[1] ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ, ನಿನ್ನ ಎದುರಿನಲ್ಲಿ ಏನಿದೆ ಎಂದು ಶ್ರದ್ಧೆಯಿಂದ ಗಮನಿಸು.
[2] ನೀನು ಹೊಟ್ಟೆಬಾಕನಾಗಿದ್ದರೆ, ನಿನ್ನ ಕುತ್ತಿಗೆಗೆ ಖಡ್ಗವನ್ನು ಇಟ್ಟುಕೋ.
[3] ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ; ಏಕೆಂದರೆ ಅದು ಮೋಸದ ಆಹಾರವು.
[4] ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ; ಅದಕ್ಕಾಗಿ ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
[5] ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ. ಅದು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುವುದು.
[6] ಜಿಪುಣನ ಆಹಾರವನ್ನು ತಿನ್ನಬೇಡ; ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ.
[7] ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ ಯೋಚನೆಯುಳ್ಳವನಂತೆ ಇದ್ದಾನೆ; ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ; ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ.
[8] ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ; ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವೇ.
[9] ಬುದ್ಧಿಹೀನರ ಸಂಗಡ ಮಾತಾಡಬೇಡ; ಏಕೆಂದರೆ ನಿನ್ನ ಜ್ಞಾನದ ಮಾತುಗಳನ್ನು ಅವರು ತಿರಸ್ಕರಿಸುವನು.
[10] ಪೂರ್ವಕಾಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲಗಳನ್ನು ಅತಿಕ್ರಮಿಸಬೇಡ.
[11] ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ; ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು.
[12] ಶಿಸ್ತಿಗೆ ನಿನ್ನ ಹೃದಯವನ್ನೂ ತಿಳುವಳಿಕೆಯ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು.
[13] ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ; ಬೆತ್ತದಿಂದ ಹೊಡೆದರೆ, ಅವರು ಸಾಯುವುದಿಲ್ಲ.
[14] ಅವರನ್ನು ಬೆತ್ತದಿಂದ ಹೊಡೆದು, ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ.
[15] ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ, ನನ್ನ ಹೃದಯವು ಹರ್ಷಿಸುವುದು.
[16] ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ, ನನ್ನ ಅಂತರಾತ್ಮವು ಸಂತೋಷಿಸುವುದು.
[17] ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ; ಆದರೆ ಯೆಹೋವ ದೇವರ ಭಯದಲ್ಲಿರಲು ಯಾವಾಗಲೂ ಆಸಕ್ತನಾಗಿರು.
[18] ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
[19] ಮಗನೇ, ಕೇಳಿ ಜ್ಞಾನವಂತನಾಗು; ನೀತಿ ಮಾರ್ಗದಲ್ಲಿ ನಿನ್ನ ಹೃದಯವನ್ನು ನಡೆಸು.
[20] ಅತಿ ಮದ್ಯಪಾನ ಮಾಡುವವರಲ್ಲಿ ಅತಿ ಮಾಂಸಭಕ್ಷರಲ್ಲಿಯೂ ಸೇರಬೇಡ.
[21] ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು; ತೂಕಡಿಕೆಯು ಹರಕು ಬಟ್ಟೆಗಳನ್ನು ಹೊದಿಸುವದು.
[22] ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು, ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆ ಮಾಡಬೇಡ.
[23] ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ; ಆದರೆ ಅವುಗಳನ್ನು ಮಾರಬೇಡ.
[24] ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು; ಜ್ಞಾನಿಯಾದ ಮಗುವನ್ನು ಪಡೆದವನಿಗೆ ಅವನಿಂದ ಆನಂದವಾಗುವುದು.
[25] ನಿನ್ನ ತಂದೆತಾಯಿಗಳು ಸಂತೋಷಿಸುವರು; ನಿನ್ನ ಹೆತ್ತ ತಾಯಿ ಆನಂದಿಸುವಳು.
[26] ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ.
[27] ವೇಶ್ಯೆಯು ಆಳವಾದ ಕುಣಿ; ವ್ಯಭಿಚಾರಿಣಿಯು ಇಕ್ಕಟ್ಟಾದ ಗುಂಡಿ.
[28] ಕಳ್ಳನಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.
[29] ಯಾರಿಗೆ ಕಷ್ಟ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೊಣಗುಟ್ಟುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಯಾರಿಗೆ ಕೆಂಪೇರಿದ ಕಣ್ಣುಗಳು?
[30] ಮದ್ಯಪಾನದಲ್ಲಿ ಆಸಕ್ತರಾಗಿ, ಮಿಶ್ರ ಮದ್ಯಪಾನವನ್ನು ಕುಡಿಯ ಬಯಸುವವರೇ ಅಲ್ಲವೇ!
[31] ದ್ರಾಕ್ಷಾರಸವು ಕೆಂಪಾಗಿದ್ದು, ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ, ಅದನ್ನು ನೋಡಬೇಡ.
[32] ಕೊನೆಗೆ ಅದು ಹಾವಿನಂತೆ ಕಚ್ಚುವುದು ಮತ್ತು ಸರ್ಪದಂತೆ ವಿಷವುಕ್ಕಿಸುವುದು.
[33] ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ. ನಿಮ್ಮ ಮನಸ್ಸು ಗೊಂದಲಮಯ ವಿಷಯಗಳನ್ನು ಕಲ್ಪಿಸುತ್ತದೆ.
[34] ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇರುವಿ.
[35] “ಜನರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ನಾನು ಎಚ್ಚರವಾಗುವುದು ಯಾವಾಗ? ಪುನಃ ನಾನು ಅದನ್ನು ಕುಡಿದೇನು?” ಎಂದುಕೊಳ್ಳುವೆ.