[1] ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.
[2] ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ; ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ.
[3] ದುಷ್ಟತ್ವವು ಬಂದಾಗ ತಾತ್ಸಾರವೂ, ಅವಮಾನದೊಂದಿಗೆ ನಿಂದೆಯೂ ಬರುತ್ತವೆ.
[4] ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ, ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ.
[5] ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ, ದುಷ್ಟರಿಗೆ ಪಕ್ಷಪಾತ ತೋರಿಸುವುದು ಯುಕ್ತವಲ್ಲ.
[6] ಜ್ಞಾನಹೀನನ ತುಟಿಗಳು ಕಲಹದಲ್ಲಿ ಸೇರುವುದರಿಂದ ಏಟುಗಳನ್ನು ತಿನ್ನುವುದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.
[7] ಬುದ್ಧಿಹೀನನ ಬಾಯಿಯು ಅವನ ನಾಶನ; ಅವನ ತುಟಿಗಳು ಅವನ ಪ್ರಾಣಕ್ಕೆ ಪಾಶ.
[8] ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಹೊಟ್ಟೆಯ ಒಳಭಾಗಗಳಿಗೆ ಇಳಿದು ಹೋಗುವುವು.
[9] ತನ್ನ ಕೆಲಸದಲ್ಲಿ ಸೋಮಾರಿಯಾಗಿರುವವನು, ಕೆಡುಕನಿಗೆ ಸಹೋದರನಾಗಿದ್ದಾನೆ.
[10] ಯೆಹೋವ ದೇವರ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿ ಭದ್ರವಾಗಿರುತ್ತಾನೆ.
[11] ಧನವಂತರ ಸಂಪತ್ತು ಅವರಿಗೆ ಬಲವಾದ ಪಟ್ಟಣವೂ ಅವನ ಕಲ್ಪನೆಯಲ್ಲಿ ಅದು ಸುರಕ್ಷತೆಯ ಎತ್ತರವಾದ ಗೋಡೆಯೂ ಆಗಿದೆ.
[12] ನಾಶನಕ್ಕೆ ಮುಂಚೆ ಮನುಷ್ಯನ ಹೃದಯವು ಗರ್ವಿಷ್ಠವಾಗಿರುವುದು; ಸನ್ಮಾನಕ್ಕೆ ಮುಂಚೆ ದೀನತ್ವವು ಬರುತ್ತದೆ.
[13] ಕೇಳಿಸಿಕೊಳ್ಳದೆ ಉತ್ತರ ಕೊಡುವವರಿಗೆ ಅದು ಮೂರ್ಖತನವೂ, ಅವಮಾನವೂ ಆಗಿದೆ.
[14] ಮನುಷ್ಯನ ಆತ್ಮವು ಅಸ್ವಸ್ಥತೆಯನ್ನು ಸಹಿಸುವುದು; ಆದರೆ ಮುರಿದ ಆತ್ಮವನ್ನು ಸಹಿಸುವವರು ಯಾರು?
[15] ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
[16] ಕಾಣಿಕೆಯನ್ನು ಕೊಡುವವನಿಗೆ ಬಾಗಿಲು ತೆರೆಯುತ್ತದೆ; ಅದು ದೊಡ್ಡವರ ಸನ್ನಿಧಾನಕ್ಕೂ ಅವನನ್ನು ಕರೆದುಕೊಂಡು ಹೋಗುತ್ತದೆ.
[17] ಪ್ರತಿವಾದಿ ಬಂದು ಪರಿಶೀಲಿಸುವವರೆಗೆ, ಮೊದಲು ವಾದಿಸುವವನು ನ್ಯಾಯವಂತನೆಂದು ತೋರುತ್ತಾನೆ.
[18] ಚೀಟು ಹಾಕುವುದರಿಂದ ವ್ಯಾಜ್ಯಶಮನ; ಬಲಿಷ್ಠ ಪ್ರತಿವಾದಿಗಳ ವಿವಾದಗಳನ್ನು ಸಹ ಬಗೆಹರಿಸುತ್ತದೆ.
[19] ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಬೇಸರಗೊಂಡ ಸಹೋದರನನ್ನು ಗೆಲ್ಲುವುದು ಕಷ್ಟಕರ; ಅವರ ಕಲಹಗಳು ಕೋಟೆಯ ಬಾಗಿಲಿಗೆ ಅಗುಳಿಗಳಂತೆ ಇವೆ.
[20] ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿ ಹೊಂದುವುದು; ತನ್ನ ತುಟಿಗಳ ಆದಾಯದಿಂದ ಅವನು ತೃಪ್ತಿಹೊಂದುವನು.
[21] ನಾಲಿಗೆಗೆ ಮರಣ ಮತ್ತು ಜೀವದ ಶಕ್ತಿಯಿದೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.
[22] ಪತ್ನಿಯನ್ನು ದೊರಕಿಸಿಕೊಂಡವನು ಒಳ್ಳೆಯದನ್ನು ಸಂಪಾದಿಸಿದವನಾಗಿ, ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ.
[23] ಬಡವನು ಕರುಣೆಗಾಗಿ ವಿಜ್ಞಾಪನೆ ಮಾಡುತ್ತಾನೆ; ಆದರೆ ಧನಿಕನು ಕಠಿಣವಾಗಿ ಉತ್ತರ ಕೊಡುತ್ತಾರೆ.
[24] ವಿಶ್ವಾಸಕ್ಕೆ ಅರ್ಹರಲ್ಲದ ಸ್ನೇಹಿತರನ್ನು ಹೊಂದಿರುವವನು ಶೀಘ್ರವೇ ನಾಶವಾಗುತ್ತಾನೆ; ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.