Skip to content
Opens in a new window
Listen to this chapter • 4:12

[1] ಜ್ಞಾನವೆಂಬಾಕೆಯು ಕರೆಯುತ್ತಾಳಲ್ಲವೇ? ವಿವೇಕವೆಂಬ ಆಕೆಯು ಧ್ವನಿಗೈಯುತ್ತಾಳಲ್ಲವೇ?

[2] ಆಕೆಯು ರಾಜಮಾರ್ಗಗಳ ಮುಖ್ಯಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ ನಿಂತುಕೊಳ್ಳುತ್ತಾಳೆ.

[3] ಆಕೆ ಪಟ್ಟಣದ ಪ್ರವೇಶ ದ್ವಾರದಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಹೀಗೆ ಕೂಗುತ್ತಾಳೆ,

[4] “ಜನರೇ, ನಿಮ್ಮನ್ನೇ ಕರೆಯುತ್ತೇನೆ, ಮಾನವರಿಗಾಗಿಯೇ ಧ್ವನಿಗೈಯುತ್ತೇನೆ.

[5] ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ, ಜ್ಞಾನಹೀನರೇ, ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.

[6] ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು,

[7] ನನ್ನ ಬಾಯಿ ಸತ್ಯವನ್ನೇ ಆಡುವುದು, ದುಷ್ಟತನವು ನನ್ನ ತುಟಿಗಳಿಗೆ ಅಸಹ್ಯವಾಗಿದೆ.

[8] ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ, ಅವುಗಳಲ್ಲಿ ಕಪಟವೂ, ವಕ್ರತೆಯೂ ಇಲ್ಲ.

[9] ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ, ತಿಳಿವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವವು.

[10] ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಮತ್ತು ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ.

[11] ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.

[12] ಜ್ಞಾನವೆಂಬ ನನಗೆ ಜಾಣ್ಮೆಯೇ ನಿವಾಸ, ಯುಕ್ತಿಗಳ ತಿಳಿವಳಿಕೆಯನ್ನು ಹೊಂದಿದ್ದೇನೆ.

[13] ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.

[14] ಸದ್ಯೋಚನೆಯೂ, ಸುಜ್ಞಾನವೂ, ಸಾಮರ್ಥ್ಯವೂ ನನ್ನಲ್ಲಿವೆ, ವಿವೇಕವೂ ನಾನೇ.

[15] ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು.

[16] ನನ್ನ ಮೂಲಕ ಪ್ರಭುಗಳು, ನಾಯಕರು ಅಂತು ಭೂಪತಿಗಳೆಲ್ಲರೂ ದೊರೆತನ ಮಾಡುವರು.

[17] ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.

[18] ನನ್ನಲ್ಲಿ ಧನ, ಘನತೆ, ಶ್ರೇಷ್ಠಸಂಪತ್ತೂ, ನೀತಿಯೂ ಇರುತ್ತವೆ.

[19] ನನ್ನಿಂದಾಗುವ ಫಲವು ಬಂಗಾರಕ್ಕಿಂತಲೂ ಹೌದು ಅಪರಂಜಿಗಿಂತಲೂ ಉತ್ತಮ. ನನ್ನ ಮೂಲಕವಾದ ಆದಾಯವು ಚೊಕ್ಕ ಬೆಳ್ಳಿಗಿಂತಲೂ ಅಮೂಲ್ಯವಾಗಿದೆ.

[20] ನಾನು ಹಿಡಿದಿರುವ ದಾರಿಯು ನೀತಿಯೇ, ನ್ಯಾಯಮಾರ್ಗಗಳಲ್ಲಿ ನಡೆಯುತ್ತೇನೆ.

[21] ಹೀಗಿರಲು ನನ್ನನ್ನು ಪ್ರೀತಿಸುವವರಿಗೆ ಧನದ ಬಾಧ್ಯತೆಯನ್ನು ಅನುಗ್ರಹಿಸಿ, ಅವರ ಬೊಕ್ಕಸಗಳನ್ನು ತುಂಬಿಸುವೆನು.

[22] ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ.

[23] ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು.

[24] ಜಲನಿಧಿಗಳಾಗಲಿ, ನೀರು ತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು.

[25] ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ, ಬಯಲನ್ನಾಗಲಿ,

[26] ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು.

[27] ಆತನು ಸಾಗರದ ಮೇಲೆ ಚಕ್ರಾಕಾರವಾದ ಗೆರೆಯನ್ನು ಎಳೆದು, ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು.

[28] ಆತನು ಗಗನವನ್ನು ಮೇಲೆ ಸ್ಥಿರಪಡಿಸಿ, ಸಾಗರದ ಬುಗ್ಗೆಗಳನ್ನು ನೆಲೆಗೊಳಿಸಿದನು.

[29] ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ,

[30] ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ, ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ,

[31] ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ, ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.

[32] ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ.

[33] ನನ್ನ ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ.

[34] ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಿಲಿನ ನಿಲವುಗಳ ಹತ್ತಿರವಿದ್ದು, ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು.

[35] ಯಾವನು ನನ್ನನ್ನು ಹೊಂದುತ್ತಾನೋ ಅವನು ಜೀವವನ್ನು ಹೊಂದುತ್ತಾನೆ; ಅವನು ಯೆಹೋವನ ದಯೆಗೆ ಗುರಿಯಾಗುವನು.

[36] ಯಾವನು ನನಗೆ ತಪ್ಪುಮಾಡುತ್ತಾನೋ ಅವನು ತನ್ನ ಆತ್ಮಕ್ಕೆ ಕೇಡುಮಾಡಿಕೊಳ್ಳುತ್ತಾನೆ; ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”

ಜ್ಞಾನೋಕ್ತಿಗಳು — Chapters