Skip to content
Opens in a new window
Listen to this chapter • 3:30

[1] ಮಗನೇ, ನನ್ನ ಮಾತುಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.

[2] ನನ್ನ ಆಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣುಗುಡ್ಡೆಯಂತೆ ನನ್ನ ಕಟ್ಟಳೆಗಳನ್ನು ಕಾಪಾಡು.

[3] ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿಟ್ಟುಕೋ; ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.

[4] ಜ್ಞಾನಕ್ಕೆ, “ನೀನು ನನ್ನ ಸಹೋದರಿ,” ಎಂದೂ, ಒಳನೋಟಕ್ಕೆ, “ನನ್ನ ಬಂಧು” ಎಂದೂ ಹೇಳು.

[5] ಅವು ವ್ಯಭಿಚಾರಿಣಿಯಿಂದಲೂ ಸವಿಮಾತನಾಡುವ ದಾರಿತಪ್ಪಿದ ಸ್ತ್ರೀಯಿಂದಲೂ ನಿನ್ನನ್ನು ಕಾಪಾಡುತ್ತವೆ.

[6] ನಾನು ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ಇಣಕಿ ನೋಡಿದಾಗ,

[7] ಮುಗ್ಧರ ನಡುವೆ, ಯುವಕರ ಮಧ್ಯದಲ್ಲಿ, ತಿಳುವಳಿಕೆಯಿಲ್ಲದ ಯೌವನಸ್ಥನನ್ನು ಕಂಡೆನು.

[8] ಅವನು ಅವಳ ಮೂಲೆ ಮನೆಯ ದಿಕ್ಕಿನಲ್ಲಿ ಬೀದಿಯಿಂದ ಹಾದುಹೋಗುತ್ತಿದ್ದನು.

[9] ಸಂಜೆಯ ಮಬ್ಬಿನಲ್ಲಿ ರಾತ್ರಿಯ ಕತ್ತಲೆಯು ಕವಿಯುತ್ತಿತ್ತು.

[10] ಇಗೋ, ವೇಶ್ಯೆಯ ವಸ್ತ್ರವನ್ನು ಧರಿಸಿಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.

[11] ಅವಳು ಕೂಗಾಟದವಳು, ಹಟಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವುದೇ ಇಲ್ಲ.

[12] ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ ಹೀಗೆ ಅವಳು ಮೂಲೆ ಮೂಲೆಗೂ ಹೊಂಚು ಹಾಕುತ್ತಾಳೆ.

[13] ಅವಳು ಆ ಯುವಕನನ್ನು ಹಿಡಿದುಕೊಂಡು ಮುದ್ದಿಟ್ಟು, ನಾಚಿಕೆಯಿಲ್ಲದೆ ಅವಳು ಹೀಗೆನ್ನುತ್ತಾಳೆ:

[14] “ಈ ದಿವಸ ನನ್ನ ಹರಕೆಗಳನ್ನು ನಾನು ಸಲ್ಲಿಸಿದ್ದೇನೆ. ನಾನು ನನ್ನ ಸಮಾಧಾನದ ಯಜ್ಞವನ್ನು ಅರ್ಪಿಸಿದ್ದೇನೆ.

[15] ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ಹುಡುಕಿ ಕಂಡುಕೊಂಡಿದ್ದೇನೆ.

[16] ಈಜಿಪ್ಟಿನ ನಯವಾದ ನಾರು ಮಡಿಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.

[17] ರಕ್ತಬೋಳ, ಅಗರು, ಲವಂಗ, ಚಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆಗೊಳಿಸಿದ್ದೇನೆ.

[18] ಬಾ, ಬೆಳಗಿನವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಂಡು ಕಾಮ ವಿಲಾಸಗಳಿಂದ ನಾವು ಸಂತೋಷಿಸೋಣ.

[19] ಏಕೆಂದರೆ ಯಜಮಾನನು ಮನೆಯಲ್ಲಿ ಇಲ್ಲ; ಅವನು ದೀರ್ಘ ಪ್ರಯಾಣದಲ್ಲಿದ್ದಾನೆ.

[20] ಅವನು ತನ್ನೊಂದಿಗೆ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಹುಣ್ಣಿಮೆಗೆ ಮುಂಚೆ ಅವನು ಮನೆಗೆ ಬರುವುದಿಲ್ಲ.”

[21] ಮನವೊಲಿಸುವ ಮಾತುಗಳಿಂದ ಅವಳು ಅವನನ್ನು ದಾರಿ ತಪ್ಪಿಸಿ, ಅವಳು ತನ್ನ ಮೋಹಕ ಮಾತುಗಳಿಂದ ಅವನನ್ನು ಆಕರ್ಷಿಸುತ್ತಾಳೆ.

[22] ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ, ಅಥವಾ ಜಿಂಕೆಯು ಬಲೆಗೆ ಸಿಕ್ಕಿಬೀಳುವಂತೆ,

[23] ಅವನು ತನ್ನ ಪ್ರಾಣವು ಅಪಾಯದಲ್ಲಿರುವುದನ್ನು ತಿಳಿಯದೆ, ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವವರೆಗೆ, ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.

[24] ಆದ್ದರಿಂದ ನನ್ನ ಮಕ್ಕಳೇ, ನನಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.

[25] ಅವಳ ಮಾರ್ಗಗಳಿಗೆ ನಿಮ್ಮ ಹೃದಯವು ತಿರುಗದೆ ಇರಲಿ; ತಪ್ಪಿಯೂ ಅವಳ ದಾರಿಯಲ್ಲಿ ಹೋಗಬೇಡಿರಿ.

[26] ಏಕೆಂದರೆ ಅನೇಕರು ಅವಳಿಗೆ ಬಲಿಯಾಗಿ ಬಿದ್ದಿದ್ದಾರೆ. ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.

[27] ಅವಳ ಮನೆಯು ಪಾತಾಳಕ್ಕೆ ಹೆದ್ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದು ಹೋಗುತ್ತದೆ.

ಜ್ಞಾನೋಕ್ತಿಗಳು — Chapters