[1] ಮಗನೇ, ನನ್ನ ಉಪದೇಶವನ್ನು ಮರೆಯಬೇಡ; ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
[2] ಏಕೆಂದರೆ ಅವು ನಿನ್ನ ದಿನಗಳನ್ನು ಹೆಚ್ಚಿಸಿ ದೀರ್ಘಾಯುಷ್ಯವನ್ನು ನೀಡುವುದು, ಸಮಾಧಾನವನ್ನೂ ಸಮೃದ್ಧಿಯನ್ನೂ ನಿನಗೆ ಕೊಡುವುದು.
[3] ಪ್ರೀತಿ, ನಂಬಿಗಸ್ತಿಕೆಗಳು ನಿನ್ನನ್ನು ಬಿಡದಿರಲಿ; ಅವು ನಿನ್ನ ಕೊರಳಿನ ಸುತ್ತಲೂ ಕಟ್ಟಿರಲಿ, ನಿನ್ನ ಹೃದಯದ ಹಲಗೆಯ ಮೇಲೆ ಅವು ಬರೆದಿರಲಿ.
[4] ಆಗ ದೇವರ ಮುಂದೆಯೂ ಮನುಷ್ಯರ ಮುಂದೆಯೂ ದಯೆಯನ್ನೂ, ಒಳ್ಳೆಯ ಹೆಸರನ್ನೂ ನೀನು ಪಡೆದುಕೊಳ್ಳುವೆ.
[5] ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ.
[6] ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು.
[7] ನಿನ್ನ ದೃಷ್ಟಿಯಲ್ಲಿ ನೀನೇ ಜ್ಞಾನಿ ಎಂದು ಇರಬೇಡ; ಯೆಹೋವ ದೇವರಿಗೆ ಭಯಪಟ್ಟು, ಕೆಟ್ಟದ್ದನ್ನು ತೊರೆದುಬಿಡು.
[8] ನಿನ್ನ ದೇಹಕ್ಕೆ ಅದು ಆರೋಗ್ಯವನ್ನು ತರುವುದು; ನಿನ್ನ ಎಲುಬುಗಳಿಗೆ ಅದು ಪೋಷಣೆಯನ್ನೂ ತರುವುದು.
[9] ನಿನ್ನ ಆಸ್ತಿಯಿಂದಲೂ ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.
[10] ಆಗ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು; ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿರುವುದು.
[11] ಮಗನೇ, ಯೆಹೋವ ದೇವರ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
[12] ಏಕೆಂದರೆ ತಂದೆಯು ತನ್ನ ಮುದ್ದುಮಗನನ್ನು ಶಿಕ್ಷಿಸುವಂತೆ, ಯೆಹೋವ ದೇವರು ಯಾರನ್ನು ಪ್ರೀತಿಸುತ್ತಾರೋ, ಅವರನ್ನು ಶಿಸ್ತುಗೊಳಿಸುವರು.
[13] ಜ್ಞಾನವನ್ನು ಕಂಡುಕೊಳ್ಳುವವನು ಧನ್ಯನು, ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.
[14] ಏಕೆಂದರೆ ಜ್ಞಾನವು ಬೆಳ್ಳಿಗಿಂತ ಹೆಚ್ಚು ಲಾಭವೂ; ಬಂಗಾರಕ್ಕಿಂತ ಹೆಚ್ಚು ಆದಾಯವನ್ನು ಕೊಡುವುದು.
[15] ಜ್ಞಾನವು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯ; ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವುದಿಲ್ಲ.
[16] ಜ್ಞಾನದ ಬಲಗೈಯಲ್ಲಿ ದೀರ್ಘಾಯುಷ್ಯವಿದೆ; ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ.
[17] ಜ್ಞಾನದ ಮಾರ್ಗಗಳು ಸಂತೋಷಕರ; ಅದರ ದಾರಿಗಳೆಲ್ಲಾ ಶಾಂತಿಯ ದಾರಿಗಳೇ.
[18] ಜ್ಞಾನವನ್ನು ಹಿಡಿದುಕೊಳ್ಳುವವರಿಗೆ ಜ್ಞಾನವು ಜೀವವೃಕ್ಷವಾಗಿದೆ; ಅದನ್ನು ಭದ್ರವಾಗಿ ಇಟ್ಟುಕೊಳ್ಳುವವರು ಧನ್ಯರು.
[19] ಯೆಹೋವ ದೇವರು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದರು, ತಮ್ಮ ತಿಳುವಳಿಕೆಯ ಮೂಲಕ ಅವರು ಆಕಾಶಗಳನ್ನು ಸ್ಥಿರಪಡಿಸಿದರು.
[20] ದೇವರು ತಮ್ಮ ಅರಿವಿನಿಂದಲೇ ಸೆಲೆಗಳು ಒಡೆದು, ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.
