Skip to content
Opens in a new window
Listen to this chapter • 4:12

[1] ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ; ಇವುಗಳಿಂದ ಮೋಸ ಹೋದವನು ಜ್ಞಾನಿಯಲ್ಲ.

[2] ಅರಸನ ಭಯವು ಸಿಂಹದ ಘರ್ಜನೆಯಂತಿದೆ; ಅವನ ಕೋಪವನ್ನೆಬ್ಬಿಸುವವರು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವರು.

[3] ಕಲಹವನ್ನು ತಡೆಯುವವನು, ಮಾನಕ್ಕೆ ಯೋಗ್ಯನು; ಆದರೆ ಬುದ್ಧಿಹೀನನು ಮಾತ್ರ ಜಗಳವಾಡಲು ಒತ್ತಾಯಿಸುತ್ತಾನೆ.

[4] ಮೈಗಳ್ಳನು ಮಳೆಗಾಲದಲ್ಲಿ ಉಳುಮೆ ಮಾಡುವುದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಅಪೇಕ್ಷಿಸಿದರೂ ಏನೂ ಸಿಕ್ಕುವುದಿಲ್ಲ.

[5] ಮನುಷ್ಯನ ಹೃದಯದ ಆಲೋಚನೆಯು ಆಳವಾದ ಬಾವಿಯ ನೀರಿನಂತಿದೆ; ವಿವೇಕಿಯು ಅದನ್ನು ಸೇದುವನು.

[6] ಅನೇಕರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಪ್ರಾಮಾಣಿಕತೆಯನ್ನು ಸಾರುವನು; ಆದರೆ ನಂಬಿಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?

[7] ನೀತಿವಂತನು ನಿರ್ದೋಷವಾಗಿ ಜೀವಿಸುತ್ತಾನೆ; ಅವನನ್ನು ಅನುಸರಿಸುವ ಅವನ ಮಕ್ಕಳು ಆಶೀರ್ವಾದ ಹೊಂದುವರು.

[8] ಅರಸನು ತನ್ನ ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವಾಗ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.

[9] “ನನ್ನ ಹೃದಯವನ್ನು ಶುದ್ಧವಾಗಿ ಇಟ್ಟುಕೊಂಡಿದ್ದೇನೆ. ನಾನು ಶುದ್ಧನೂ ಪಾಪರಹಿತನೂ,” ಎಂದು ಯಾರು ಹೇಳಬಲ್ಲರು?

[10] ಮೋಸದ ತೂಕಗಳೂ, ಮೋಸದ ಅಳತೆಗಳೂ ಇವೆರಡೂ ಯೆಹೋವ ದೇವರಿಗೆ ಅಸಹ್ಯ.

[11] ಚಿಕ್ಕ ಮಕ್ಕಳಾದರೋ ತಮ್ಮ ಕ್ರಿಯೆಗಳಿಂದಲೇ, ತಾವು ಶುದ್ಧರೋ ಯಥಾರ್ಥರೋ ಎಂಬುದನ್ನು ತೋರ್ಪಡಿಸಿಕೊಳ್ಳುತ್ತಾರೆ.

[12] ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಯೆಹೋವ ದೇವರು ಉಂಟುಮಾಡಿದ್ದಾನೆ.

[13] ನೀವು ನಿದ್ರೆಯನ್ನು ಪ್ರೀತಿಸಿದರೆ, ನೀವು ಬಡತನದಲ್ಲಿ ಕೊನೆಗೊಳ್ಳುತ್ತೀರಿ; ನಿಮ್ಮ ಕಣ್ಣುಗಳನ್ನು ತೆರೆದರೆ, ಸಾಕಷ್ಟು ಆಹಾರ ಇರುತ್ತದೆ!

[14] “ಇದು ಒಳ್ಳೆಯದಲ್ಲ ಇದು ಒಳ್ಳೆಯದಲ್ಲ!” ಎಂದು ಕೊಳ್ಳುವವನು ಹೇಳುತ್ತಾನೆ; ಆದರೆ ಅವನು ಕೊಂಡು ಹೋದ ಮೇಲೆ ಅದನ್ನೇ ಹೊಗಳುತ್ತಾನೆ.

