[1] ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು, ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು.
[2] ವಿಷಯವನ್ನು ರಹಸ್ಯವಾಗಿಡುವುದು ದೇವರ ಮಹಿಮೆ, ವಿಷಯವನ್ನು ವಿಮರ್ಶೆಮಾಡುವುದು ರಾಜರ ಹಿರಿಮೆ.
[3] ಆಕಾಶವು ಉನ್ನತ, ಭೂಮಿಯು ಅಗಾಧ, ರಾಜರ ಹೃದಯವು ಅಗೋಚರ.
[4] ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯಾಗುವುದು.
[5] ರಾಜನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ, ಅವನ ಸಿಂಹಾಸನವು ಧರ್ಮದಿಂದ ಸ್ಥಿರವಾಗುವುದು.
[6] ರಾಜನ ಸನ್ನಿಧಾನದಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ, ಶ್ರೀಮಂತರಿಗೆ ಏರ್ಪಡಿಸಿರುವ ಸ್ಥಾನದಲ್ಲಿ ನಿಂತುಕೊಳ್ಳಬೇಡ.
[7] ನೀನು ಪ್ರಭುವನ್ನು ದರ್ಶನಮಾಡುತ್ತಿರಲು ಅವನ ಸಮಕ್ಷಮದಲ್ಲಿ ಕೆಳಗಣಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತಲೂ, “ಇನ್ನೂ ಮೇಲಕ್ಕೆ ಬಾ” ಎಂದು ಕರೆಯಿಸಿಕೊಳ್ಳುವುದು ಲೇಸು.
[8] ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ, ಅವನು ನಿನ್ನ ಮಾನ ಕಳೆದ ಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ, ನೋಡಿಕೋ.
[9] ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು, ಒಬ್ಬನ ಗುಟ್ಟನ್ನೂ ಬಯಲುಮಾಡಬೇಡ.
[10] ಅದನ್ನು ಕೇಳುವವನು ನಿನ್ನನ್ನು ದೂಷಿಸಾನು, ನಿನಗೆ ಬಂದ ಅಪಕೀರ್ತಿಯು ಹೋಗದು.
[11] ಸಮಯೋಚಿತವಾದ ಮಾತುಗಳು ಬೆಳ್ಳಿಯ ಕಟ್ಟಿನಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.
[12] ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ, ಅಪರಂಜಿಯ ಆಭರಣಕ್ಕೂ ಸಮಾನ.
[13] ಸುಗ್ಗೀಕಾಲದಲ್ಲಿ ಹಿಮದ ಶೀತವು ಹೇಗೋ ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ.
[14] ಬರೀ ಗಾಳಿಯ ಮೋಡಗಳು ಹೇಗೋ, ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ.
[15] ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು, ಮೃದುವಚನವು ಎಲುಬನ್ನು ಮುರಿಯುವುದು.
[16] ಜೇನು ಸಿಕ್ಕಿತೋ? ಮಿತವಾಗಿ ತಿನ್ನು, ಹೊಟ್ಟೆತುಂಬಾ ತಿಂದರೆ ಕಾರಿಬಿಟ್ಟೀಯೇ.
[17] ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ, ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.
[18] ನೆರೆಯವನ ಮೇಲೆ ಸುಳ್ಳುಸಾಕ್ಷಿಹೇಳುವವನು, ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ.
[19] ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, ಮುರುಕಹಲ್ಲು ಮತ್ತು ಜಾರುವ ಕಾಲು.
[20] ಮನಗುಂದಿದವನಿಗೆ ಸಂಗೀತಹಾಡುವುದು ಚಳಿದಿನದಲ್ಲಿ ಬಟ್ಟೆ ತೆಗೆದಂತೆ, ಗಾಯಕ್ಕೆ ಹುಳಿಹೊಯ್ದಂತೆ.
[21] ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು,
[22] ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಯೆಹೋವನೇ ನಿನಗೆ ಪ್ರತಿಫಲಕೊಡುವನು.
[23] ಉತ್ತರದ ಗಾಳಿ ಮಳೆ ಬರಮಾಡುವುದು, ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು.
[24] ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.
[25] ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
[26] ದುಷ್ಟರಿಂದ ಸೋತ ಶಿಷ್ಟನು, ಹಾಳು ಬಾವಿ ಮತ್ತು ತುಳಿದಾಡಿದ ಒರತೆ.
[27] ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವುದು ಮಾನವಲ್ಲ.
[28] ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.