[1] ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಬರೆದಿರುವ ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳೇ.
[2] ವಿಷಯವನ್ನು ರಹಸ್ಯ ಮಾಡುವುದು ದೇವರ ಮಹಿಮೆ. ಒಂದು ವಿಷಯವನ್ನು ಹುಡುಕುವುದು ರಾಜರ ಮಹಿಮೆ.
[3] ಆಕಾಶದ ಎತ್ತರವನ್ನು, ಭೂಮಿಯ ಆಳವನ್ನು ಯಾರೂ ಗ್ರಹಿಸಲು ಸಾಧ್ಯವಿಲ್ಲ. ಹಾಗೆಯೇ ಅರಸರ ಹೃದಯವು ಅಗೋಚರ.
[4] ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ರೂಪಗೊಳ್ಳುವುದು.
[5] ಅರಸನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ, ಆಗ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವುದು.
[6] ಅರಸನ ಸನ್ನಿಧಿಯಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನವನ್ನು ಕೇಳಬೇಡ.
[7] ಘನವಂತರ ಸನ್ನಿಧಿಯಲ್ಲಿ ನಿನ್ನನ್ನು ತಗ್ಗಿಸಿಕೊಳ್ಳುವುದಕ್ಕಿಂತ, “ಮೇಲಕ್ಕೆ ಬಾ,” ಎಂದು ಅರಸನು ನಿನಗೆ ಹೇಳುವುದು ಲೇಸು. ನೀವು ಏನನ್ನೋ ಕಂಡಿದ್ದರಿಂದ,
[8] ದುಡುಕಿ ವ್ಯಾಜ್ಯಮಾಡುವುದಕ್ಕಾಗಿ ಹೋಗಬೇಡ. ಏಕೆಂದರೆ ನಿನ್ನ ನೆರೆಯವನು ನಿನ್ನನ್ನು ಅವಮಾನ ಮಾಡಿದಾಗ, ನೀನು ಕಡೆಯಲ್ಲಿ ಏನು ಮಾಡುವೆ?
[9] ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಇನ್ನೊಬ್ಬರ ಗುಟ್ಟನ್ನು ಬಹಿರಂಗಪಡಿಸಬೇಡ,
[10] ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು; ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು.
[11] ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ.
[12] ಕೇಳುವ ಕಿವಿಗೆ ಜ್ಞಾನಿಯ ತಿದ್ದುವಿಕೆಯು ಬಂಗಾರದ ಮುರು; ಚೊಕ್ಕ ಬಂಗಾರದ ಆಭರಣ.
[13] ಸುಗ್ಗಿಯ ಕಾಲದಲ್ಲಿ ಹಿಮದ ಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ತನಾದ ಸೇವಕನಿದ್ದಾನೆ; ಏಕೆಂದರೆ ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ.
[14] ದಾನ ಕೊಡದೆ ಕೊಟ್ಟಿದ್ದೇನೆಂದು ಹೊಗಳಿಕೊಳ್ಳುವವನು, ಮಳೆ ಇಲ್ಲದ ಮೋಡಗಳ ಮತ್ತು ಗಾಳಿಯ ಹಾಗೆ ಇದ್ದಾನೆ.
[15] ತಾಳ್ಮೆಯ ಮೂಲಕ ಪ್ರಭುವನ್ನು ಒಲಿಸಿಕೊಳ್ಳಬಹುದು; ಮೃದುವಾದ ಮಾತು ಎಲುಬನ್ನು ಮುರಿಯುತ್ತದೆ.
[16] ಜೇನನ್ನು ಕಂಡುಕೊಂಡಿದ್ದೀಯಾ? ಅದನ್ನು ನಿನಗೆ ತೃಪ್ತಿಯಾಗುವಷ್ಟೇ ತಿನ್ನು; ಹೊಟ್ಟೆ ತುಂಬಾ ತಿಂದರೆ ಕಾರಬೇಕಾದೀತು.
[17] ನಿನ್ನ ನೆರೆಯವನ ಮನೆಗೆ ಅಪರೂಪಕ್ಕೆ ಹೆಜ್ಜೆ ಇಡು; ಇಲ್ಲವಾದರೆ ನಿನ್ನ ವಿಷಯವಾಗಿ ಅವನು ಬೇಸರಗೊಂಡು ನಿನ್ನನ್ನು ಹಗೆಮಾಡಾನು.
[18] ತನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳುವವನು ಚಮಟಿಗೆ, ಖಡ್ಗ, ಹರಿತವಾದ ಬಾಣವಾಗಿದ್ದಾನೆ.
[19] ಕಷ್ಟಕಾಲದಲ್ಲಿ ಅಪನಂಬಿಗಸ್ತನಾದ ಮನುಷ್ಯನಲ್ಲಿಯ ಭರವಸೆಯು ಮುರಿದ ಹಲ್ಲು, ಕೀಲು ತಪ್ಪಿದ ಪಾದವು.
[20] ಮನಗುಂದಿದವನಿಗೆ ಸಂಗೀತ ಹಾಡುವುದು ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆಯೂ ಹುಳಿ ಉಪ್ಪನ್ನು ಗಾಯಕ್ಕೆ ಹಚ್ಚಿದಂತೆಯೂ.
[21] ನಿನ್ನ ಶತ್ರು ಹಸಿದಿದ್ದರೆ ಉಣ್ಣುವುದಕ್ಕೆ ಅವನಿಗೆ ಊಟಕೊಡು; ಅವನು ಬಾಯಾರಿದ್ದರೆ ಕುಡಿಯುವುದಕ್ಕೆ ನೀರು ಕೊಡು.
[22] ಏಕೆಂದರೆ ಅದು ಅವನ ತಲೆಯ ಮೇಲೆ ಉರಿಯುವ ಬೆಂಕಿಯ ಕೆಂಡಗಳನ್ನು ಸುರಿಯುವಂತಿರುವುದು; ಯೆಹೋವ ದೇವರು ನಿನಗೆ ಪ್ರತಿಫಲ ಕೊಡುವರು.
[23] ಅನಿರೀಕ್ಷಿತ ಮಳೆಯನ್ನು ತರುವ ಉತ್ತರದ ಗಾಳಿಯಂತೆ ಚಾಡಿಯ ನಾಲಿಗೆ ಕೋಪದ ಮುಖ ಮಾಡುತ್ತದೆ.
[24] ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು.
[25] ಬಾಯಾರಿದವನಿಗೆ ತಣ್ಣೀರು ಹೇಗೋ ದೂರದೇಶದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
[26] ದುಷ್ಟರ ಮುಂದೆ ನೀತಿವಂತನು ಸೋಲುವುದು, ಕೆಸರಿನ ಬುಗ್ಗೆಗೂ ಕೊಳಕು ಒರತೆಗೂ ಸಮಾನ.
[27] ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ; ಹಾಗೆಯೇ ಮನುಷ್ಯರು ಸ್ವಂತ ಗೌರವವನ್ನು ಹುಡುಕುವುದು ಗೌರವವಲ್ಲ.
[28] ತನ್ನ ಸ್ವಂತ ಆತ್ಮವನ್ನು ಆಳದಿರುವವನು, ಗೋಡೆ ಬಿದ್ದ ಹಾಳೂರಿಗೆ ಸಮಾನ.