[15] ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ; ಆದರೆ ಪರಿಜ್ಞಾನದ ತುಟಿಗಳು ಅಪರೂಪದ ರತ್ನವಾಗಿವೆ.

[16] ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ; ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.

[17] ವಂಚನೆಯಿಂದ ಸಿಕ್ಕಿದ ಆಹಾರವು ರುಚಿ; ಆದರೆ ಆಮೇಲೆ ಅವನ ಬಾಯಿಯು ಮರಳಿನಿಂದ ತುಂಬುವುದು.

[18] ಸಲಹೆಯಿಂದ ಯೋಜನೆಗಳು ನೆರವೆರುವವು; ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.

[19] ಚಾಡಿಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ; ಆದಕಾರಣ ಹರಟೆ ಹೊಡೆಯುವವನ ಸಹವಾಸ ಮಾಡಬೇಡ.

[20] ತನ್ನ ತಂದೆಯನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವನ ದೀಪವು ಮಧ್ಯರಾತ್ರಿಯ ಕತ್ತಲೆಯಲ್ಲಿ ಆರಿಹೋಗುವುದು.

[21] ಪ್ರಾರಂಭದಲ್ಲಿ ತ್ವರೆಯಾಗಿ ಪಡೆದುಕೊಂಡ ಆಸ್ತಿಯೂ ಅಂತ್ಯದಲ್ಲಿ ಆಶೀರ್ವಾದವಾಗಿರುವುದಿಲ್ಲ.

[22] ನೀನು, “ಕೇಡಿಗೆ ಮುಯ್ಯಿತೀರಿಸುವೆನು,” ಎಂದು ಹೇಳಬೇಡ; ಯೆಹೋವ ದೇವರನ್ನು ನಿರೀಕ್ಷಿಸು; ಆಗ ಅವರೇ ನಿಮ್ಮನ್ನು ರಕ್ಷಿಸಿ ಉದ್ಧರಿಸುವನು.

[23] ವ್ಯತ್ಯಾಸದ ತೂಕಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಅಪ್ರಾಮಾಣಿಕ ತಕ್ಕಡಿಗಳು ಅವರನ್ನು ಮೆಚ್ಚಿಸುವುದಿಲ್ಲ.

[24] ಮನುಷ್ಯನ ಹೆಜ್ಜೆಗಳನ್ನು ಯೆಹೋವ ದೇವರು ನಿರ್ದೇಶಿಸುತ್ತಾರೆ. ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಳ್ಳಬಲ್ಲನು?

[25] ದುಡುಕಿ ಪ್ರತಿಷ್ಠೆಗಾಗಿ ದೇವರಿಗೆ ಹರಕೆ ಮಾಡಿಕೊಂಡು ಆಮೇಲೆ ವಿಚಾರಿಸುವುದು ಉರುಲಾಗಿದೆ.

[26] ಜ್ಞಾನಿಯಾದ ಅರಸನು ದುಷ್ಟರನ್ನು ತೂರುವನು; ಅವರ ಮೇಲೆ ಕಣದ ಚಕ್ರವನ್ನು ಎಳೆಯುವನು.

[27] ಮನುಷ್ಯನ ಆತ್ಮವು ಯೆಹೋವ ದೇವರ ದೀಪವಾಗಿದೆ. ಅದು ಅವನ ಅಂತರಂಗವನ್ನು ಶೋಧಿಸುತ್ತದೆ.

[28] ಪ್ರೀತಿಯೂ ನಂಬಿಗಸ್ತಿಕೆಯೂ ಅರಸನನ್ನು ಕಾಯುತ್ತವೆ; ಪ್ರೀತಿಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.

[29] ಯೌವನಸ್ಥರ ಮಹಿಮೆ ಅವರ ಬಲವೇ; ಮುದುಕರ ವೈಭವ ನರೆತ ತಲೆಯೇ.

[30] ಗಾಯಗೊಳಿಸುವ ಏಟುಗಳು ದುಷ್ಟತ್ವವನ್ನು ತೊಳೆಯುತ್ತವೆ; ಪೆಟ್ಟುಗಳು ಅಂತರಂಗವನ್ನೂ ಶುದ್ಧಿಗೊಳಿಸುತ್ತವೆ.

ಜ್ಞಾನೋಕ್ತಿಗಳು — Chapters