[1] ಇಸ್ರಾಯೇಲರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಜ್ಞಾನೋಕ್ತಿಗಳು:
[2] ಜನರು ಜ್ಞಾನವನ್ನೂ ಶಿಸ್ತನ್ನೂ ಪಡೆದುಕೊಳ್ಳುವುದಕ್ಕೆ; ವಿವೇಕದ ಮಾತುಗಳನ್ನು ಗ್ರಹಿಸುವುದಕ್ಕೆ;
[3] ಅಂದರೆ, ಶಿಕ್ಷಣ, ವಿವೇಕ ನಡವಳಿ, ಸರಿಯಾದದ್ದನ್ನು ಮಾಡುವುದು ನ್ಯಾಯ ಮತ್ತು ಯುಕ್ತವಾದವುಗಳನ್ನು ನಡೆಸುವ ಜ್ಞಾನೋಕ್ತಿಗಳು;
[4] ಮುಗ್ಧರಿಗೆ ವಿವೇಕವನ್ನೂ ಯೌವನಸ್ಥರಿಗೆ ತಿಳುವಳಿಕೆ ಹಾಗೂ ಸ್ವವಿವೇಚನೆಯನ್ನೂ ಕೊಡುವುದಕ್ಕಾಗಿ ಈ ಜ್ಞಾನೋಕ್ತಿಗಳಿವೆ.
[5] ಜ್ಞಾನಿಯು ಜ್ಞಾನೋಕ್ತಿಗಳನ್ನು ಕೇಳಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ; ವಿವೇಚಿಸುವವರು ಮಾರ್ಗದರ್ಶನವನ್ನು ಹೊಂದಿಕೊಳ್ಳಲಿ.
[6] ಜ್ಞಾನೋಕ್ತಿಗಳನ್ನು, ಸಾಮ್ಯಗಳನ್ನು, ಜ್ಞಾನಿಗಳ ಮಾತು ಹಾಗೂ ಒಗಟುಗಳನ್ನು ಅರ್ಥಮಾಡಿಕೊಳ್ಳಲು ಇವು ಬರೆಯಲಾಗಿವೆ.
[7] ಯೆಹೋವ ದೇವರ ಭಯವೇ ಜ್ಞಾನದ ಮೂಲವಾಗಿದೆ. ಆದರೆ ಮೂರ್ಖರು ಜ್ಞಾನವನ್ನೂ ಶಿಕ್ಷಣವನ್ನೂ ಅಸಡ್ಡೆ ಮಾಡುತ್ತಾರೆ.
[8] ಮಗನೇ, ನಿನ್ನ ತಂದೆಯ ಶಿಕ್ಷಣಗಳನ್ನು ಕೇಳು, ನಿನ್ನ ತಾಯಿಯ ಉಪದೇಶವನ್ನು ತೊರೆಯಬೇಡ.
[9] ಅವು ನಿನ್ನ ತಲೆಗೆ ಸುಂದರ ಕಿರೀಟ ನಿನ್ನ ಕೊರಳನ್ನು ಅಲಂಕರಿಸುವ ಹಾರ.
[10] ಮಗನೇ, ಪಾಪಿಗಳು ನಿನ್ನನ್ನು ಸೆಳೆದರೆ ನೀನು ಒಪ್ಪಬೇಡ.
[11] ಒಂದು ವೇಳೆ ಅವರು ನಿನಗೆ, “ನಮ್ಮೊಂದಿಗೆ ಬಾ, ಜನರ ರಕ್ತಕ್ಕಾಗಿ ಒಳಸಂಚು ಮಾಡೋಣ, ನಿರಪರಾಧಿಯ ರಕ್ತಕ್ಕಾಗಿ;
[12] ಸಮಾಧಿಯು ನುಂಗುವಂತೆ ಜೀವಂತವಾಗಿ ಅವರನ್ನು ದಾಳಿಮಾಡೋಣ ಗುಂಡಿಯೊಳಕ್ಕೆ ಹೋಗುವವರನ್ನು ಸಂಪೂರ್ಣವಾಗಿ ನಾವು ಅವರನ್ನು ನುಂಗಿಬಿಡೋಣ.
[13] ಅಮೂಲ್ಯವಾದ ಸೊತ್ತನ್ನೆಲ್ಲಾ ನಾವು ಕಂಡುಹಿಡಿದು ಕೊಳ್ಳೆಹೊಡೆದು ನಮ್ಮ ಮನೆಗಳನ್ನು ತುಂಬಿಕೊಳ್ಳೋಣ;
[14] ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಾವೆಲ್ಲರೂ ಹಣಹಂಚಿಕೊಳ್ಳೋಣ,” ಎಂದು ಹೇಳುವುದಾದರೆ.
[15] ಮಗನೇ, ಅವರೊಂದಿಗೆ ಸೇರಬೇಡ, ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
[16] ಏಕೆಂದರೆ ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತಸುರಿಸುವುದಕ್ಕೆ ಆತುರಪಡುತ್ತವೆ.
[17] ಪಕ್ಷಿಗಳ ಕಣ್ಣೆದುರಿಗೆ ಕಾಣುವಂತೆ ಬಲೆಯನ್ನು ಹರಡುವುದು ವ್ಯರ್ಥವಲ್ಲವೇ!
[18] ಈ ಜನರು ಒಳಸಂಚು ಮಾಡುವುದು ತಮ್ಮ ಸ್ವಂತ ರಕ್ತಕ್ಕೆ. ಅವರು ಮಾಡುವ ದುರಾಲೋಚನೆ ಅವರನ್ನೇ ನಾಶಮಾಡುವುದು.
