Skip to content
Opens in a new window
Listen to this chapter • 4:16

[1] ಬುದ್ಧಿಹೀನನ ವಕ್ರ ತುಟಿಗಳಿಗಿಂತ, ನಿರ್ದೋಷವಾಗಿ ನಡೆಯುವ ಬಡವನು ಉತ್ತಮ.

[2] ಪರಿಜ್ಞಾನವಿಲ್ಲದ ಆಸಕ್ತಿಯು ಯುಕ್ತವಲ್ಲ; ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು.

[3] ಮನುಷ್ಯನ ಬುದ್ಧಿಹೀನತೆ ಅವನ ದುರ್ಗತಿಗೆ ದಾರಿಯಾಗಿದೆ, ಆದರೂ ಅವನ ಹೃದಯವು ಯೆಹೋವ ದೇವರಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.

[4] ಸಂಪತ್ತು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ; ಆದರೆ ಬಡವನು ತನ್ನ ಆಪ್ತಸ್ನೇಹಿತನಿಂದ ದೂರವಾಗುತ್ತಾನೆ.

[5] ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು.

[6] ಅನೇಕರು ಅಧಿಪತಿಯಿಂದ ಸಹಾಯ ಪಡೆಯುತ್ತಾರೆ. ಕಾಣಿಕೆಗಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.

[7] ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ; ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ ಅವನಿಗೆ ಏನೂ ದೊರಕದು.

[8] ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ; ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ.

[9] ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ; ಸುಳ್ಳಾಡುವವನು ಹಾಳಾಗಿ ಹೋಗುವನು.

[10] ಬುದ್ಧಿಹೀನನಿಗೆ ಭೋಗಜೀವನವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವುದು ಸೇವಕನಿಗೆ ಯುಕ್ತವೇ ಅಲ್ಲ.

[11] ಮನುಷ್ಯನ ಜ್ಞಾನವು ತಾಳ್ಮೆಯನ್ನು ನೀಡುತ್ತದೆ; ಅಪರಾಧವನ್ನು ಲಕ್ಷಿಸದೆ ಇರುವುದು ಅವನಿಗೆ ಮಹಿಮೆಯಾಗಿದೆ.

[12] ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.

[13] ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕರನು; ಜಗಳವಾಡುವ ಹೆಂಡತಿ ಯಾವಾಗಲೂ ತೊಟ್ಟಿಕ್ಕುವ ಹನಿ.

[14] ಮನೆಯೂ ಸಂಪತ್ತೂ ಪಿತೃಗಳ ಸ್ವಾಸ್ತ್ಯವು; ವಿವೇಕಿಯಾದ ಹೆಂಡತಿಯು ಯೆಹೋವ ದೇವರಿಂದಲೇ.

[15] ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುತ್ತದೆ; ಸೋಮಾರಿಯು ಹಸಿವೆಗೊಳ್ಳುವನು.

[16] ಯಾರು ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ, ಆದರೆ ಅವುಗಳನ್ನು ಅಸಡ್ಡೆ ಮಾಡುವವನು ಸಾಯುವನು.

[17] ಬಡವರಿಗೆ ದಯೆ ತೋರಿಸುವವನು ಯೆಹೋವ ದೇವರಿಗೆ ಸಾಲ ಕೊಡುತ್ತಾನೆ; ಆತನು ಅವನ ಉಪಕಾರಕ್ಕಾಗಿ ಪ್ರತ್ಯುಪಕಾರ ಮಾಡುವನು.

[18] ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಮರಣಕ್ಕೆ ನೀನು ಕಾರಣನಾಗಬೇಡ.

[19] ಕೋಪಿಷ್ಟನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ, ತಿರುಗಿ ನೀನು ಬಿಡಿಸಬೇಕಾಗುವುದು.

[20] ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು; ಕಡೆಯಲ್ಲಿ ನೀನು ಜ್ಞಾನಿಯಾಗುವೆ.

[21] ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ; ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು.

[22] ನಿಷ್ಠೆಯು ಮನುಷ್ಯನನ್ನು ಆಕರ್ಷಕನನ್ನಾಗಿ ಮಾಡುತ್ತದೆ. ಬಡವನು ಸುಳ್ಳುಗಾರನಿಗಿಂತ ಲೇಸು.

[23] ಯೆಹೋವ ದೇವರ ಭಯವು ಜೀವದಾಯಕವು; ಆಗ ಅವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವುದಿಲ್ಲ.

[24] ಮೈಗಳ್ಳನು ಪಾತ್ರೆಯೊಳಗೆ ತನ್ನ ಕೈಯನ್ನು ಮುಳುಗಿಸಿ, ಅವನು ಅದನ್ನು ಮತ್ತೆ ತನ್ನ ಬಾಯಿಗೆ ತರುವುದಿಲ್ಲ!

[25] ಪರಿಹಾಸ್ಯಗಾರನನ್ನು ಹೊಡೆದರೆ, ಮುಗ್ಧರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿದರೆ, ಅವನು ಪರಿಜ್ಞಾನವನ್ನು ಗ್ರಹಿಸುವನು.

[26] ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ.

[27] ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ, ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.

[28] ಭ್ರಷ್ಟನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿ ಮಾಡುತ್ತದೆ; ದುಷ್ಟನ ಬಾಯಿಯು ದ್ರೋಹವನ್ನು ನುಂಗುವುದು.

[29] ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ, ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.

ಜ್ಞಾನೋಕ್ತಿಗಳು — Chapters