Skip to content
Opens in a new window
Listen to this chapter • 4:00

[1] ಶಿಸ್ತನ್ನು ಪ್ರೀತಿಸುವವನು ಪರಿಜ್ಞಾನವನ್ನು ಪ್ರೀತಿಸುವವನಾಗಿದ್ದಾನೆ, ಆದರೆ ತಿದ್ದುವಿಕೆಯನ್ನು ಹಗೆಮಾಡುವವನು ದಡ್ಡನು.

[2] ಒಳ್ಳೆಯವನು ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ, ಆದರೆ ಕುಯುಕ್ತಿ ಮಾಡುವವನನ್ನು ಅವರು ದುಷ್ಟನೆಂದು ಖಂಡಿಸುತ್ತಾರೆ.

[3] ಒಬ್ಬ ಮನುಷ್ಯನು ದುಷ್ಟತನದಿಂದ ಸ್ಥಿರವಾಗುವುದಿಲ್ಲ. ಆದರೆ ನೀತಿವಂತರನ್ನು ಕಿತ್ತುಹಾಕಲಾಗುವುದಿಲ್ಲ.

[4] ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ಆದರೆ ನಾಚಿಕೆ ಪಡಿಸುವವಳು ಅವನ ಎಲುಬುಗಳಿಗೆ ಕ್ಷಯ ರೋಗದಂತೆ ಇರುವಳು.

[5] ನೀತಿವಂತರ ಯೋಜನೆಗಳು ನ್ಯಾಯವಾಗಿವೆ; ದುಷ್ಟರ ಸಲಹೆ ಮೋಸಭರಿತ.

[6] ದುಷ್ಟರ ಮಾತುಗಳು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಅವರನ್ನು ಬಿಡಿಸುವುದು.

[7] ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು.

[8] ತನ್ನ ಜ್ಞಾನಕ್ಕನುಸಾರವಾಗಿ ಮನುಷ್ಯನು ಗೌರವ ಹೊಂದುವನು; ವಕ್ರಹೃದಯವುಳ್ಳವನು ಕಡೆಗಣಿಸಲಾಗುವನು.

[9] ಹೊಟ್ಟೆಗೆ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸಾಮಾನ್ಯ ಸೇವಕನೇ ಮೇಲು.

[10] ನೀತಿವಂತನು ತನ್ನ ಪ್ರಾಣಿಗಳಿಗೂ ಕಾಳಜಿ ತೋರುವನು; ಆದರೆ ದುಷ್ಟರ ಕರುಣೆಯ ಕಾರ್ಯಗಳು ಕ್ರೂರತನವೇ.

[11] ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು, ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನು ವಿವೇಕಶೂನ್ಯನು.

[12] ದುಷ್ಟರು ಕೆಟ್ಟವರ ಭದ್ರಕೋಟೆಯನ್ನು ಅಪೇಕ್ಷಿಸುತ್ತಾರೆ; ಆದರೆ ನೀತಿವಂತರ ಬೇರು ಫಲವನ್ನು ಕೊಡುತ್ತದೆ.

[13] ದುಷ್ಟನು ತನ್ನ ತಪ್ಪು ಮಾತುಗಳಿಂದ ಬಲೆಗೆ ಬೀಳುವನು, ಆದರೆ ನೀತಿವಂತರು ಇಕ್ಕಟ್ಟಿನೊಳಗಿಂದ ತಪ್ಪಿಸಿಕೊಳ್ಳುವರು.

[14] ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದರಿಂದ ತೃಪ್ತನಾಗುವನು, ಮನುಷ್ಯನ ಕೈಕೆಲಸಗಳು ಅವನಿಗೆ ಪ್ರತಿಫಲವನ್ನು ಕೊಡುವುವು.

[15] ಮೂರ್ಖನ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ, ಆದರೆ ಜ್ಞಾನಿಯು ಸಲಹೆಗೆ ಕಿವಿಗೊಡುವನು.

[16] ಮೂರ್ಖನ ಕೋಪವು ತಟ್ಟನೆ ರಟ್ಟಾಗುವುದು, ಆದರೆ ಜಾಣನು ಅವಮಾನವನ್ನು ನಿರ್ಲಕ್ಷಿಸುತ್ತಾನೆ.

[17] ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.

[18] ಅಜಾಗರೂಕತೆಯ ಮಾತುಗಳು ಖಡ್ಗಗಳಂತೆ ಚುಚ್ಚುತ್ತವೆ, ಆದರೆ ಜ್ಞಾನವಂತರ ನಾಲಿಗೆಯು ಸ್ವಸ್ಥತೆಯನ್ನು ತರುವುದು.

[19] ಸತ್ಯದ ತುಟಿಯು ಸದಾ ಸ್ಥಿರಗೊಳ್ಳುವುದು, ಸುಳ್ಳಾಡುವ ನಾಲಿಗೆಯು ಕ್ಷಣಿಕ.

[20] ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.

[21] ನೀತಿವಂತನಿಗೆ ಯಾವ ಕೇಡೂ ಸಂಭವಿಸದು, ಆದರೆ ದುಷ್ಟರು ಕೇಡಿನಿಂದ ತುಂಬಿಕೊಳ್ಳುವರು.

[22] ಸುಳ್ಳಾಡುವ ತುಟಿಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಆದರೆ ಸತ್ಯವಂತರಲ್ಲಿ ಅವರು ಆನಂದಿಸುತ್ತಾರೆ.

[23] ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುತ್ತಾನೆ; ಆದರೆ ಮೂರ್ಖನ ಹೃದಯವು ಮೂರ್ಖತನವನ್ನು ಹೇಳುತ್ತದೆ.

[24] ಚುರುಕು ಕೈಯುಳ್ಳವನು ಆಳುವನು; ಸೋಮಾರಿಗಳು ಗುಲಾಮರಾಗುವರು.

[25] ಆತಂಕವು ಹೃದಯವನ್ನು ಕುಗ್ಗಿಸುವುದು, ಆದರೆ ಕನಿಕರದ ಮಾತು ಹುರಿದುಂಬಿಸುವುದು.

[26] ನೀತಿವಂತರು ತಮ್ಮ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸುತ್ತಾರೆ, ಆದರೆ ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆಯುತ್ತದೆ.

[27] ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವುದಿಲ್ಲ, ಆದರೆ ಶ್ರಮಪಡುವವರು ಅದನ್ನು ತೃಪ್ತಿಯಿಂದ ತಿನ್ನುತ್ತಾರೆ.

[28] ನೀತಿಯ ಮಾರ್ಗದಲ್ಲಿ ಜೀವವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.

ಜ್ಞಾನೋಕ್ತಿಗಳು — Chapters