Skip to content
Opens in a new window
Listen to this chapter • 5:23

[1] ಜಾಕೆ ಎಂಬುವನ ಮಗನಾದ ಆಗೂರನ ದೈವಿಕ ಬುದ್ಧಿಮಾತುಗಳು. ಇವನು ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು: “ದೇವರೇ, ನಾನು ದಣಿದಿದ್ದೇನೆ, ಆದರೆ ನಾನು ಜಯಶಾಲಿಯಾಗುವೆನು.

[2] ಖಂಡಿತವಾಗಿಯೂ ನಾನು ಮನುಷ್ಯನಲ್ಲ, ಮೃಗ. ನನಗೆ ಮನುಷ್ಯನ ಗ್ರಹಿಕೆ ಇಲ್ಲ.

[3] ನಾನು ಜ್ಞಾನವನ್ನು ಕಲಿತುಕೊಂಡಿಲ್ಲ; ಅಲ್ಲದೆ ಪರಿಶುದ್ಧ ದೇವರ ಅರಿವು ನನಗಿಲ್ಲ.

[4] ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ? ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ? ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು? ಅವರ ಹೆಸರೇನು? ಅವರ ಮಗನ ಹೆಸರೇನು? ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು!

[5] “ದೇವರ ಪ್ರತಿಯೊಂದು ಮಾತು ದೋಷವಿಲ್ಲದ್ದು; ದೇವರಲ್ಲಿ ಭರವಸವಿಡುವವನಿಗೆ ಅವರು ಗುರಾಣಿಯಾಗಿದ್ದಾರೆ.

[6] ದೇವರ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ. ಇಲ್ಲವಾದರೆ ದೇವರು ನಿನ್ನನ್ನು ಗದರಿಸಿ ನಿನ್ನನ್ನು ಸುಳ್ಳುಗಾರನೆಂದು ಸಾಬೀತುಪಡಿಸುವರು.

[7] “ಯೆಹೋವ ದೇವರೇ, ನಾನು ನಿಮ್ಮನ್ನು ಎರಡು ವಿಷಯಗಳನ್ನು ಕೇಳುತ್ತೇನೆ. ನಿರಾಕರಿಸಬೇಡಿ ನಾನು ಸಾಯುವ ಮೊದಲು ಅವೆರಡನ್ನು ಅನುಗ್ರಹಿಸಿರಿ.

[8] ವಂಚನೆ ಸುಳ್ಳನ್ನು ನನ್ನಿಂದ ದೂರಮಾಡಿರಿ. ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ನನಗೆ ಕೊಡಬೇಡಿರಿ. ನನಗೆ ಅನುದಿನದ ಆಹಾರವನ್ನು ದಯಪಾಲಿಸಿರಿ.

[9] ನಾನು ಐಶ್ವರ್ಯವಂತನಾದರೆ ನಿನ್ನನ್ನು ನಿರಾಕರಿಸಿ, ‘ಯೆಹೋವ ದೇವರು ಯಾರು?’ ಎಂದು ಹೇಳೇನು. ನಾನು ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿಮ್ಮ ಹೆಸರಿಗೆ ಅಪಕೀರ್ತಿ ತಂದೇನು.

[10] “ಕೆಲಸಗಾರರ ವಿಷಯವಾಗಿ ಅವನ ಯಜಮಾನನಿಗೆ ದೂರು ಹೇಳಬೇಡ; ಇದರಿಂದ ಆ ಕೆಲಸಗಾರ ನಿನ್ನನ್ನು ಶಪಿಸಾನು, ಆಗ ನೀನು ದೋಷಿಯಾಗುವೆ.

[11] “ತಮ್ಮ ತಂದೆಯನ್ನು ಶಪಿಸಿ, ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವವರು ಇದ್ದಾರೆ.

[12] ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವವರು ಇದ್ದಾರೆ; ಆದರೆ ಅವರು ತಮ್ಮ ಕೊಳೆಯನ್ನು ತೊಳೆದುಕೊಂಡಿರುವುದಿಲ್ಲ.

[13] ಅವರ ಕಣ್ಣುಗಳು ಯಾವಾಗಲೂ ಅಹಂಕಾರದಿಂದ ಕೂಡಿರುತ್ತವೆ. ಅವರ ದೃಷ್ಟಿ ಅಸಹ್ಯವಾಗಿದೆ.

[14] ಖಡ್ಗಗಳಂತೆ ಹಲ್ಲುಗಳುಳ್ಳವರೂ ಚೂರಿಗಳಂತೆ ದವಡೆಗಳುಳ್ಳವರೂ ಬಡವರನ್ನು ಭೂಮಿಯಿಂದಲೂ ದಿಕ್ಕಿಲ್ಲದವರನ್ನು ಮಾನವಕುಲದಿಂದಲೂ ಕಬಳಿಸುವವರೂ ಆಗಿದ್ದಾರೆ.

