Skip to content
Opens in a new window
Listen to this chapter • 4:31

[1] ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು:

[2] ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು! ನನ್ನ ಪ್ರಾರ್ಥನೆಗೆ ಉತ್ತರವಾದ ನನ್ನ ಮಗನೇ ಕೇಳು!

[3] ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು. ರಾಜರನ್ನೇ ಹಾಳುಮಾಡಬಲ್ಲ ಸ್ತ್ರೀಯರಿಗೆ ನಿನ್ನ ಹಣ ಸಮಯವನ್ನು ವ್ಯಯಮಾಡದಿರು.

[4] ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ, ದ್ರಾಕ್ಷಾರಸ ಕುಡಿಯುವದು ರಾಜರಿಗೆ ಯೋಗ್ಯವಲ್ಲ. ಮದ್ಯಪಾನ ಅಧಿಕಾರಿಗಳಿಗೆ ಯೋಗ್ಯವಲ್ಲ;

[5] ಕುಡಿದರೆ ಅವರು ನಿಯಮವನ್ನು ಮರೆತು, ಬಾಧಿತರಿಗೆ ನ್ಯಾಯವನ್ನು ನೀಡುವುದಿಲ್ಲ.

[6] ನಾಶವಾಗುವವರಿಗೆ ಮದ್ಯಪಾನವಿರಲಿ. ಮನೋವ್ಯಥೆಪಡುವವರಿಗೆ ಮದ್ಯವಿರಲಿ.

[7] ಅವರು ಕುಡಿದು ಬಡತನವನ್ನು ಮರೆಯಲಿ. ತಮ್ಮ ಯಾತನೆಯನ್ನು ಜ್ಞಾಪಕಕ್ಕೆ ತಾರದಿರಲಿ.

[8] ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು, ಅನಾಥರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಟ್ಟು ಮಾತನಾಡು.

[9] ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು. ಬಡವರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ಹಕ್ಕುಬಾಧ್ಯತೆಯನ್ನು ಕಾಪಾಡು.

[10] ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಅವಳು ಹವಳಕ್ಕಿಂತಲೂ ಬಹು ಅಮೂಲ್ಯಳು.

[11] ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ, ಅವನಿಗೆ ಯಾವ ಆದಾಯದ ಕೊರತೆಯೂ ಇರುವುದಿಲ್ಲ.

[12] ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೆಯದನ್ನೇ ಮಾಡುವಳು.

[13] ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು, ತನ್ನ ಚಟುವಟಿಕೆಯ ಕೈಗಳಿಂದ ಕೆಲಸ ಮಾಡುವಳು.

[14] ಆಕೆಯು ವರ್ತಕರ ಹಡಗುಗಳಂತೆ ಇರುವಳು; ದೂರದಿಂದ ಆಹಾರವನ್ನು ಆಕೆಯು ತರುವಳು.

[15] ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು; ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು, ತನ್ನ ದಾಸಿಯರಿಗೆ ದಿನದ ಕೆಲಸವನ್ನು ಹಂಚುವಳು.

[16] ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ. ತನ್ನ ಕೈಕೆಲಸದ ಆದಾಯದಿಂದ ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.

[17] ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ. ತನ್ನ ಶಕ್ತಿಯುತ ತೋಳುಗಳಿಂದ ಕೆಲಸ ಮಾಡುತ್ತಾಳೆ.

[18] ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ. ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.

[19] ಅವಳು ರಾಟೆಯ ಮೇಲೆ ಕೈಹಾಕಿ, ಕದಿರನ್ನು ಹಿಡಿಯುತ್ತಾಳೆ.

[20] ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ. ಹೌದು, ದಿಕ್ಕಿಲ್ಲದವರಿಗೆ ದಾನ ಮಾಡುತ್ತಾಳೆ.

[21] ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ. ಏಕೆಂದರೆ ಆಕೆಯ ಮನೆಯವರೆಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ.

[22] ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ. ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.

[23] ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ. ದೇಶದ ಹಿರಿಯರ ಮಧ್ಯದಲ್ಲಿ ಪ್ರಸಿದ್ಧನಾಗಿ ಕುಳಿತಿರುವನು.

[24] ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ. ಆಕೆಯು ನಡುಕಟ್ಟುಗಳನ್ನು ತಯಾರಿಸಿ ವರ್ತಕರಿಗೆ ಒದಗಿಸುತ್ತಾಳೆ.

[25] ಆಕೆಯ ಉಡುಪು ಬಲವೂ ಘನತೆಯೂ ಆಗಿವೆ. ಭವಿಷ್ಯತ್ತಿನ ಭಯವಿಲ್ಲದೆ ಆಕೆಯು ನಗುವಳು.

[26] ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ. ಆಕೆಯ ನಾಲಿಗೆಯ ಮೇಲೆ ನಂಬಿಗಸ್ತ ಶಿಕ್ಷಣ ಇದೆ.

[27] ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಸೋಮಾರಿಯಾಗಿ ಕೆಲಸಮಾಡದೆ ಆಹಾರವನ್ನು ತಿನ್ನುವುದಿಲ್ಲ.

[28] ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು. ಆಕೆಯ ಪತಿಯು ಸಹ ಆಕೆಯನ್ನು,

[29] “ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ. ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು,” ಎಂದು ಹೊಗಳುವನು.

[30] ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ. ಆದರೆ ಯೆಹೋವ ದೇವರಿಗೆ ಭಯಪಡುವವಳೇ ಪ್ರಶಂಸನೀಯಳು.

[31] ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ. ಪಟ್ಟಣದ ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.

ಜ್ಞಾನೋಕ್ತಿಗಳು — Chapters