[19] ಅಕ್ರಮ ಲಾಭದ ಬೆನ್ನಟ್ಟಿ ಹೋಗುವವರೆಲ್ಲರ ಗತಿ ಇದೇ. ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು.
[20] ಜ್ಞಾನವೆಂಬಾಕೆಯು ಬೀದಿಯಲ್ಲಿ ಕೂಗುತ್ತಾಳೆ, ಬಹಿರಂಗ ಸ್ಥಳಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ.
[21] ಜನಭರಿತ ಬೀದಿಗಳಲ್ಲಿ ಆಕೆ ಕರೆಯುತ್ತಾಳೆ, ಪಟ್ಟಣದ ಹೆಬ್ಬಾಗಿಲುಗಳಲ್ಲಿ ಹೀಗೆಂದು ಭಾಷಣ ಮಾಡುತ್ತಾಳೆ:
[22] “ಮುಗ್ಧರೇ ನೀವು ಎಷ್ಟು ಕಾಲ ಮುಗ್ಧತೆಯನ್ನು ಪ್ರೀತಿಸುವಿರಿ. ಕುಚೋದ್ಯಗಾರರೇ ಎಷ್ಟು ಕಾಲ ಕುಚೋದ್ಯಗಾರರಾಗಿರಲು ಇಚ್ಛಿಸುವಿರಿ? ಜ್ಞಾನಹೀನರೇ, ಎಷ್ಟು ಕಾಲ ಪರಿಜ್ಞಾನವನ್ನು ಹಗೆ ಮಾಡುವಿರಿ?
[23] ನನ್ನ ಗದರಿಕೆ ಕೇಳಿ ನೀವು ಪಶ್ಚಾತ್ತಾಪಪಡಿರಿ! ಆಗ ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನಿಮಗೆ ನನ್ನ ಬೋಧನೆಗಳನ್ನು ಪ್ರಕಟಿಸುವೆನು.
[24] ನಾನು ಕರೆದಾಗ ನೀವು ನನ್ನನ್ನು ತಿರಸ್ಕರಿಸಿದ್ದೀರಿ ನಾನು ನನ್ನ ಕೈಚಾಚಿದಾಗ ಯಾರೂ ಮನುಷ್ಯನೂ ಗಮನಿಸಲಿಲ್ಲ.
[25] ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ; ನನ್ನ ಗದರಿಕೆಯನ್ನು ನೀವು ಬೇಡವೆಂದು ತಳ್ಳಿಬಿಟ್ಟಿದ್ದರಿಂದ
[26] ಬಿರುಗಾಳಿಯಂತೆ ನಿಮಗೆ ವಿಪತ್ತು ಬಂದಾಗ ನಾನು ನಗುವೆನು. ಆಪತ್ತು ನಿಮ್ಮನ್ನು ಹಿಂದಿಕ್ಕಿದಾಗ, ನಾನು ಪರಿಹಾಸ್ಯ ಮಾಡುವೆನು.
[27] ಚಂಡಮಾರುತವು ನಿಮ್ಮನ್ನು ಬಿರುಗಾಳಿಯಂತೆ ತಾಕಿದಾಗ, ವಿಪತ್ತು ಸುಂಟರಗಾಳಿಯಂತೆ ನಿಮ್ಮ ಮೇಲೆ ಬೀಸಿದಾಗ, ಯಾತನೆ ಮತ್ತು ತೊಂದರೆ ನಿಮ್ಮನ್ನು ಆವರಿಸಿದಾಗಲೂ ಪರಿಹಾಸ್ಯಕ್ಕೆ ಒಳಗಾಗುವಿರಿ.
[28] “ಆಗ ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರ ಕೊಡೆನು. ಅವರು ನನ್ನನ್ನು ಆತುರದಿಂದ ಹುಡುಕುವರು, ಆದರೆ ಅವರು ನನ್ನನ್ನು ಕಂಡುಕೊಳ್ಳುವುದಿಲ್ಲ.
[29] ಏಕೆಂದರೆ ಅವರು ಅರಿವನ್ನು ಹಗೆಮಾಡಿ, ಯೆಹೋವ ದೇವರಿಗೆ ಭಯಪಡುವುದನ್ನು ಆರಿಸಿಕೊಳ್ಳದೆ ಹೋದರು.
[30] ನನ್ನ ಬುದ್ಧಿವಾದವನ್ನು ಸ್ವೀಕರಿಸದೆ, ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದರು.
[31] ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ, ತಮ್ಮ ಸ್ವಂತ ಕುಯುಕ್ತಿಗಳಿಂದಲೇ ಹೊಟ್ಟೆ ತುಂಬಿಕೊಳ್ಳುವರು.
[32] ಮುಗ್ಧರ ದಾರಿತಪ್ಪುವಿಕೆಯು ಅವರನ್ನು ಕೊಲ್ಲುವುದು. ಜ್ಞಾನಹೀನರ ನಿಶ್ಚಿಂತೆಯು ಅವರನ್ನು ನಾಶಮಾಡುವುದು.
[33] ನನಗೆ ಕಿವಿಗೊಡುವವರಾದರೋ ಸುರಕ್ಷಿತರಾಗಿ ಜೀವಿಸುವರು, ಕೇಡಿನ ಭಯವಿಲ್ಲದೇ ನೆಮ್ಮದಿಯಿಂದ ಇರುವರು.”