[15] “ಜಿಗಣೆಗೆ, ‘ಕೊಡು! ಕೊಡು!’ ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳುಂಟು. “ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ, ಹೌದು, ‘ಸಾಕು!’ ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ:

[16] ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ಎಂದೂ ತೃಪ್ತಿ ಹೊಂದದ ಭೂಮಿ, ‘ಸಾಕು!’ ಎಂದು ಹೇಳದಿರುವ ಬೆಂಕಿ.

[17] “ತನ್ನ ತಂದೆಯನ್ನು ಹಾಸ್ಯಮಾಡಿ, ತನ್ನ ತಾಯಿಯನ್ನು ಧಿಕ್ಕರಿಸುವ ಕಣ್ಣನ್ನು, ಕಣಿವೆಯ ಕಾಗೆಗಳು ಕಿತ್ತು ಕಕ್ಕುವವು. ರಣಹದ್ದುಗಳು ಅದನ್ನು ತಿಂದುಬಿಡುವವು.

[18] “ನನಗೆ ಆಶ್ಚರ್ಯವಾದ ಮೂರು ಸಂಗತಿಗಳಿವೆ, ಹೌದು, ನನಗೆ ಅರ್ಥವಾಗದಿರುವ ನಾಲ್ಕು ಸಂಗತಿಗಳಿವೆ:

[19] ಆಕಾಶದಲ್ಲಿ ಹದ್ದಿನ ಮಾರ್ಗ, ಬಂಡೆಯ ಮೇಲೆ ಸರ್ಪದ ಮಾರ್ಗ, ಸಮುದ್ರ ನಡುವೆ ಹಡಗಿನ ಮಾರ್ಗ, ಯುವಕ ಯುವತಿಯರ ಪ್ರೀತಿ ಮಾರ್ಗ.

[20] “ಜಾರಸ್ತ್ರೀಯ ನಡತೆಯು ಹೀಗಿದೆ: ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು ‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.

[21] “ಭೂಮಿಯು ಮೂರು ವಿಷಯಗಳಿಂದ ಕಳವಳಗೊಳ್ಳುತ್ತದೆ, ನಾಲ್ವರನ್ನು ಅದು ತಾಳಲಾರದು:

[22] ಅರಸನಾಗುವ ದಾಸನು, ತಿನ್ನಲು ಸಾಕಷ್ಟು ಪಡೆಯುವ ಮೂರ್ಖನು,

[23] ತಿರಸ್ಕಾರಕ್ಕೆ ಅರ್ಹಳಾದ ಮಹಿಳೆ, ಮದುವೆಯಾಗುವುದು. ಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.

[24] “ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ:

[25] ಇರುವೆಗಳು ಬಲಹೀನ ಜೀವಿಗಳು, ಆದರೂ ಅವು ಬೇಸಿಗೆಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ.

[26] ಬೆಟ್ಟದ ಮೊಲಗಳು ಬಲಹೀನ ಪ್ರಾಣಿಗಳಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುತ್ತವೆ.

[27] ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ.

[28] ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ ಅರಸನ ಅರಮನೆಗಳಲ್ಲಿ ಕಂಡುಬರುತ್ತವೆ.

[29] “ಗಂಭೀರ ಗಮನದ ಮೂರು ಪ್ರಾಣಿಗಳಿವೆ, ಹೌದು, ಗಂಭೀರ ಗತಿಯ ನಾಲ್ಕಿವೆ:

[30] ಮೃಗಗಳಲ್ಲಿ ಬಲಿಷ್ಠವಾಗಿರುವ ಸಿಂಹವು, ಯಾವುದಕ್ಕೂ ಹಿಮ್ಮೆಟ್ಟದು.

[31] ಕತ್ತೆತ್ತಿ ನಡೆಯುವ ಹುಂಜ, ಹೋತವು, ತನ್ನ ಸುತ್ತಲೂ ಸೈನಿಕರಿರುವ ಅರಸನು.

[32] “ನೀನು ಹೆಮ್ಮೆಪಟ್ಟು ಮೂರ್ಖನಾಗಿ ನಡೆದಿದ್ದರೆ, ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ, ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೊ.

[33] ಹಾಲನ್ನು ಕಡೆಯುವುದರಿಂದ ಬೆಣ್ಣೆ, ಮೂಗನ್ನು ಹಿಂಡುವುದರಿಂದ ರಕ್ತ, ಹಾಗೆಯೇ ಕೋಪವನ್ನೆಬ್ಬಿಸುವುದರಿಂದ ಜಗಳ.”

ಜ್ಞಾನೋಕ್ತಿಗಳು — Chapters