Skip to content
Opens in a new window
Listen to this chapter • 5:20

[1] ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆ ಪಡದಿರು; ಇಲ್ಲವೆ ಅವರ ಸಂಗಡ ಇರುವುದಕ್ಕೆ ಅಪೇಕ್ಷಿಸಬೇಡ.

[2] ಏಕೆಂದರೆ ಅವರ ಹೃದಯವು ಹಿಂಸೆಯನ್ನು ಯೋಜಿಸುತ್ತದೆ; ಅವರ ತುಟಿಗಳು ಹಾನಿಯನ್ನು ಪ್ರಸ್ತಾಪಿಸುತ್ತವೆ.

[3] ಜ್ಞಾನದಿಂದ ಮನೆಯು ಕಟ್ಟಲಾಗುತ್ತದೆ. ತಿಳುವಳಿಕೆಯಿಂದ ಅದು ಸ್ಥಿರಗೊಳ್ಳುತ್ತದೆ.

[4] ತಿಳುವಳಿಕೆಯಿಂದ ಅದರ ಕೋಣೆಗಳು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬುವುದು.

[5] ಬಲವುಳ್ಳವನಿಗಿಂತ ಜ್ಞಾನಿಯು ಶಕ್ತಿಶಾಲಿ; ತಿಳುವಳಿಕೆಯುಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.

[6] ಖಂಡಿತವಾಗಿಯೂ ನಿಮಗೆ ಯುದ್ಧಮಾಡಲು ಮಾರ್ಗದರ್ಶನ ಬೇಕು, ಬಹುಮಂದಿ ಸಲಹೆಗಾರರು ಇರುವಲ್ಲಿ ಜಯವಿರುವುದು.

[7] ಜ್ಞಾನವು ಬುದ್ಧಿಹೀನನಿಗೆ ನಿಲುಕದು; ಪುರದ್ವಾರದಲ್ಲಿ ಕೂಡಿಬಂದ ಸಭೆಯಲ್ಲಿ ಅವನು ತನ್ನ ಬಾಯಿಯನ್ನು ತೆರೆಯುವುದೇ ಇಲ್ಲ.

[8] ಕೇಡನ್ನು ಕಲ್ಪಿಸುವವನು ಕುಚೋದ್ಯಗಾರನೆಂದು ಕರೆಯಲ್ಪಡುವನು.

[9] ಬುದ್ಧಿಹೀನನ ಆಲೋಚನೆಯು ಪಾಪಮಯ; ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ.

[10] ಇಕ್ಕಟ್ಟಿನ ಸಮಯದಲ್ಲಿ ನೀನು ಬಳಲಿ ಹೋದರೆ, ನಿನ್ನ ಬಲವು ಕೊಂಚವಾಗಿದೆ.

[11] ಅನ್ಯಾಯವಾಗಿ ಮರಣಕ್ಕೆ ಸಾಗಿಸುವನನ್ನು ಬಿಡಿಸುವುದಕ್ಕೆ ಯತ್ನಿಸು; ಕೊಲೆಗೆ ನೇಮಿತವಾದವರನ್ನು ನೀನು ರಕ್ಷಿಸು.

[12] ನೀನು, “ಅದು ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿದರೆ, ಹೃದಯವನ್ನು ಪರಿಶೋಧಿಸುವ ದೇವರು ಅದನ್ನು ತಿಳಿಯುವದಿಲ್ಲವೋ? ನಿನ್ನ ಜೀವವನ್ನು ಕಾಯುವಾತನು ಅದನ್ನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?

[13] ಮಗನೇ, ಜೇನನ್ನು ತಿನ್ನು, ಅದು ಚೆನ್ನಾಗಿದೆ; ಜೇನು ಗೂಡಿನ ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಾಗಿದೆ.

[14] ಅಂತೆಯೇ ಜ್ಞಾನವು ನಿನಗೆ ಜೇನುತುಪ್ಪದಂತೆ ತಿಳಿದುಕೋ. ಅದು ಸಿಕ್ಕಿದಾಗ ನಿನಗೆ ಉಜ್ವಲ ಭವಿಷ್ಯವಿದೆ. ನಿನ್ನ ನಿರೀಕ್ಷೆಯು ನಿರರ್ಥಕವಾಗುವುದಿಲ್ಲ.

