Skip to content
Opens in a new window
Listen to this chapter • 3:10

[1] ಮಗನೇ, ನನ್ನ ಜ್ಞಾನಕ್ಕೆ ಗಮನಕೊಡು; ನನ್ನ ಒಳನೋಟದ ಮಾತುಗಳಿಗೆ ಕಿವಿಗೊಡು.

[2] ಆಗ ನಿನ್ನ ವಿವೇಚನೆಯನ್ನು ಉಳಿಸಿಕೊಳ್ಳುವೆ. ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು.

[3] ಏಕೆಂದರೆ ಜಾರಿಣಿಯ ತುಟಿಗಳು ಜೇನುಗರೆಯುವುದು; ಅವಳ ಮಾತು ಎಣ್ಣೆಗಿಂತಲೂ ಮೃದು.

[4] ಆದರೆ ಅಂತ್ಯದಲ್ಲಿ ಅವಳು ಮಾಚಿಪತ್ರೆಯಂತೆ ಕಹಿಯೂ, ಇಬ್ಬಾಯಿ ಖಡ್ಗದಂತೆ ಹರಿತವೂ ಆಗಿರುವಳು.

[5] ಅವಳ ಪಾದಗಳು ಮರಣದ ಕಡೆಗೆ ಇಳಿದುಹೋಗುತ್ತವೆ; ಅವಳ ಹೆಜ್ಜೆಗಳು ನೇರವಾಗಿ ಪಾತಾಳಕ್ಕೆ ನಡೆಸುತ್ತವೆ.

[6] ಜೀವಮಾರ್ಗದ ವಿಚಾರ ಅವಳಿಗಿಲ್ಲ; ಆದ್ದರಿಂದ ಅವಳ ಮಾರ್ಗಗಳು ಚಂಚಲವಾಗಿವೆ, ಅದರ ಅರಿವೂ ಅವಳಿಗಿಲ್ಲ.

[7] ಮಕ್ಕಳಿರಾ, ನನ್ನ ಕಡೆಗೆ ಈಗ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳಿಂದ ದೂರವಾಗಬೇಡಿರಿ.

[8] ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು; ಅವಳ ಮನೆಯ ಬಾಗಿಲ ಹತ್ತಿರಕ್ಕೆ ಹೋಗದೆ ಇರು.

[9] ನೀನು ನಿನ್ನ ಗೌರವವನ್ನು ಬೇರೆಯವರಿಗೆ ಕಳೆಯಬೇಡ, ನಿನ್ನ ಘನತೆನ್ನು ಕ್ರೂರನಿಗೂ ಕೊಡಬೇಡ.

[10] ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆ ಎಚ್ಚರಿಕೆ, ನಿನ್ನ ಪ್ರಯಾಸದ ಫಲವು ಪರರ ಮನೆ ಸೇರದಂತೆ ನೋಡಿಕೋ.

[11] ನಿನ್ನ ಜೀವನದ ಅಂತ್ಯದಲ್ಲಿ ನಿನ್ನ ದೇಹವೂ ಕ್ಷೀಣಿಸಿದಾಗ, ನೀನು ನರಳಬೇಕಾದೀತು.

[12] ಆಗ ನೀನು, “ಶಿಸ್ತನ್ನು ನಾನು ಎಷ್ಟೋ ಹಗೆ ಮಾಡಿದೆ; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.

[13] ನನ್ನ ಬೋಧಕರ ಸ್ವರಕ್ಕೆ ನಾನು ವಿಧೇಯನಾಗದೆ ಹೋದೆ. ನನ್ನ ಉಪದೇಶಕರಿಗೆ ನಾನು ಕಿವಿಗೊಡದೆ ಹೋದೆ.

[14] ನಾನು ದೇವರ ಸಭೆಯಲ್ಲಿ ಗಂಭೀರ ಸಮಸ್ಯೆಗೆ ಒಳಗಾದೆ,” ಎಂದು ಹೇಳುವೆ.

[15] ನಿನ್ನ ಸ್ವಂತ ಕೊಳದ ನೀರನ್ನು ಕುಡಿ, ನಿನ್ನ ಸ್ವಂತ ಬಾವಿಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.

[16] ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ? ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?

[17] ಅವು ನಿನಗೆ ಸ್ವಂತವಾಗಿರಲಿ; ಪರರು ಭಾಗಿಗಳಾಗಿರಬಾರದು.

[18] ನಿನ್ನ ಬುಗ್ಗೆಯು ಆಶೀರ್ವಾದ ಹೊಂದಲಿ; ನಿನ್ನ ಆನಂದವು ಯೌವನದ ಕಾಲದ ಹೆಂಡತಿಯೊಂದಿಗಿರಲಿ.

[19] ಆಕೆಯು ಮನೋಹರವಾದ ಹರಿಣಿ, ಅಂದವಾದ ಜಿಂಕೆಯ ಹಾಗೆಯೂ; ಆಕೆಯ ಎದೆಯು ನಿನ್ನನ್ನು ಸದಾ ತೃಪ್ತಿಪಡಿಸಲಿ; ಆಕೆಯ ಪ್ರೀತಿಯಿಂದ ನೀನು ಸದಾ ಪರವಶನಾಗಿರು.

[20] ಮಗನೇ, ಬೇರೆಯವನ ಹೆಂಡತಿಗೆ ವಶವಾಗುವುದೇಕೆ? ಅನ್ಯಳ ಎದೆಯನ್ನೇಕೆ ಅಪ್ಪಿಕೊಳ್ಳುವೆ?

[21] ನಿನ್ನ ಮಾರ್ಗಗಳು ಯೆಹೋವ ದೇವರ ಮುಂದೆಯೇ ಇವೆ. ಅವರು ನಿನ್ನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾರೆ.

[22] ದುಷ್ಟನನ್ನು ಅವನ ಸ್ವಂತ ದ್ರೋಹಗಳೇ ಹಿಡಿಯುತ್ತವೆ; ತನ್ನ ಪಾಪಗಳ ಪಾಶಗಳೇ ಅವನನ್ನು ಬಂಧಿಸುತ್ತದೆ.

[23] ಶಿಸ್ತುಪಾಲನೆಯಿಲ್ಲದೆ ಅವನು ನಾಶವಾಗುವನು; ತನ್ನ ಅತಿಮೂರ್ಖತನದಿಂದಲೇ ತಪ್ಪಿಹೋಗುವನು.

ಜ್ಞಾನೋಕ್ತಿಗಳು — Chapters