Skip to content
Opens in a new window
Listen to this chapter • 4:50

[1] ಮೋಸದ ತಕ್ಕಡಿ ಯೆಹೋವ ದೇವರಿಗೆ ಅಸಹ್ಯವಾಗಿದೆ; ಆದರೆ ನ್ಯಾಯದ ತೂಕ ಅವರಿಗೆ ಮೆಚ್ಚುಗೆ.

[2] ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ಆದರೆ ದೀನತೆಯೊಂದಿಗೆ ಜ್ಞಾನ ಬರುವುದು.

[3] ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡೆಸುವುದು; ಅಪನಂಬಿಗಸ್ತರ ಕಪಟತನವೇ ಅವರನ್ನು ನಾಶಪಡಿಸುವುದು.

[4] ಉಗ್ರತೆಯ ದಿನದಲ್ಲಿ ಸಂಪತ್ತು ಲಾಭಕರವಾಗುವುದಿಲ್ಲ; ಆದರೆ ನೀತಿಯ ನಡತೆ ಮರಣದಿಂದ ವಿಮೋಚಿಸುವುದು.

[5] ನಿಷ್ಕಳಂಕರ ನೀತಿಯು ಅವರ ಮಾರ್ಗವನ್ನು ಸರಾಗ ಮಾಡುವುದು; ಆದರೆ ದುಷ್ಟರು ತಮ್ಮ ದುಷ್ಟತ್ವದಿಂದಲೇ ಬೀಳುವರು.

[6] ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವುದು; ಆದರೆ ಅಪನಂಬಿಗಸ್ತರು ದುಷ್ಟ ಆಸೆಗಳಿಂದ ಸಿಕ್ಕಿಹಾಕಿಕೊಳ್ಳುತ್ತಾರೆ.

[7] ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವುವು; ತನ್ನ ಬಲದಿಂದ ನಿರೀಕ್ಷಿಸಿದ್ದೆಲ್ಲವೂ ಇಲ್ಲದಂತಾಗುವುದು.

[8] ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ, ದುಷ್ಟನು ಅದರ ಸ್ಥಳದಲ್ಲಿ ಸಿಕ್ಕಿಬೀಳುವನು.

[9] ಒಬ್ಬ ಭಕ್ತಿಹೀನನು ಬಾಯಿಂದ ತನ್ನ ನೆರೆಯವನನ್ನು ಹಾಳು ಮಾಡುತ್ತಾನೆ, ಆದರೆ ನೀತಿವಂತನು ತಿಳುವಳಿಕೆಯ ಮೂಲಕ ಬಿಡಿಸಲಾಗುವನು.

[10] ನೀತಿವಂತರು ಅಭಿವೃದ್ಧಿಹೊಂದಿದರೆ, ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ, ಜಯೋತ್ಸವ ಉಂಟಾಗುತ್ತದೆ.

[11] ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಪ್ರಗತಿಯಾಗುತ್ತದೆ, ಆದರೆ ದುಷ್ಟರ ಬಾಯಿಂದ ಅದು ನಾಶವಾಗುತ್ತದೆ.

[12] ಜ್ಞಾನವಿಲ್ಲದವನು ತನ್ನ ನೆರಯವನನ್ನು ಹೀನೈಸುತ್ತಾನೆ, ಆದರೆ ತಿಳುವಳಿಕೆಯುಳ್ಳವನು ಮೌನವಾಗಿರುತ್ತಾನೆ.

[13] ಚಾಡಿಕೋರನು ರಹಸ್ಯಗಳನ್ನು ಬಹಿರಂಗಪಡಿಸುತ್ತಾನೆ, ಆದರೆ ನಂಬಿಗಸ್ತನು ಆ ಸಂಗತಿಯನ್ನು ಮುಚ್ಚುತ್ತಾನೆ.

[14] ಆಲೋಚನೆ ಇಲ್ಲದೆ ಇರುವಲ್ಲಿ ಜನರು ಬೀಳುತ್ತಾರೆ, ಆದರೆ ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.

[15] ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ, ಹೊಣೆಗಾರನಾಗಿರದವನು ಸುರಕ್ಷಿತವಾಗಿರುವನು.

[16] ದಯೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಸಂಪಾದಿಸಿಕೊಳ್ಳುತ್ತಾಳೆ, ನಿಷ್ಕರುಣ ವ್ಯಕ್ತಿ ಸಂಪತ್ತನ್ನು ಮಾತ್ರ ಪಡೆದುಕೊಳ್ಳುತ್ತಾನೆ.

