[1] ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತಲೂ ಗೌರವದಿಂದಿರುವುದು ಉತ್ತಮ.
[2] ಧನಿಕರು, ಬಡವರು ಇದನ್ನು ಸಾಮಾನ್ಯವಾಗಿ ಹೊಂದಿರುವರು: ಇವರೆಲ್ಲರನ್ನು ಸೃಷ್ಟಿಸಿದಾತ ಯೆಹೋವ ದೇವರೇ.
[3] ಜಾಣನು ಕೇಡನ್ನು ಮುಂದಾಗಿ ಕಂಡು ತಾನು ಅಡಗಿಕೊಳ್ಳುತ್ತಾನೆ; ಆದರೆ ಮುಗ್ಧನು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾನೆ.
[4] ಯೆಹೋವ ದೇವರ ಭಯವೂ ದೀನತೆಯೂ ಕೊಡುವ ಪ್ರತಿಫಲ, ಐಶ್ವರ್ಯವೂ ಮಾನವೂ ಜೀವವೂ ಆಗಿದೆ.
[5] ದುಷ್ಟರ ದಾರಿಯಲ್ಲಿ ಮುಳ್ಳುಗಳೂ, ಉರುಲುಗಳೂ ಇವೆ; ತನ್ನ ಜೀವವನ್ನು ಕಾಪಾಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
[6] ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದರಿಂದ ದೂರ ಹೋಗುವುದಿಲ್ಲ.
[7] ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ; ಸಾಲಗಾರನು ಸಾಲಕೊಟ್ಟವನಿಗೆ ಗುಲಾಮನು.
[8] ಕೆಟ್ಟತನವನ್ನು ಬಿತ್ತುವವನು ಕೇಡನ್ನು ಕೊಯ್ಯುವನು; ಅವನ ಕೋಪದ ಬೆತ್ತವು ಮುರಿದು ಹೋಗುವುದು.
[9] ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು, ಏಕೆಂದರೆ ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
[10] ಪರಿಹಾಸ್ಯ ಮಾಡುವವನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವುದು; ವಿವಾದವೂ ನಿಂದೆಯೂ ನಿಂತುಹೋಗುವುವು.
[11] ಶುದ್ಧ ಹೃದಯವನ್ನು ಪ್ರೀತಿಸಿ, ಕೃಪೆಯಿಂದ ಮಾತನಾಡುವವನಿಗೆ ಅರಸನು ಸ್ನೇಹಿತನಾಗಿರುವನು.
[12] ಯೆಹೋವ ದೇವರ ಕಣ್ಣುಗಳು ತಿಳುವಳಿಕೆಯನ್ನು ಕಾಯುತ್ತವೆ; ಅವರು ದ್ರೋಹಿಯ ಮಾತುಗಳನ್ನು ಕೆಡವಿ ಹಾಕುತ್ತಾರೆ.
[13] ಸೋಮಾರಿಯು, “ಹೊರಗೆ ಸಿಂಹವಿದೆ! ಅದು ನನ್ನನ್ನು ಬೀದಿಗಳಲ್ಲಿ ಕೊಂದುಹಾಕುತ್ತದೆ,” ಎಂದು ಹೇಳುತ್ತಾನೆ.
[14] ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಯೆಹೋವ ದೇವರಿಗೆ ಸಿಟ್ಟನ್ನು ಎಬ್ಬಿಸುವವನು ಅದರಲ್ಲಿ ಬೀಳುವನು.
[15] ಮೂರ್ಖತನ ಯುವಕನ ಹೃದಯದಲ್ಲಿ ಬಂಧಿಸಲಾಗಿದೆ; ಆದರೆ ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವುದು.
[16] ತನ್ನ ಸಂಪತ್ತನ್ನು ವೃದ್ಧಿಗೊಳಿಸುವುದಕ್ಕೆ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ದಾನ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು.
[17] ಜ್ಞಾನಿಗಳ ಮಾತುಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ನಿನ್ನ ಹೃದಯವು ಅನ್ವಯಿಸಲಿ.
[18] ಏಕೆಂದರೆ ಅವುಗಳನ್ನು ನಿನ್ನ ಹೃದಯದಲ್ಲಿ ಇಟ್ಟು ಕಾಪಾಡು, ಅವು ನಿನ್ನ ತುಟಿಗಳ ಮೇಲೆ ಸಿದ್ಧವಿದ್ದರೆ ಮೆಚ್ಚುಗೆಯಾಗಿವೆ.
[19] ನಿನ್ನ ಭರವಸೆಯು ಯೆಹೋವ ದೇವರಲ್ಲಿ ಇರುವಂತೆ ಈ ದಿವಸ ನಿನಗೇ ತಿಳಿಯಪಡಿಸಿದ್ದೇನೆ.
[20] ನಾನು ನಿಮಗಾಗಿ ಮೂವತ್ತು ಹೇಳಿಕೆಗಳನ್ನು ಬರೆದಿಲ್ಲವೋ? ಸಲಹೆ ಮತ್ತು ಪರಿಜ್ಞಾನದ ಹೇಳಿಕೆಗಳು,
[21] ಪ್ರಾಮಾಣಿಕವಾಗಿರಲು ಮತ್ತು ಸತ್ಯವನ್ನು ಮಾತನಾಡಲು ನಿಮಗೆ ಕಲಿಸುವುದು, ಆದ್ದರಿಂದ ನೀವು ಸೇವೆ ಸಲ್ಲಿಸುವವರಿಗೆ ಸತ್ಯವಾದ ವರದಿಗಳನ್ನು ಹಿಂತಿರುಗಿಸುವಂತೆ ನಾನು ನಿಮಗೆ ಬರೆದಿದ್ದೇನೆ.
[22] ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆಮಾಡಬೇಡ; ನ್ಯಾಯಾಲಯದಲ್ಲಿ ದರಿದ್ರರನ್ನು ತುಳಿಯಬೇಡ.
[23] ಏಕೆಂದರೆ ಯೆಹೋವ ದೇವರು ಅವರ ವ್ಯಾಜ್ಯವನ್ನು ನಡೆಸಿ, ಸೂರೆ ಮಾಡಿದವರ ಪ್ರಾಣವನ್ನು ಸೂರೆ ಮಾಡುವರು.
[24] ಮುಂಗೊಪಿಯೊಂದಿಗೆ ಸ್ನೇಹ ಬೆಳೆಸಬೇಡ; ಸುಲಭವಾಗಿ ಕೋಪಗೊಳ್ಳುವವರೊಂದಿಗೆ ಸಹವಾಸ ಮಾಡಬೇಡ;
[25] ಹಾಗೆ ಮಾಡಿದರೆ ನೀನು ಅವನ ನಡತೆಗಳನ್ನು ಕಲಿತು, ನಿನ್ನನ್ನೇ ಉರುಲಿಗೆ ಸಿಕ್ಕಿಸಿಕೊಳ್ಳುವೆ.
[26] ಬೇರೆಯವರ ಸಾಲವನ್ನು ಖಾತರಿಪಡಿಸಲೂ ಬೇರೊಬ್ಬರಿಗೆ ಭದ್ರತೆಯನ್ನು ನೀಡಲು ಒಪ್ಪಬೇಡ.
[27] ಸಾಲ ತೀರಿಸಲು ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದುಕೊಂಡು ಹೋಗುವನಲ್ಲವೇ?
[28] ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ.
[29] ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ಸೇವೆ ಸಲ್ಲಿಸುವನು.