Skip to content
Opens in a new window
Listen to this chapter • 4:57

[1] ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.

[2] ತನ್ನ ಯಥಾರ್ಥತೆಯಲ್ಲಿ ನಡೆಯುವವನು ಯೆಹೋವ ದೇವರಿಗೆ ಭಯಪಡುತ್ತಾನೆ, ಆದರೆ ಅವರನ್ನು ತಿರಸ್ಕರಿಸುವವರು ತಮ್ಮ ಮಾರ್ಗಗಳಲ್ಲಿ ಮೋಸ ಹೋಗುತ್ತಾರೆ.

[3] ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ, ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು.

[4] ಎತ್ತುಗಳು ಇಲ್ಲದೆ ಇರುವಲ್ಲಿ ಗೋದಲಿಯು ಶುಚಿಯಾಗಿರುತ್ತದೆ, ಆದರೆ ಎತ್ತಿನ ಬಲದಿಂದಲೇ ಬೆಳೆಯು ಹೇರಳವಾಗಿ ವೃದ್ಧಿಯಾಗುತ್ತದೆ.

[5] ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು, ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.

[6] ಅಪಹಾಸ್ಯ ಮಾಡುವವನು ಜ್ಞಾನವನ್ನು ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ, ಆದರೆ ವಿವೇಚಿಸುವವನಿಗೆ ಜ್ಞಾನವು ಸುಲಭವಾಗಿದೆ.

[7] ನೀನು ಬುದ್ಧಿಹೀನನ ತುಟಿಗಳಲ್ಲಿ ಪರಿಜ್ಞಾನವನ್ನು ಕಾಣದೆ ಹೋದರೆ, ಅವನ ಬಳಿಯಿಂದ ಹೊರಟು ಹೋಗು.

[8] ಜಾಣನ ಜ್ಞಾನವು ತನ್ನ ಮಾರ್ಗಗಳಿಗೆ ಆಲೋಚನೆ ನೀಡುತ್ತದೆ. ಮೂಢರ ಬುದ್ಧಿಹೀನತೆಯು ಮೋಸಕರ.

[9] ಬುದ್ಧಿಹೀನರು ಪಾಪಪರಿಹಾರವನ್ನು ಅಪಹಾಸ್ಯ ಮಾಡುವರು, ಆದರೆ ನೀತಿವಂತರಿಗೆ ದಯೆಯಿದೆ.

[10] ಹೃದಯಕ್ಕೆ ತನ್ನ ವ್ಯಥೆಯು ಗೊತ್ತು; ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ.

[11] ದುಷ್ಟರ ಮನೆಯು ನಾಶವಾಗುವುದು, ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು.

[12] ಮನುಷ್ಯ ದೃಷ್ಟಿಗೆ ಸರಿ ತೋರುವ ಒಂದು ಮಾರ್ಗವಿದೆ, ಆದರೆ ಅದರ ಅಂತ್ಯವು ಮರಣದ ಮಾರ್ಗಗಳೇ.

[13] ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು, ಅದರ ಉಲ್ಲಾಸದ ಅಂತ್ಯವು ಸಂತಾಪವೇ.

[14] ಭ್ರಷ್ಟನು ತನ್ನ ದುಷ್ಕರ್ಮಗಳಿಂದ ದಣಿಯನು, ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.

[15] ಅರಿವಿಲ್ಲದವರು ಯಾವ ಮಾತನ್ನಾದರೂ ನಂಬುತ್ತಾರೆ, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.

[16] ಜ್ಞಾನಿಯು ಯೆಹೋವ ದೇವರಿಗೆ ಭಯಪಟ್ಟು ಕೆಟ್ಟತನದಿಂದ ದೂರ ಹೋಗುವನು, ಆದರೆ ಬುದ್ಧಿಹೀನನು ಯೋಚಿಸದೆ ಆತ್ಮವಿಶ್ವಾಸದಿಂದ ನಡೆಯುವನು.