[21] ಮಗನೇ, ಜ್ಞಾನವನ್ನೂ ತಿಳುವಳಿಕೆಯನ್ನೂ ಕಾಪಾಡಿಕೋ, ನಿನ್ನ ಕಣ್ಣುಗಳಿಂದ ಅವು ತಪ್ಪಿಹೋಗದೆ ಇರಲಿ.
[22] ಅವು ನಿನಗೆ ಜೀವವಾಗಿರಲಿ. ನಿನ್ನ ಕೊರಳಿಗೆ ಆಭರಣವೂ ಆಗಿರುವುವು.
[23] ಆಗ ನಿನ್ನ ಮಾರ್ಗದಲ್ಲಿ ಸುರಕ್ಷಿತವಾಗಿರುವೆ; ನೀನು ಎಡವದೆ ನಡೆಯುವೆ.
[24] ನೀನು ಮಲಗುವಾಗ ನಿನಗೆ ಹೆದರಿಕೆ ಇರುವುದಿಲ್ಲ; ನೀನು ಮಲಗಿದಾಗ ನಿದ್ರೆಯು ಸುಖವಾಗಿರುವುದು.
[25] ಆಕಸ್ಮಿಕ ವಿಪತ್ತಿಗೆ ನೀನು ಅಂಜುವುದಿಲ್ಲ; ದುಷ್ಟರ ಮೇಲೆ ಬರುವ ನಾಶನಕ್ಕೂ ನೀನು ಭಯಪಡದಿರುವೆ.
[26] ಏಕೆಂದರೆ ಯೆಹೋವ ದೇವರೇ ನಿನಗೆ ಭರವಸೆ ಆಗಿದ್ದಾರೆ, ನಿನ್ನ ಪಾದವು ಉರುಲಿಗೆ ಸಿಕ್ಕದಂತೆ ಅವರು ಕಾಪಾಡುವರು.
[27] ನಿನಗೆ ಶಕ್ತಿಯಿರುವಾಗಲೇ ಇತರರಿಗೆ ಉಪಕಾರಮಾಡು ಒಳಿತು ಮಾಡುವುದನ್ನು ನಿನ್ನಲ್ಲಿಯೇ ಇಟ್ಟುಕೊಳ್ಳಬೇಡ.
[28] ಕೊಡತಕ್ಕದ್ದು ಈಗಾಗಲೇ ನಿನ್ನಲ್ಲಿರುವಾಗ, “ಹೋಗಿ ಬಾ, ನಾಳೆ ನಿನಗೆ ಕೊಡುತ್ತೇನೆ,” ಎಂದು ನಿನ್ನ ನೆರೆಯವನಿಗೆ ಹೇಳಬೇಡ.
[29] ನಿನ್ನ ನೆರೆಯವನು ಭರವಸೆಯಿಂದ ನಿನ್ನ ಪಕ್ಕದಲ್ಲಿ ವಾಸಮಾಡುತ್ತಿರುವಾಗ, ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸಬೇಡ.
[30] ಒಬ್ಬನು ನಿನಗೆ ಯಾವ ತೊಂದರೆ ಮಾಡದಿದ್ದರೆ, ಅವನೊಂದಿಗೆ ಕಾರಣವಿಲ್ಲದೆ ದೂರು ನುಡಿಯಬೇಡ.
[31] ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೆಕಿಚ್ಚುಪಡಬೇಡ; ಅವನ ಮಾರ್ಗಗಳಲ್ಲಿ ಯಾವುದನ್ನೂ ನೀನು ಆರಿಸಿಕೊಳ್ಳಬೇಡ.
[32] ಏಕೆಂದರೆ ವಕ್ರಬುದ್ಧಿ ಯೆಹೋವ ದೇವರಿಗೆ ಅಸಹ್ಯ; ಆದರೆ ದೇವರ ನಂಬಿಗಸ್ತಿಕೆ ನೀತಿವಂತರೊಂದಿಗೆ ಇದೆ.
[33] ದುಷ್ಟರ ಮನೆಯ ಮೇಲೆ ದೈವಶಾಪವಿದೆ. ಆದರೆ ನೀತಿವಂತರ ನಿವಾಸದ ಮೇಲೆ ದೈವಾಶೀರ್ವಾದವಿರುವುದು.
[34] ದೇವರು ಗರ್ವಿಷ್ಠ ಪರಿಹಾಸ್ಯಗಾರರನ್ನು ಪರಿಹಾಸ್ಯ ಮಾಡುತ್ತಾರೆ; ದೀನರಿಗಾದರೋ ದೇವರು ಕೃಪೆಯನ್ನು ಕೊಡುತ್ತಾರೆ.
[35] ಜ್ಞಾನಿಗಳು ಸನ್ಮಾನಕ್ಕೆ ಬಾಧ್ಯನಾಗುವರು; ಆದರೆ ಜ್ಞಾನಹೀನರ ಪ್ರತಿಫಲವು ಅವಮಾನವೆ.