[17] ದಯೆಯುಳ್ಳವನು ತನಗೆ ತಾನೇ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ, ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.

[18] ದುಷ್ಟನು ಮೋಸದ ಸಂಬಳವನ್ನು ಸಂಪಾದಿಸುತ್ತಾನೆ, ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹವಾದ ಬಹುಮಾನವಿರುವುದು.

[19] ನೀತಿವಂತನ ಮಾರ್ಗಗಳಲ್ಲಿ ಅಚಲವಾಗಿರುವವನು ಜೀವ ಹೊಂದುತ್ತಾನೆ, ಕೆಟ್ಟದ್ದನ್ನು ಬೆನ್ನಟ್ಟುವವನು ತನ್ನ ಮರಣವನ್ನು ಬೆನ್ನಟ್ಟುತ್ತಾನೆ.

[20] ವಕ್ರ ಹೃದಯವುಳ್ಳವರು ಯೆಹೋವ ದೇವರಿಗೆ ಅಸಹ್ಯವಾದವರು, ಆದರೆ, ಸನ್ಮಾರ್ಗದಲ್ಲಿ ಯಥಾರ್ಥವಾಗಿ ಇರುವವರಲ್ಲಿ ಅವರು ಆನಂದಿಸುತ್ತಾರೆ.

[21] ದುಷ್ಟನಿಗೆ ಶಿಕ್ಷೆ ತಪ್ಪುವುದಿಲ್ಲ; ನೀತಿವಂತರ ವಂಶವು ಬಿಡುಗಡೆ ಹೊಂದುವುದು.

[22] ಹಂದಿಯ ಮೂಗಿಗೆ ಬಂಗಾರದ ಮೂಗುತಿಯು ಹೇಗೋ, ಹಾಗೆಯೇ ವಿವೇಕವಿಲ್ಲದ ಸ್ತ್ರೀಗೆ ಸೌಂದರ್ಯವು.

[23] ನೀತಿವಂತರ ಅಪೇಕ್ಷೆಯು ಶುಭಕ್ಕಾಸ್ಪದ, ದುಷ್ಟರ ಅಪೇಕ್ಷೆಯು ತೀರ್ಪಿಗೀಡು.

[24] ಒಬ್ಬನು ತನ್ನ ಸಂಪತ್ತನ್ನು ಉದಾರವಾಗಿ ವ್ಯಯಮಾಡಿದರೂ ಅವನು ವೃದ್ಧಿಯಾಗುತ್ತಾನೆ, ಆದರೆ ಇನ್ನೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನು ಬಡತನಕ್ಕೆ ಬರುತ್ತಾನೆ.

[25] ಉದಾರಿಯು ಅಭಿವೃದ್ಧಿ ಹೊಂದುವನು; ಬೇರೆಯವರಿಗೆ ಚೈತನ್ಯ ಕೊಡುವವನು ಚೈತನ್ಯ ಹೊಂದುವನು.

[26] ಧಾನ್ಯವನ್ನು ಬಚ್ಚಿಟ್ಟುಕೊಳ್ಳುವವನನ್ನು ಜನರು ಶಪಿಸುವರು; ಆದರೆ ಅದನ್ನು ಮಾರುವವನ ಮೇಲೆ ಆಶೀರ್ವಾದವು ನೆಲೆಯಾಗಿರುವುದು.

[27] ಒಳ್ಳೆಯದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದುತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವುದು.

[28] ತನ್ನ ಐಶ್ವರ್ಯದಲ್ಲಿ ಭರವಸೆ ಇಡುವವನು ಬಿದ್ದುಹೋಗುವನು, ಆದರೆ ನೀತಿವಂತರು ಹಸಿರೆಲೆಯ ಹಾಗೆ ಚಿಗುರುವರು.

[29] ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಮೂರ್ಖನು ಜ್ಞಾನನಿಗೆ ಸೇವಕನಾಗಿರುವನು.

[30] ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ.

[31] ಇಗೋ, ಭೂಮಿಯ ಮೇಲೆ ನೀತಿವಂತರು ತಮ್ಮ ಫಲವನ್ನು ಹೊಂದಲಿಕ್ಕಿರುವಾಗ, ದುಷ್ಟರು ಮತ್ತು ಪಾಪಿಗಳು ಎಷ್ಟೋ ಹೆಚ್ಚಾಗಿ ತಮ್ಮ ಫಲವನ್ನು ಹೊಂದುತ್ತಾರೆ.

ಜ್ಞಾನೋಕ್ತಿಗಳು — Chapters