[17] ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ, ಜನರು ಕುಯುಕ್ತಿಯುಳ್ಳವನನ್ನು ಹಗೆ ಮಾಡುತ್ತಾರೆ.

[18] ಅರಿವಿಲ್ಲದವರು ಮೂರ್ಖತನಕ್ಕೆ ಬಾಧ್ಯರಾಗುತ್ತಾರೆ, ಆದರೆ ಜಾಣರು ಪರಿಜ್ಞಾನದಿಂದ ಆವರಿಸುತ್ತಾರೆ.

[19] ದುಷ್ಟರು ಒಳ್ಳೆಯವರಿಗೆ ಬಾಗುತ್ತಾರೆ, ದುಷ್ಟರು ನೀತಿವಂತರ ದ್ವಾರಗಳಲ್ಲಿ ಅಡ್ಡ ಬೀಳುತ್ತಾರೆ.

[20] ಬಡವನು ಅವನ ನೆರೆಯವನಿಂದಲೇ ಕಡೆಗಣಿಸಲಾಗುವನು; ಆದರೆ ಐಶ್ವರ್ಯವಂತನಿಗೆ ಬಹುಜನ ಮಿತ್ರರು.

[21] ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪಮಾಡುತ್ತಾನೆ, ಬಡವರ ಮೇಲೆ ಕನಿಕರ ತೋರಿಸುವವನು ಧನ್ಯನು.

[22] ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ? ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು.

[23] ಎಲ್ಲಾ ಪ್ರಯಾಸದಲ್ಲಿ ಲಾಭವಿದೆ, ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ.

[24] ಜ್ಞಾನವಂತರ ಕಿರೀಟವೇ ಅವರ ಸಂಪತ್ತು, ಆದರೆ ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವನ್ನು ನೀಡುತ್ತದೆ.

[25] ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ, ಸುಳ್ಳುಸಾಕ್ಷಿಯು ಮೋಸಗಾರನು.

[26] ಯೆಹೋವ ದೇವರಿಗೆ ಭಯಪಡುವವನು ಭದ್ರಕೋಟೆಯನ್ನು ಹೊಂದಿದ್ದಾನೆ. ಆತನ ಮಕ್ಕಳಿಗೆ ಆಶ್ರಯವು ಇರುವುದು.

[27] ಯೆಹೋವ ದೇವರ ಭಯವು ಜೀವದ ಬುಗ್ಗೆಯಾಗಿದೆ. ಅದು ಮನುಷ್ಯನನ್ನು ಮರಣದ ಪಾಶಗಳಿಂದ ತಿರುಗಿಸುತ್ತದೆ.

[28] ಜನಸಮೂಹದಲ್ಲಿ ಅರಸನ ಘನತೆ ಇದೆ. ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ.

[29] ತಾಳ್ಮೆಯುಳ್ಳವನು ಬಹು ವಿವೇಕಿ, ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು.

[30] ಶಾಂತ ಹೃದಯವು ದೇಹಕ್ಕೆ ಜೀವ; ಆದರೆ ಮತ್ಸರವು ಎಲುಬುಗಳಿಗೆ ಕ್ಷಯ.

[31] ಬಡವರನ್ನು ಹಿಂಸಿಸುವವನು, ತನ್ನ ಸೃಷ್ಟಿಕರ್ತನನ್ನು ಹೀನೈಸುವನು, ಆದರೆ ಬಡವರನ್ನು ಕನಿಕರಿಸುವವನು ದೇವರನ್ನು ಸನ್ಮಾನಿಸುವನು.

[32] ದುಷ್ಟನು ತನ್ನ ಆಪತ್ಕಾಲದಲ್ಲಿ ಹಾಳಾಗುತ್ತಾನೆ, ಆದರೆ ನೀತಿವಂತನಿಗೆ ಮರಣದಲ್ಲಿಯೂ ಆಶ್ರಯ ಇದೆ.

[33] ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ, ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ.

[34] ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಆದರೆ ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.

[35] ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ.

ಜ್ಞಾನೋಕ್ತಿಗಳು — Chapters