[15] ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚು ಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ.

[16] ಏಕೆಂದರೆ ನೀತಿವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡು ಬಂದಾಗ ಬೀಳುವನು.

[17] ನಿನ್ನ ಶತ್ರು ಬಿದ್ದರೆ ಆನಂದಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.

[18] ಯೆಹೋವ ದೇವರು ಅದನ್ನು ಕಂಡು, ಅದು ಅವರಿಗೆ ಇಷ್ಟವಿಲ್ಲದ್ದರಿಂದ, ಅವರು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಿಬಿಟ್ಟಾರು.

[19] ಕೆಟ್ಟವರನ್ನು ಕಂಡು ಉರಿಗೊಳ್ಳಬೇಡ; ಇಲ್ಲವೆ ದುಷ್ಟರನ್ನು ಕಂಡು ಅಸೂಯೆಪಡಬೇಡ.

[20] ಏಕೆಂದರೆ ಕೆಡುಕನಿಗೆ ಭವಿಷ್ಯದ ನಿರೀಕ್ಷೆ ಇರುವುದಿಲ್ಲ; ದುಷ್ಟರ ದೀಪವು ಆರಿಹೋಗುವುದು.

[21] ಮಗನೇ, ಯೆಹೋವ ದೇವರಿಗೂ, ಅರಸನಿಗೂ ಭಯಪಡು; ತಿರುಗಿಬೀಳುವವರ ಸಹವಾಸ ಮಾಡಬೇಡ,

[22] ಏಕೆಂದರೆ ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವದು; ಅವರು ಯಾವ ವಿಪತ್ತುಗಳನ್ನು ತರಬಹುದು ಎಂದು ಯಾರಿಗೆ ತಿಳಿದಿದೆ?

[23] ಇವು ಜ್ಞಾನಿಗಳ ಹೇಳಿಕೆಗಳಾಗಿವೆ: ನ್ಯಾಯ ವಿಚಾರಣೆಯಲ್ಲಿ ಪಕ್ಷಪಾತವು ಸರಿಯಲ್ಲ.

[24] ಯಾವನು ದುಷ್ಟನಿಗೆ, “ನೀನು ನೀತಿವಂತನು” ಎಂದು ಹೇಳುತ್ತಾನೋ ಅವನನ್ನು ಜನರು ಶಪಿಸುವರು; ಜನಾಂಗಗಳು ಅವನನ್ನು ದೂಷಿಸುವರು.

[25] ಆದರೆ ತಪ್ಪುಮಾಡಿದವರನ್ನು ತಿದ್ದುವವರಿಗೆ ಶುಭವಾಗುವುದು; ಅವರ ಮೇಲೆ ಒಳ್ಳೆಯ ಆಶೀರ್ವಾದವು ಬರುವುದು.

[26] ಪ್ರಾಮಾಣಿಕವಾದ ಉತ್ತರವು ತುಟಿಗೆ ಮುದ್ದಿಟ್ಟಂತೆ.

[27] ನಿನ್ನ ಹೊರಗಿನ ಕೆಲಸವನ್ನು ಕ್ರಮವಾಗಿ ಇರಿಸು. ನಿನ್ನ ಹೊಲಗಳನ್ನು ಸಿದ್ಧಪಡಿಸು; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.

[28] ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ಮಾತುಗಳಿಂದ ಅವನಿಗೆ ಮೋಸ ಮಾಡಬೇಡ.

[29] ನನಗೆ, “ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು,” ಎಂದು ಹೇಳಬೇಡ.

[30] ನಾನು ಸೋಮಾರಿಯ ಹೊಲದ ಪಕ್ಕದಲ್ಲಿ ಬುದ್ಧಿಹೀನನ ದ್ರಾಕ್ಷಿತೋಟದ ಕಡೆಯಲ್ಲಿ ಹಾದು ಹೋದೆನು.

[31] ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಗಿತ್ತು.

[32] ಆಗ ನಾನು ಅದನ್ನು ನೋಡಿ ಚಿಂತಿಸತೊಡಗಿದೆ; ನಾನು ಕಂಡದ್ದರಿಂದ ಪಾಠ ಕಲಿತೆನು.

[33] ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನು ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?

[34] ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.

ಜ್ಞಾನೋಕ್ತಿಗಳು — Chapters