ಸ್ವೀಕರಿಸು, ಆಗ ನಿನ್ನ ಜೀವನದ ವರ್ಷಗಳು ಹೆಚ್ಚುವವು.
[11] ಜ್ಞಾನ ಮಾರ್ಗದಲ್ಲಿ ನಾನು ನಿನಗೆ ಶಿಕ್ಷಣಕೊಡುವೆನು, ನೇರ ಮಾರ್ಗಗಳಲ್ಲಿ ನಿನ್ನನ್ನು ಮುನ್ನಡಿಸುವೆನು.
[12] ನೀನು ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು; ನೀನು ಓಡುವಾಗ ಮುಗ್ಗರಿಸಿ ಬೀಳುವುದಿಲ್ಲ.
[13] ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ; ಸದುಪದೇಶವನ್ನು ಕಾಪಾಡಿಕೋ, ಏಕೆಂದರೆ ಅದು ನಿನ್ನ ಜೀವವಾಗಿದೆ.
[14] ದುಷ್ಟರ ದಾರಿಯೊಳಗೆ ನೀನು ಪ್ರವೇಶಿಸದಿರು ಕೆಟ್ಟವರ ಮಾರ್ಗದಲ್ಲಿ ನೀನು ಹೋಗಬೇಡ.
[15] ಆ ದಾರಿಯಿಂದ ತೊಲಗು, ಅದರ ಪಕ್ಕದಲ್ಲಿ ಹಾದು ಹೋಗಬೇಡ; ಅದರಿಂದ ತಪ್ಪಿಸಿಕೊಂಡು, ನಿನ್ನ ಮಾರ್ಗದಲ್ಲಿ ಮುಂದೆ ನಡೆ.
[16] ಕೇಡು ಮಾಡದಿದ್ದರೆ ದುಷ್ಟರಿಗೆ ನಿದ್ರೆಬಾರದು; ಯಾರನ್ನಾದರೂ ಬೀಳಿಸದಿದ್ದರೆ, ಅವರಿಗೆ ನಿದ್ರೆ ಹತ್ತುವುದಿಲ್ಲ.
[17] ಅವರಿಗೆ ದುಷ್ಟತನವೇ ಆಹಾರ, ಬಲಾತ್ಕಾರವೇ ಅವರಿಗೆ ದ್ರಾಕ್ಷಾರಸ.
[18] ನೀತಿವಂತರ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು, ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.
[19] ಆದರೆ, ದುಷ್ಟರ ಮಾರ್ಗವು ಕಗ್ಗತ್ತಲಿನಂತಿದೆ. ಅವರು ಯಾವುದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
[20] ಮಗನೇ, ನನ್ನ ಮಾತುಗಳಿಗೆ ಗಮನಕೊಡು; ನನ್ನ ನುಡಿಗಳಿಗೆ ಕಿವಿಗೊಡು.
[21] ಆ ನುಡಿಗಳು ನಿನ್ನ ಕಣ್ಣುಗಳಿಂದ ತಪ್ಪಿ ಹೋಗದಿರಲಿ; ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.
[22] ಏಕೆಂದರೆ ಆ ನುಡಿಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ, ದೇಹಕ್ಕೆಲ್ಲಾ ಆರೋಗ್ಯವೂ ಆಗಿವೆ.
[23] ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ.
[24] ವಕ್ರಮಾತುಗಳನ್ನು ನಿನ್ನ ಬಾಯಿಂದ ತೊಲಗಿಸಿ; ಕೆಟ್ಟ ಮಾತುಗಳು ನಿನ್ನ ತುಟಿಗಳಿಂದ ದೂರವಿರಲಿ.
[25] ನಿನ್ನ ದೃಷ್ಟಿ ನೇರವಾಗಿಯೇ ನೋಡಲಿ; ನಿನ್ನ ನೋಟವು ನೇರವಾಗಿ ನಿನ್ನ ಮುಂದೆಯೇ ನಾಟಿರಲಿ.
[26] ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ; ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ.
[27] ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ.